ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ; ಪಕ್ಷಕ್ಕೆ ತಟ್ಟಿದ ಬಂಡಾಯದ ಬಿಸಿ!
ಬೆಂಗಳೂರು, ಏಪ್ರಿಲ್ 06; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಗುರುವಾರ 42 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಮೇ 10ರ ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ.
ಮಂಗಳವಾರದಿಂದ ಸರಣಿ ಸಭೆ ನಡೆಸಿ, ಅಳೆದು ತೂಗಿ ಎಲ್ಲಾ ಲೆಕ್ಕಾಚಾರ ಹಾಕಿ ಗುರುವಾರ ಎಐಸಿಸಿ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ ಬುಡಮೇಲು ಆಗಿದ್ದು, ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ. 224 ಕ್ಷೇತ್ರಗಳ ಪೈಕಿ ಇನ್ನೂ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಬೇಕಿದೆ.

ಗುರುವಾರ 2ನೇ ಪಟ್ಟಿ ಪ್ರಕಟವಾದ ಬಳಿಕ ಹಲವು ಕ್ಷೇತ್ರಗಳಲ್ಲಿ ಅಸಮಾಧಾನ ಎದ್ದಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಕನ್ನಡದ ಹಿರಿಯ ನಟ ದೊಡ್ಡಣ್ಣ ಅಳಿಯ ಕೆ. ಸಿ. ವಿರೇಂದ್ರ (ಪಪ್ಪಿ) ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್‌ಸಿ ರಘು ಆಚಾರ್ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಂಬಿಸಿ ಕುತ್ತಿಗೆ ಕೊಯ್ದ ಅಧ್ಯಕ್ಷ" ಎಂದು ರಘು ಆಚಾರ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದರು. "ಎಂಎಲ್‌ಸಿಯಾಗಿದ್ದ ನನಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಹೇಳಿದ್ದರು. 2ನೇ ಬಾರಿ ಎಂಎಲ್‌ಸಿ ಆಗುವುದು ಬೇಡ ಎಂದು ನಾಯಕರು ಹೇಳಿ ನಂಬಿಸಿ, ಅರ್ಧ ದಾರಿಯಲ್ಲೇ ಕತ್ತು ಕೊಯ್ದರು" ಎಂದು ಆರೋಪಿಸಿದರು.

ರಘು ಆಚಾರ್ ಬೆಂಬಲಿಗರು ಅವರ ಮನೆ ಮುಂದೆ ಜಮಾವಣೆಗೊಂಡಿದ್ದರು. ಕಾಂಗ್ರೆಸ್ ಸ್ಟಿಕ್ಕರ್ ಇರುವ ಫೋಟೋಗಳನ್ನು ಕಿತ್ತು ಆಕ್ರೋಶ ಹೊರಹಾಕಿದರು. ಶೀಘ್ರವೇ ಬೆಂಬಲಿಗರ ಜೊತೆ ರಘು ಆಚಾರ್ ಸಭೆ ನಡೆಸಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.
ಕಲಘಟಗಿಯಲ್ಲೂ ಅಸಮಾಧಾನ; ಇನ್ನು ಕಲಘಟಗಿ ಕ್ಷೇತ್ರದಲ್ಲಿ ಸಂತೋಷ್ ಎಸ್. ಲಾಡ್ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿ ಅಸಮಾಧಾನಗೊಂಡಿದ್ದಾರೆ. ದೆಹಲಿಯಿಂದ ಅವರು ಹುಬ್ಬಳ್ಳಿಗೆ ವಾಪಸ್ ಆಗುತ್ತಿದ್ದಾರೆ. ಇಂದು ರಾತ್ರಿಯೇ ಬೆಂಬಲಿಗರ ಸಭೆಯನ್ನು ಅವರು ಕರೆದಿದ್ದು, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಹಬ್ಬಿವೆ.
ಬಾದಾಮಿಯಲ್ಲೂ ಬಂಡಾಯ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಚಿವ ಬಿ. ಬಿ. ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಬಿ. ಚಿಮ್ಮನಕಟ್ಟಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
ಸಿದ್ದರಾಮಯ್ಯ ಮತ್ತೊಮ್ಮೆ ಬಾದಾಮಿಯಿಂದ ಕಣಕ್ಕಿಳಿಯಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿ ಧರಣಿ ಮಾಡಿದ್ದರು. ಆದರೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ವರುಣದಿಂದ ಅವರು ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ 2ನೇ ಪಟ್ಟಿಯಲ್ಲಿ ಮತ್ತೊಂದು ಕ್ಷೇತ್ರದಿಂದ ಅವರು ಕಣಕ್ಕಿಳಿಯುವ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇತ್ತು, ಅದು ಹುಸಿಯಾಗಿದೆ.
ಕಾಂಗ್ರೆಸ್ 2ನೇ ಪಟ್ಟಿಯಲ್ಲಿಯೂ ಕೋಲಾರ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಯಾರು? ಎಂಬುದು ತೀರ್ಮಾನವಾಗಿಲ್ಲ. ಅಲ್ಲದೇ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರಾಳಿ ಯಾರು? ಎಂಬುದು ಅಂತಿಮವಾಗಿಲ್ಲ. ಮಾಜಿ ಸಚಿವ ವಿನಯ್ ಕುಲಕರ್ಣಿ ಬಸವರಾಜ ಬೊಮ್ಮಾಯಿ ವಿರುದ್ಧ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಅವರಿಗೆ 2ನೇ ಪಟ್ಟಿಯಲ್ಲಿ ಧಾರವಾಡ ಕ್ಷೇತ್ರದ ಟಿಕೆಟ್ ನೀಡಲಾಗಿದೆ.











Click it and Unblock the Notifications