Karnataka Elections: ಡಾ.ಎಚ್.ಸಿ.ಮಹದೇವಪ್ಪ ಪುತ್ರಗೆ ಮತ್ತೆ ನಿರಾಸೆ

ಬೆಂಗಳೂರು, ಮಾರ್ಚ್ 25: ಮಾಜಿ ಲೋಕೋಪಯೋಗಿ ಇಲಾಖೆಯ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪಗೆ, ಪಕ್ಷ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಆದರೆ, ಅವರ ಪುತ್ರ ಸುನಿಲ್ ಬೋಸ್ ಗೆ ಮತ್ತೆ ನಿರಾಸೆಯಾಗಿದೆ. ಅವರು ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಕಾಂಗ್ರೆಸ್ ಬಿಡುಗಡೆ ಮಾಡಿರುವ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತಿ.ನರಸೀಪುರ (ಮೀಸಲು) ಕ್ಷೇತ್ರದಿಂದ ಡಾ.ಎಚ್.ಸಿ.ಮಹದೇವಪ್ಪನವರಿಗೆ ಟಿಕೆಟ್ ನೀಡಲಾಗಿದೆ. ಇನ್ನು, ಮತ್ತೊಂದು ಮೀಸಲು ಕ್ಷೇತ್ರವಾದ ನಂಜನಗೂಡಿನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಧ್ರುವನಾರಾಯಣ ಅವರ ಪುತ್ರ ದರ್ಶನ್ ಧೃವನಾರಾಯಣ ಅವರಿಗೆ ನೀಡಲಾಗಿದೆ. ಧ್ರುವನಾರಾಯಣ ಅವರ ನಿಧನದಿಂದ ಬಹುತೇಕ ಅವರ ಪುತ್ರನಿಗೆ ಟಿಕೆಟ್ ಎನ್ನುವುದು ಕನ್ಫರ್ಮ್ ಆಗಿತ್ತು.

h c mahadevappa

ತಿ.ನರಸೀಪುರದಿಂದ ಮಹಾದೇವಪ್ಪ ಮತ್ತು ನಂಜನಗೂಡಿನಿಂದ ಅವರ ಪುತ್ರ ಸುನಿಲ್ ಬೋಸ್ ಟಿಕೆಟಿಗಾಗಿ ಪ್ರಯತ್ನ ನಡೆಸಿದ್ದರು. ಆದರೆ, ನಂಜನಗೂಡಿನಿಂದ ಧೃವನಾರಾಯಣ, ಕಳಲೆ ಶ್ರೀನಿವಾಸಮೂರ್ತಿ ಕೂಡಾ ಟಿಕೆಟಿಗಾಗಿ ಪ್ರಯತ್ನಿಸುತ್ತಿದ್ದರು. ಡಿ.ಕೆ.ಶಿವಕುಮಾರ್ ಅವರ ಆಪ್ತರಾಗಿದ್ದ ಧೃವನಾರಾಯಣ ಮತ್ತು ಸಿದ್ದರಾಮಯ್ಯನವರ ಆಪ್ತರಾಗಿದ್ದ ಮಹದೇವಪ್ಪನವರ ಪುತ್ರ ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎನ್ನುವುದು ನಿಶ್ಚಿತವಾಗಿತ್ತು.

ಆದರೆ, ಬದಲಾದ ಸನ್ನಿವೇಶದಲ್ಲಿ ಧೃವನಾರಾಯಣ ಪುತ್ರನಿಗೇ ಟಿಕೆಟ್ ನೀಡುವಂತೆ ಮಹದೇವಪ್ಪ ಹೇಳಿಕೆಯನ್ನು ನೀಡಿದ್ದರು. ಈ ವಿಚಾರ ಆ ಭಾಗದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಧೃವನಾರಾಯಣ ಅವರ ಅಕಾಲಿಕ ಸಾವಿಗೆ ಮಹದೇವಪ್ಪನವರೇ ಪರೋಕ್ಷ ಕಾರಣ ಎನ್ನುವ ಆಪಾದನೆಯೂ ಕೇಳಿ ಬಂದಿತ್ತು. ಇದನ್ನು ಖುದ್ದು ಮಹದೇವಪ್ಪನವರೇ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.

"ಯಾರೋ ಕೆಲವರು ಧೃವನಾರಾಯಣ ಅವರ ಸಾವಿಗೆ ಮಹದೇವಪ್ಪನವರೇ ಕಾರಣ ಎಂದು ಸುದ್ದಿ ಹರಡಿಸಲು ಶುರು ಮಾಡಿದಾಗ ನನಗೆ ಅತೀವವಾದ ಬೇಸರವಾಯಿತು. ನಂಜನಗೂಡು ವಿಷಯಕ್ಕೆ ಬರುವುದಾದರೆ ಅಲ್ಲಿ ಹಿಂದೆ ಉಪ ಚುನಾವಣೆ ಸಂದರ್ಭವು ಏರ್ಪಟ್ಟಾಗ ನಮ್ಮ ಸುನಿಲ್ ಬೋಸ್ ಗೆ ಪಕ್ಷ ಸಂಘಟನೆ ಮಾಡಿ ಎಂದು ಆದೇಶ ಬಂದಿತ್ತು, ಅದರಂತೆಯೇ ಅವರು ಪಕ್ಷ ಸಂಘಟನೆಯಲ್ಲಿದ್ದಾಗ ಆತನಿಗೇ ಟಿಕೆಟ್ ನೀಡಿ ಎಂಬ ಕೂಗೂ ಸಹ ಇತ್ತು" ಎಂದು ಡಾ.ಎಚ್.ಸಿ.ಮಹದೇವಪ್ಪನವರು ಹೇಳಿದ್ದರು.

ಸುನಿಲ್ ಬೋಸ್ ಟಿಕೆಟಿಗಾಗಿ ಕಳೆದ ಬಾರಿಯೂ ಪ್ರಯತ್ನವನ್ನು ನಡೆಸಿದ್ದರು. ಆದರೆ, ಕಳೆದ ಬಾರಿ ಅವರಿಗೆ ಟಿಕೆಟ್ ಮಿಸ್ ಆಗಿತ್ತು. ಈ ಬಾರಿ ತಿ.ನರಸೀಪುರ ಅಥವಾ ನಂಜನಗೂಡಿನಿಂದ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಆಗಿತ್ತು. ಆದರೆ, ಅವರ ತಂದೆ ಮಹದೇವಪ್ಪನವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ನೀಡಿದೆ. ಆ ಮೂಲಕ, ಸುನಿಲ್ ಬೋಸ್ ಮತ್ತೆ ನಿರಾಸೆ ಪಡುವಂತಾಗಿದೆ.

"ರಾಜಕೀಯದ ಆಚೆಗೂ ಕೂಡಾ ಮಾನವೀಯತೆ ಎಂಬುದು ಅತಿ ಮುಖ್ಯವಾದ ಸಂಗತಿಯಾಗಿರುವ ಕಾರಣ ಶ್ರೀ ಧೃವ ನಾರಾಯಣ್ ಅವರ ಅಗಲಿಕೆಯ ಈ ಸಂದರ್ಭದಲ್ಲಿ ರಾಜಕೀಯಕ್ಕಿಂತಲೂ ಮಾನವೀಯತೆ ಮುಖ್ಯವೆಂದು ನಂಜನಗೂಡು ಕ್ಷೇತ್ರದಲ್ಲಿ ಅವರ ಪುತ್ರ ದರ್ಶನ್ ಅವರನ್ನು ಬೆಂಬಲಿಸಿರುತ್ತೇನೆ".

"ಈ ನಿಟ್ಟಿನಲ್ಲಿ ದಯಮಾಡಿ ಯಾರೂ ಕೂಡಾ ಗೊಂದಲ ಸೃಷ್ಟಿ ಮಾಡದೇ ಸಮಚಿತ್ತತೆಯಿಂದ ವರ್ತಿಸಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೂ ನಂಜನಗೂಡು ಟಿಕೆಟ್ ವಿಷಯದಲ್ಲಿ ನಾನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ" ಎಂದು ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+