ಕಾಂಗ್ರೆಸ್ ಪಕ್ಷಕ್ಕೆ ತನ್ನ ಕುರ್ಚಿ ಬಿಟ್ಟರೆ ರೈತರ ಆತ್ಮಹತ್ಯೆ ಮುಖ್ಯವಲ್ಲ: ಕೆ ಎಸ್ ಈಶ್ವರಪ್ಪ ವಾಗ್ದಾಳಿ
ಹಾಸನ,ನವೆಂಬರ್10: ಕಾಂಗ್ರೆಸ್ ಪಕ್ಷಕ್ಕೆ ತನ್ನ ಕುರ್ಚಿ ಬಿಟ್ಟರೆ ರೈತರ ಸಂಕಷ್ಟ ಮತ್ತು ಆತ್ಮಹತ್ಯೆ ಮುಖ್ಯವಲ್ಲ. ಮೊದಲು ರಾಜ್ಯದಿಂದ ನಷ್ಟದ ಪರಿಹಾರ ನೀಡಿದ ಬಳಿಕ ಕೇಂದ್ರದ ಹಣ ಕೇಳಲಿ ಎಂದು ಮಾಜಿ ಸಚಿವ ಈಶ್ವರಪ್ಪ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತು ಶುಕ್ರವಾರ ಕುಟುಂಬ ಸಮೇತ ಹಾಸನಾಂಬೆ ದೇವಿ ದರ್ಶನ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಒಬ್ಬನೇ ಒಬ್ಬ ಬಿಜೆಪಿ ಶಾಸಕ ಕಾಂಗ್ರೆಸ್ ಕಡೆ ಮುಖ ಮಾಡಿಲ್ಲ, ಅದೆಲ್ಲ ಸುಳ್ಳು. ಕಾಂಗ್ರೆಸ್ ಗೆ ಬರಗಾಲ, ಅನಾವೃಷ್ಠಿ, ಅತಿವೃತಿ, ರೈತ ಆತ್ಮಹತ್ಯೆ ಮಾಡಿಕೊಂಡರು ನಮಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂಬಂತಿದೆ. ಅವರಿಗೆ ಕುರ್ಚಿ ಮುಖ್ಯವಾಗಿದ್ದು, ಚುನಾವಣೆ ನಡೆದ ಮರುದಿನವೇ ಸಿಎಂ ಕುರ್ಚಿಗಾಗಿ ನಡೆದ ಕಸರತ್ತು ಎಲ್ಲರಿಗೂ ಗೊತ್ತಿದೆ. ಇಂತಹ ನೀಚ ರಾಜಕೀಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೈ ಕಮಾಂಡ್ ನಿರ್ಧಾರದ ಮೇಲೆಯೂ ನಾನೇ ಐದು ವರ್ಷ ಮುಖ್ಯಮಂತ್ರಿ ಎಂಬ ಬಹಿರಂಗ ಹೇಳಿಕೆ ನೀಡಿದ್ದು, ಇದೀಗ ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಯೋಚನೆ ಮಾಡಬೇಕಿದೆ. ಗುಂಪುಗಾರಿಕೆಗೆ ಕಾಂಗ್ರೆಸ್ ಸರಕಾರ ಶೀಘ್ರದಲ್ಲಿ ಪತನವಾಗಲಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದರು.
ಇನ್ನೂ ಬರಗಾಲಕ್ಕೆ ಪ್ರತಿ ಜಿಲ್ಲೆಗೂ 328 ಕೋಟಿ ಕೊಟ್ಟಿದ್ದೇನೆ ಎಂದು ಹೇಳಿದ್ದು, ಆದರೆ ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಮಾಡಿದಾಗ ಈವರೆಗೆ ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗೆ ಹಣ ನೀಡಲ್ಲ. ಕೇವಲ ಮಾಧ್ಯಮದ ಹೇಳಿಕೆ ನೀಡಿ ಜನರಿಗೆ ವಂಚಿಸುವ ಕೆಲಸ ಮಾಡಿದ್ದಾರೆ. ತಮ್ಮ ಎಲ್ಲಾ ವೈಫಲ್ಯಗಳನ್ನು ಮುಚ್ಚಿಹಾಕಲು ಎಲ್ಲದಕ್ಕೂ ಕೇಂದ್ರದ ಮೇಲೆ ಬೆಟ್ಟು ತೋರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರದ ಹಣವನ್ನು ನೀಡಲಿ ಆಮೇಲೆ ಕೇಂದ್ರವನ್ನು ಕೇಳಲಿ ಎಂದು ಗುಡುಗಿದರು.
ಹಾಸನಾಂಬೆ ದರ್ಶನ ನನ್ನ ಜೀವನದ ಸೌಭಾಗ್ಯ, ತನ್ನ ಜೀವನದಲ್ಲಿ ಪ್ರತಿ ವರ್ಷ ಕುಟುಂಬ ಸಮೇತರಾಗಿ ದರ್ಶನ ಪಡೆಯುತ್ತಿದ್ದೇವೆ. ತನ್ನ ಹುಟ್ಟಿನಿಂದ ಈವರೆಗೂ ಈ ವರ್ಷದಷ್ಟು ಬರಗಾಲ ನೋಡಿಲ್ಲ. ತಾಯಿ ಹಾಸನಾಂಬೆ ಬರಗಾಲಕ್ಕೆ ಮುಕ್ತಿ ನೀಡಿ, ಜನರಿಗೆ ಸಮೃದ್ಧ ಜೀವನ ನಡೆಸಲು ಎಲ್ಲಾ ರೀತಿಯ ಸೌಕರ್ಯ ನೀಡಲಿ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಅಂತಹ ಭಯೋತ್ಪಾದಕ ಚಟುವಟಿಕೆಗಳಿಗೆ ಸೆಡ್ಡು ಒಡೆಯುವ ಸಲುವಾಗಿ ಹಾಸನಾಂಬೆ ಅವತಾರ ತಳಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.












Click it and Unblock the Notifications