Congrats guarantee: ಗುರುವಾರ ಫೈನಲ್ ಮೀಟಿಂಗ್: ಈ ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಜಾರಿ!?
ಬೆಂಗಳೂರು,ಮೇ 29; ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಐದು ಗ್ಯಾರಂಟಿ ಘೋಷಣೆಗಳಾದ ಗೃಹಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಯೋಜನೆಗಳನ್ನು ಚುನಾವಣೆಗೆ ಮುನ್ನ ಘೋಷಿಸಲಾಗಿತ್ತು. ಈ ಕುರಿತು ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಯವರು ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ವರದಿಯೊಂದನ್ನು ಸಿದ್ಧಪಡಿಸುವಂತೆ ತಿಳಿಸಿದರು.

ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಯವರು ಬುಧವಾರ ಎಲ್ಲ ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಯೋಜನೆಗಳನ್ನು ಯಾವ ರೀತಿ ಜಾರಿಗೊಳಿಸಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಯಾವ್ಯಾವ ನಿಬಂಧನೆಗಳನ್ನು ವಿಧಿಸಲಾಗುತ್ತದೆ ಹಾಗೂ ಅಧಿಕೃತವಾಗಿ ಯಾವಾಗಿನಿಂದ ಜಾರಿ ಎನ್ನುವುದು ಗುರುವಾರ ನಡೆಯುವ ಸಂಪುಟದಲ್ಲಿ ತಿಳಿಯಲಿದ್ದು, ಇನ್ನೂ ರಾಜ್ಯದ ವಿವಿಧೆಡೆ ವಿದ್ಯುತ್ ಬಿಲ್ ಪಾವತಿ ಕುರಿತಂತೆ ಹಾಗೂ ಬಸ್ ಟಿಕೆಟ್ ಖರೀದಿ ಕುರಿತಂತೆ ಅಧಿಕಾರಿಗಳ ಜತೆಗೆ ಸಾರ್ವಜನಿಕರು ಗಲಾಟೆ ನಡೆಸುತ್ತಿರುವುದು ಹೆಚ್ಚಾಗಿದೆ. ಅದು ಅಲ್ಲದೇ ಬಿಜೆಪಿ ನಾಯಕರು ಕರೆಂಟ್ ಬಿಲ್ ಕಟ್ಟಂದತೆ ಕರೆ ನೀಡುತ್ತಿದ್ದು, ಆದಷ್ಟು ಬೇಗ ಸಮರ್ಪಕವಾಗಿ ಜಾರಿಗೊಳಿಸುವ ಚಿಂತನೆಯನ್ನ ಸರ್ಕಾರ ನಡೆಸಿದೆ ಎನ್ನಲಾಗಿದೆ.
ಮೊದಲ ಸಂಪುಟದಲ್ಲೇ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಸರ್ಕಾರ ಹೇಳಿತ್ತಾದರೂ ತಾತ್ವಿಕ ಒಪ್ಪಿಗೆ ಮಾತ್ರ ನೀಡಿತ್ತು. ಹೀಗಾಗಿ ಸರ್ಕಾರದ ಮೇಲೆ ವಿಪರೀತ ಒತ್ತಡವಿದ್ದು, ಹಣಕಾಸು ಹೊಂದಿಸಿಕೊಂಡು ಯಾವ ರೀತಿ ಜಾರಿ ಮಾಡುತ್ತಿದೆ ಎಂಬ ಕುತೂಹಲವಿದೆ. ಈಗಾಗಲೇ ಐದು ಗ್ಯಾರಂಟಿಗಳ ಭರವಸೆಗಳನ್ನ ಈಡೇರಿಸುವುದು ಕಷ್ಟ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರತ್ಯುತ್ತರವಾಗಿ ಗುರುವಾರ ನಡೆಯುವ ಕ್ಯಾಬಿನೆಟ್ ನಲ್ಲಿ ಅಧಿಕೃತ ಘೋಷಣೆ ಜಾರಿಯಾಗಲಿದೆ ಎನ್ನಲಾಗಿದೆ.












Click it and Unblock the Notifications