ಫಲಿತಾಂಶಕ್ಕೂ ಮುನ್ನವೇ ತೆರಮರೆಯ ಕಸರತ್ತು ಆರಂಭಿಸಿದ ಕೈ-ಕಮಲ ಪಡೆ
ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ನೋಡಿದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸ್ಪಷ್ಟ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಅಂತಿಮ ಫಲಿತಾಂಶ ಪ್ರಕಟವಾಗುವ ಮೊದಲೇ ಕೆಲವು ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕುತ್ತಿವೆ.
ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಇಂತಿಷ್ಟು ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿದೆ. ಈ ಫಲಿತಾಂಶ ನಿಖರವಲ್ಲ ಎಂದು ಹೇಳಿ ನಿರಾಕರಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರ ಹಿಡಿಯಲು ಹವಣಿಸುತ್ತಿವೆ. ಈ ಕಾರಣದಿಂದ ಮ್ಯಾಜಿಕ್ ನಂಬರ್ 113 ಸ್ಥಾನ ಗಳಿಕೆಗಾಗಿ ತೆರೆ ಮರೆಯ ಕಸರತ್ತು ಆರಂಭಿಸಿವೆ.

ಬಹುಮತ ಸಾಬೀತಿಗೆ ಸಂಖ್ಯಾಬಲ ಇರುವಂತೆ ಬಿಜೆಪಿ-ಕಾಂಗ್ರೆಸ್ ನೋಡಿಕೊಳ್ಳುತ್ತಿವೆ. ಅದಕ್ಕಾಗಿ ಗೆಲ್ಲುವಂತಹ ಪಕ್ಷೇತರ ಅಭ್ಯರ್ಥಿಗಳಿಗೆ ಆಹ್ವಾನ ನೀಡಲು ದೂರವಾಣಿ ಕರೆ ಮೂಲಕ ಸಂಪರ್ಕಿಸಿವೆ ಎನ್ನಲಾಗಿದೆ. ಸ್ಥಳೀಯ ಮುಖಂಡರು, ಆಯಾ ಭಾಗದ ವರ್ಚಸ್ಸಿರುವ ಪಕ್ಷದ ನಾಯಕರಿಂದ ಪಕ್ಷೇತರ ಅಭ್ಯರ್ಥಿಗಳಿಗೆ ಬಲೆ ಬೀಸಲಾಗುತ್ತಿದೆ.
ಸಂಖ್ಯಾಬಲ ಹೆಚ್ಚಳಕ್ಕೆ ಪಕ್ಷಗಳ ಪ್ಲಾನ್
ಕಾಂಗ್ರೆಸ್ ಈಗಾಗಲೇ ಉತ್ತರ ಕರ್ನಾಟಕದ ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್‌ಐ ಚಿಕ್ಕನಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಅವರು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರವಾಗಿ ಕಣಕ್ಕಿಳಿದಿದ್ದರು. ಇವರು ವರದಾನವಾಗಬಹುದು ಎಂದು ನಂಬಿರುವ ಕಾಂಗ್ರೆಸ್ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಚಿಂತನೆ ನಡೆಸಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರನ್ನು, ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ರಾಮಕೃಷ್ಣ ದೊಡ್ಡಮನಿ, ಬೆಂಗಳೂರಿನ ಪುಲಕೇಶಿನಗರದ ಕ್ಷೇತ್ರದ ಅಖಂಡ ಶ್ರೀನಿವಾಸ್‌ಗೆ ಕಾಂಗ್ರೆಸ್ ನಾಯಕರು ಕರೆ ಮಾಡಿದ್ದಾರೆ ಎನ್ನಲಾಗಿದೆ.
ಇತ್ತ ಶುಕ್ರವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಹರಪನಹಳ್ಳಿ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರಿಗೆ ಕರೆ ಮಾಡಿ ಮಾತನಾಡಿದ್ದು ಸಹ ಕುತೂಹಲ ಕೆರಳಿಸಿದೆ. ಎರಡು ಪಕ್ಷಗಳ ಈ ನಡೆಯಿಂದ ಪಕ್ಷೇತರ ಅಭ್ಯರ್ಥಿಗಳ ಗೊಂದಲಕ್ಕೀಡಾಗುವ ಸಾಧ್ಯತೆ ಇದೆ. ಆದರೆ ರಾಜಕೀಯ ಭವಿಷ್ಯದ ಮೇಲೆ ಪಕ್ಷೇತರ ಅಭ್ಯರ್ಥಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕುರಿತು ಎಲ್ಲವು ಮೇ 12ರ ನಂತರವೇ ಸ್ಪಷ್ಟವಾಗಲಿದೆ.
ಬಿಜೆಪಿ ನಾಯಕರು ಸಹ ಗಂಗಾವತಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜನಾರ್ಧನ ರೆಡ್ಡಿಗೆ ಮಣೆ ಹಾಕುತ್ತಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ಈಗಾಗಲೇ ಸಂಪರ್ಕಿಸಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.












Click it and Unblock the Notifications