ಕಚೇರಿ ಫೈಟ್ : ಜೆಡಿಎಸ್ ವಿರುದ್ಧ ನ್ಯಾಯಾಂಗ ನಿಂದನೆ ದೂರು
ಬೆಂಗಳೂರು, ಜ. 12 : ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯನ್ನು ತೆರವುಗೊಳಿಸದ ಜೆಡಿಎಸ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರಿನಲ್ಲಿ ಕಚೇರಿಗಾಗಿ ಹುಡುಕಾಟ ಮುಂದುವರೆಸಿರುವ ಜೆಡಿಎಸ್ ಕಚೇರಿಯನ್ನು ಇನ್ನೂ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿಲ್ಲ.
ಸೋಮವಾರ ಕಾಂಗ್ರೆಸ್ ಪರ ವಕೀಲರು ಸುಪ್ರೀಂಕೋರ್ಟ್ ಮತ್ತು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಜೆಡಿಎಸ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಡಿ.31ರೊಳಗೆ ಪಕ್ಷದ ಕಚೇರಿಯನ್ನು ಖಾಲಿ ಮಾಡಬೇಕು ಎಂಬ ಆದೇಶವನ್ನು ಜೆಡಿಎಸ್ ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. [ಜೆಡಿಎಸ್ ಗೆ ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ]

ನ್ಯಾಯಾಲಯದ ಆದೇಶವನ್ನು ಪಾಲಿಸದ ಜೆಡಿಎಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕಚೇರಿಯನ್ನು ತೆರವು ಮಾಡಿ ಕಾಂಗ್ರೆಸ್ ವಶಕ್ಕೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಇದರಿಂದ ಜೆಡಿಎಸ್‌ಗೆ ಹೊಸ ಸಂಕಷ್ಟ ಎದುರಾಗಿದೆ. [ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?]
2014ರ ಜನವರಿ 21ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಕಾಂಗ್ರೆಸ್ಸಿಗೆ ಸೇರಿದ್ದಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಜೆಡಿಎಸ್ ಕಚೇರಿ ಇರುವ ಸ್ಥಳ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂಬ ಸಿಟಿ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ 2014ರ ಡಿ.31ರೊಳಗೆ ಕಚೇರಿ ಖಾಲಿ ಮಾಡುವಂತೆ ಆದೇಶಿಸಿತ್ತು. [ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಗೆ ಜಾಗ ಸಿಕ್ಕಿತು]
ಹೈಕೋರ್ಟ್ ತಡೆಯಾಜ್ಞೆ : ಜೆಡಿಎಸ್ ನಾಯಕರ ಮನವಿಯಂತೆ ಪಕ್ಷದ ಕಚೇರಿ ನಿರ್ಮಿಸಲು ಬಿಬಿಎಂಪಿ ವೈಯಾಲಿಕಾವಲ್‌ನ ಸರ್ವೆ ಸಂಖ್ಯೆ 1 ಹಾಗೂ 4 ರಲ್ಲಿರುವ 1.1 ಎಕರೆ ಜಮೀನನ್ನು ಜೆಡಿಎಸ್ ಕಚೇರಿಗೆ 30 ವರ್ಷಗಳ ಅವಧಿಗೆ ಮಂಜೂರು ಮಾಡುವ ನಿರ್ಣಯವನ್ನು ಕೈಗೊಂಡಿತ್ತು.
ಆದರೆ, ಇದರ ವಿರುದ್ಧ ಕೆ.ಜಿ.ಚಂದ್ರಶೇಖರ ಭಟ್ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ಬಿಬಿಎಂಪಿ ನೀಡಿದ್ದ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದ್ದರಿಂದ ಜೆಡಿಎಸ್‌ಗೆ ಅಧಿಕೃತವಾದ ಕಚೇರಿ ಇನ್ನೂ ಲಭ್ಯವಾಗಿಲ್ಲ.
ಸುಪ್ರೀಂಕೋರ್ಟ್ ಆದೇಶದಂತೆ ಜೆಡಿಎಸ್ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಚೇರಿಯನ್ನು ಡಿ.31ರೊಳಗೆ ಖಾಲಿ ಮಾಡಿ ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಿತ್ತು. ಆದರೆ, ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಜೆಡಿಎಸ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಗಾಗಿ ಕಾಯುತ್ತಿದೆ.












Click it and Unblock the Notifications