ಕಾಂಗ್ರೆಸ್ ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿರಲಿಲ್ಲ: ಸಿದ್ದರಾಮಯ್ಯ
ಭ್ರಷ್ಟಾಚಾರ ನಿಗ್ರಹಿಸಲು ಕಾಂಗ್ರೆಸ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ್ದು, ಲೋಕಾಯುಕ್ತ ಅಧಿಕಾರವನ್ನು ಕಸಿದುಕೊಂಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು, ಮಾರ್ಚ್ 6: ಬಿಜೆಪಿ ಆರೋಪಿಸಿದಂತೆ ಲೋಕಾಯುಕ್ತ ಸಂಸ್ಥೆಯನ್ನು ನಾವು ಮುಚ್ಚಿರಲಿಲ್ಲ. ಅದು ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಭ್ರಷ್ಟಾಚಾರ ನಿಗ್ರಹಿಸಲು ಕಾಂಗ್ರೆಸ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ್ದು, ಲೋಕಾಯುಕ್ತ ಅಧಿಕಾರವನ್ನು ಕಸಿದುಕೊಂಡಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲೇ ಲೋಕಾಯುಕ್ತ ಚೆನ್ನಾಗಿತ್ತು. ಇದೆಲ್ಲ ಗೊತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

'ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಎಸಿಬಿ ಬಂದ್ ಮಾಡಿದ್ದು ನ್ಯಾಯಾಲಯವೇ ಹೊರತು ಬಿಜೆಪಿ ಸರ್ಕಾರವಲ್ಲ. ಬಿಜೆಪಿಯವರಿಗೆ ಸುಳ್ಳು ಹೇಳುವುದು ಅಭ್ಯಾಸವಾಗಿದ್ದು ಅದು ಅವರ ಕುಲದೇವತೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಅವರನ್ನು ರಕ್ಷಿಸುತ್ತಿದ್ದು, ಅವರು ಎಲ್ಲಿದ್ದಾರೆಂದು ಬಿಜೆಪಿಗೆ ತಿಳಿದಿದೆ. ಮಾಡಾಳ್‌ಗಾಗಿ ಲುಕ್‌ಔಟ್ ನೋಟಿಸ್ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬೊಮ್ಮಾಯಿ ಅವರು ಎಲ್ಲಾ ಭ್ರಷ್ಟಾಚಾರ ಆರೋಪಗಳಿಗೆ ಪುರಾವೆ ಕೇಳುತ್ತಿದ್ದರು. ಈಗ ಶಾಸಕರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸಿಎಂ ಏನು ಕ್ರಮ ಕೈಗೊಂಡಿದ್ದಾರೆ? ಎಂದು ಪ್ರಶ್ನಿಸಿದರು. ಬಳಿಕ ಮಾರ್ಚ್ 9 ರಂದು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆ ನಡೆಸುವುದಾಗಿ ಸಿದ್ದರಾಮಯ್ಯ ಹೇಳಿದರು.
ಮೈಸೂರು-ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ವೇಯ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು. ಇದರಲ್ಲಿ ಸಂಸದ ಪ್ರತಾಪ್ ಸಿಂಹ ಅಥವಾ ಬಿಜೆಪಿ ಸರ್ಕಾರದ ಪಾತ್ರವಿಲ್ಲ. ಪ್ರತಾಪ್ ಸಿಂಹ ಅವರ ಲೋಕಸಭಾ ಕ್ಷೇತ್ರದ ಮಿತಿಯಲ್ಲಿ ಕೆಲವೇ ಕಿಲೋಮೀಟರ್ ಬರುತ್ತದೆ. ಆದರೆ ಅವರು ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.












Click it and Unblock the Notifications