ಬಿಜೆಪಿ ರಾಜ್ಯಾಧ್ಯಕ್ಷ ರೇಸ್‌ನಲ್ಲಿರುವ ಯತ್ನಾಳ್ ವಿರುದ್ಧ ಕೇಸ್ ದಾಖಲು
ಬಿಜೆಪಿ ಬಣ ಬಡಿದಾಟದಲ್ಲಿ ಸಖತ್ ಸದ್ದು ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯತ್ನಾಳ್ ಅವರು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ.
ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ದೇಶದ ಮೊದಲ ಪ್ರಧಾನಿಗಳಾದ ಜವಾಹರ ಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಕೊಲ್ಲಿಸಿದ್ದು ನೆಹರೂ ಎನ್ನುವ ಮೂಲಕ ಯತ್ನಾಳ್ ಅಕ್ಷಮ್ಯ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ದೂರಿದೆ. ಯತ್ನಾಳ್ ಅವರನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ನಾಯಕರು ನಾಲಿಗೆ ಇದೆ ಎಂಬ ಕಾರಣಕ್ಕೆ ಎಲ್ಲೆಂದರಲ್ಲಿ ಅದನ್ನ ಹೊರಚಾಚಿ ವಿಷ ಕಾರುವ ವಿಕೃತ ಮನಸ್ಥಿತಿಗೆ ತಲುಪಿದ್ದಾರೆ. ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು "ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿಸಿದ್ದು ನೆಹರೂ" ಎನ್ನುವ ಮೂಲಕ ಸ್ವತಂತ್ರ ಭಾರತದ ಮೊದಲ "ಭಯೋತ್ಪಾದಕ" ನಾಥೂರಾಮ್ ಗೋಡ್ಸೆಯನ್ನು ಸಮರ್ಥಿಸುವ ಅತ್ಯಂತ ನೀಚತನ ಮೆರೆದಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಕ್ಷಮಾಪಣೆ ಬರೆದುಕೊಟ್ಟ, ಅವರ ಮಾಹಿತಿದಾರರಾಗಿ ದೇಶದ್ರೋಹ ಎಸಗಿದ ಮಾತೃ ಬೇರಿನ ಹಿನ್ನೆಲೆಯ ಬಿಜೆಪಿಗರಿಗೆ ತಮ್ಮ ಸರ್ವಸ್ವವನ್ನೂ ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ಚೇತನಗಳ ಬಗ್ಗೆ ಗೌರವವಿರಲಾದರೂ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947ರಲ್ಲಿ ಅಲ್ಲ ಎಂದು ನೂರಾರು ವರ್ಷಗಳ ತ್ಯಾಗ ಬಲಿದಾನದ ಇತಿಹಾಸದ ಸಂಪೂರ್ಣ ಸ್ವಾತಂತ್ರ್ಯ ಚಳುವಳಿಯನ್ನೇ ಅಪಮಾನಿಸಿದವರಿಂದ ಪಾಠ ಹೇಳಿಸಿಕೊಂಡು ಬಂದ ಬಿಜೆಪಿಗರಿಂದ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ? ಎಂದು ವಾಗ್ದಾಳಿ ನಡೆಸಿದೆ.

ಗಾಂಧಿ-ನೆಹರೂ ಈ ದೇಶದ ಅಂತಃಸತ್ವ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧಿಯವರಿಗೆ ಹೆಗಲಿಗೆ ಹೆಗಲಾಗಿದ್ದವರು, ಅವರ ನೆರಳಿನಂತಿದ್ದವರು ಜವಾಹರ ಲಾಲ್ ನೆಹರೂ. ಅವರಿಬ್ಬರೂ ಕಾಂಗ್ರೆಸ್ ಎಂಬ ಆಲದ ಮರದ ತಾಯಿ ಬೇರಿನಂತಿದ್ದವರು. ಬ್ರಿಟೀಷರಿಂದ ಮಹಾತ್ಮ ಗಾಂಧಿಯವರು ತಮ್ಮ ಹೋರಾಟದ ಜೀವನದ 6 ವರ್ಷಗಳು ಸೆರೆವಾಸ ಅನುಭವಿಸಿದರೆ, ನೆಹರೂ ಅವರು 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜೊತೆಯಾಗಿಯೇ ದೇಶವನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಮಹಾಯಜ್ಞಕ್ಕೆ ಅಣಿಗೊಳಿಸಿದ್ದಾರೆ ಎಂದು ಇತಿಹಾಸವನ್ನು ಉಲ್ಲೇಖಿಸಿದೆ.
ಸ್ವಾತಂತ್ರ್ಯಾ ನಂತರ ಮಹಾತ್ಮರ ಆಶಯದಂತೆಯೇ ಭಾರತದ ಚುಕ್ಕಾಣಿ ಹಿಡಿದ ನೆಹರೂ ಅವರು ಗಾಂಧೀಜಿಯವರ ತತ್ವಾದರ್ಶಗಳ ಮೇಲೆಯೇ ಈ ದೇಶವನ್ನು ಮುನ್ನಡೆಸಿದ್ದಾರೆ. ಸರ್ದಾರ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಮೌಲಾನಾ ಆಜಾದ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರೊಂದಿಗೆ ಸೇರಿ ಈ ದೇಶಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಆದರೆ ಈ ಯಾವುದೇ ಮಹಾನ್ ನಾಯಕರ ಬಗ್ಗೆಯೂ ಬಿಜೆಪಿಗೆ ಕಿಂಚಿತ್ತು ಗೌರವವಿಲ್ಲ, ಕೃತಜ್ಞತಾ ಭಾವವಿಲ್ಲ. ಅವರೊಳಗೆ ತುಂಬಿರುವುದು ಕೇವಲ ದ್ವೇಷ, ಕೋಮುವಾದದ ವಿಷ. ಅವರ ಏಕೈಕ ಅಸ್ತ್ರ ಸುಳ್ಳು, ಚಾರಿತ್ರ್ಯವಧೆ, ಅಪಪ್ರಚಾರ ಎಂದು ಆಕ್ರೋಶ ಹೊರಹಾಕಿದೆ.












Click it and Unblock the Notifications