ನೈತಿಕತೆಯಿಂದ ಆಪಾದನೆ ಮಾಡಿ ಹೋರಾಟ ಮಾಡಬೇಕು: ಕಾಂಗ್ರೆಸ್ ವಿರುದ್ದ ಸಿಎಂ ಬೊಮ್ಮಾಯಿ ವಾಗ್ದಾಳಿ
ಕಾಂಗ್ರೆಸ್ ನಿಂದ ಬಂದ್ ಮಾಡುವ ನಾಟಕ ಮಾಡಲಾಗುತ್ತಿದ್ದು, ಬಂದ್ ಯಶಸ್ವಿಯಾಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮೈಸೂರು, ಮಾರ್ಚ್ 7 : ಲೋಕಾಯುಕ್ತವನ್ನು ಕಡೆಗಣಿಸಿ, ಎಸಿಬಿ ಮೂಲಕ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಿಸುವ ಕಾಂಗ್ರೆಸ್ ನ ನಿಲುವು ಸ್ಪಷ್ಟವಾಗಿದೆ. ಎಸಿಬಿ ಮುಂದುವರೆಯ ಬೇಕೆನ್ನುವುದು ಕಾಂಗ್ರೆಸ್ ನವರ ಅಜೆಂಡಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮ ವನ್ನು ತೆಗೆದು , ಲೋಕಾಯುಕ್ತವನ್ನು ಇದ್ದೂ ಇಲ್ಲದ ಹಾಗೆ ಮಾಡಿದ್ದರು. ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ, ಸಂಸ್ಥೆಯನ್ನು ಬಂದ್ ಮಾಡಿಲ್ಲ ಎಂದು ಮಾತಾಡುವುದು ಸರಿಯಲ್ಲ. ಹಾಗಾದರೆ ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಪ್ರಕರಣಗಳನ್ನು ಎಸಿಬಿ ವಹಿಸಿದ ಕಾರಣವೇನೆಂದು ಪ್ರಶ್ನಿಸಿದರು.

ಲೋಕಾಯುಕ್ತವನ್ನು ಹೈಕೋರ್ಟ್ ಉಳಿಸಿಕೊಂಡಿದ್ದೇ ಹೊರತು, ಬಿಜೆಪಿ ಸರ್ಕಾರವಲ್ಲ ಎಂಬುದಕ್ಕೆ ಉತ್ತರಿಸಿ, ಲೋಕಾಯುಕ್ತ ಉಳಿಸಿಕೊಳ್ಳುವ ಬಗ್ಗೆ ಹೈಕೋರ್ಟ್ ನ ತೀರ್ಮಾನದ ನಂತರ ಲೋಕಾಯುಕ್ತವನ್ನು ಚುರುಕುಗೊಳಿಸಲಾಯಿತು. ಆದರೆ ನ್ಯಾಯಾಲಯದ ತೀರ್ಪಿನಂತೆ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಶಕ್ತಿ ತುಂಬಿರುವುದು ನಮ್ಮ ನೈತಿಕತೆಯನ್ನು ಪ್ರದರ್ಶಿಸಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ರಾಜ್ಯ ಸರ್ಕಾರ ಮಾಡುವುದಲ್ಲ. ಸಿದ್ದರಾಮಯ್ಯ ಅವರ ಅವಧಿಗಿಂತಲೂ ಮುಂಚಿತವಾಗಿ ಮೈಸೂರು-ಬೆಂಗಳೂರು ಅಷ್ಟಪಥ ಹೆದ್ದಾರಿ ನಿರ್ಮಾಣದ ಯೋಜನೆಯಿತ್ತು. ಆದರೆ ಈ ರಸ್ತೆ ನಿರ್ಮಾಣ ಯೋಜನೆ ಯಾರ ಅವಧಿಯಲ್ಲಿ ಅನುದಾನ, ಅನುಷ್ಠಾನವಾಯಿತು ಎಂಬುದನ್ನು ಜನರು ಗಮನಿಸಿರುತ್ತಾರೆ. ಆದ್ದರಿಂದ ಪ್ರತಿ ವಿಷಯದಲ್ಲಿಯೂ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಊಟೋಪಚಾರಕ್ಕಾಗಿ ಮಾಡಿರುವ ವೆಚ್ಚಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆಯಾಗಿದ್ದು, ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ದಾಖಲೆಗಳನ್ನು ಪರಿಶೀಲಿಸಿ, ಸತ್ಯಾಂಶ ಕಂಡುಬಂದರೆ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ನವರು ಬಂದ್ ಗೆ ಕರೆ ನೀಡಿರುವ ಬಗ್ಗೆ ಉತ್ತರಿಸಿ, ಕಾಂಗ್ರೆಸ್ ನಿಂದ ಬಂದ್ ಮಾಡುವ ನಾಟಕ ಮಾಡಲಾಗುತ್ತಿದ್ದು, ಬಂದ್ ಯಶಸ್ವಿಯಾಗುವುದಿಲ್ಲ. ನೈತಿಕತೆಯಿಂದ ಆಪಾದನೆ ಮಾಡಿ ಹೋರಾಟ ಮಾಡಬೇಕು. ಕಾಂಗ್ರೆಸ್ ನವರು ಭ್ರಷ್ಟಾಚಾರದಲ್ಲಿ ಕೈಯನ್ನು ಕಪ್ಪು ಮಾಡಿಕೊಂಡಿದ್ದು, ಇವರ ಬಂದ್ ಕರೆಗೆ ಜನ ಸ್ಪಂದಿಸುವುದಿಲ್ಲ. ತಮ್ಮ ಭ್ರಷ್ಟಾಚಾರದಿಂದಲೇ ಕಾಂಗ್ರೆಸ್ ಸೋಲನುಭವಿಸಿದೆ ಎಂದರು.











Click it and Unblock the Notifications