ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ತಡವಾಗ್ತಿರೋದು ಏಕೆ? ನಡಿತಿದ್ಯಾ ಸಿದ್ದು, ಡಿಕೆಶಿ ನಡುವೆ ಜಂಗಿಕುಸ್ತಿ?
ರಾಜ್ಯ ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಗಳ ಸಂಖ್ಯೆ ಹೆಚ್ಚಾಗಿದ್ದು, ಜಾತಿವಾರು ಟಿಕೆಟ್‌ನೀಡಲು ಒತ್ತಡ ಹಾಕುತ್ತಿದ್ದಾರೆ.
ಬೆಂಗಳೂರು,ಮಾರ್ಚ್15: 2023 ರ ವಿಧಾನಸಭಾ ಚುನಾವಣೆ ರಣಕಣ ಜೋರಾಗಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಇತ್ತ ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಯಾರಿಗೆ ಟಿಕೆಟ್ ನೀಡಬೇಕು, ಯಾರಿಗೆ ಮಣೆ ಹಾಕಬೇಕು ಎಂಬ ಗೊಂದಲ ರಾಜ್ಯ ಕಾಂಗ್ರೆಸ್ ನಲ್ಲಿ ಜೋರಾಗಿದೆ.
ಟಿಕೆಟ್ ಕುರಿತು ಈಗಾಗಲೇ ಸಾಲು ಸಾಲು ಸಭೆ ನಡೆಸಿರುವ ಕಾಂಗ್ರೆಸ್ ನಲ್ಲಿ ಜಾತಿವಾರು ಟಿಕೆಟ್ ಕುರಿತು ಸಾಕಷ್ಟು ಲಾಭಿಗಳು ನಡೆಯುತ್ತಿವೆ. ತಮ್ಮ ತಮ್ಮ ಸಮುದಾಯದವನ್ನ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಾತಿವಾರು ಟಿಕೆಟ್ ಗಾಗಿ ಒತ್ತಡ ಹಾಕಿದ್ದಾರೆ. ಇನ್ನೂ ಕಳೆದ ಬಾರಿ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಸ್ಥಾನಗಳನ್ನ ನೀಡುವಂತೆ ಒತ್ತಡ ಹಾಕಿದ್ದು, ಈ ವಿಚಾರವೇ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆ ನೋವಾಗಿದೆ.

ತಮ್ಮ ಬೆಂಬಲಿಗರಿಗೆ ಟಿಕೆಟ್ ಗಾಗಿ ಸಿದ್ದು,ಡಿಕೆಶಿ ಜಟಾಪಟಿ?
ಹೌದು 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲಿಗರು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗರು ಟಿಕೆಟ್ ಗಿಟ್ಟಿಸಿಕೊಳ್ಳಲು ಪಟ್ಟು ಹಿಡಿದಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವ ಕುರಿತು ಸಭೆಯಲ್ಲಿ ಒಲವನ್ನ ವ್ಯಕ್ತಪಡಿಸಿದ್ದು, ಬೆಂಬಲಗರಿಗೆ ಟಿಕೆಟ್ ಕೊಡಿಸುವ ಕುರಿತು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ಹಾಲಿ ಶಾಸಕರು ಹಾಗೂ ಕ್ಷೇತ್ರದಲ್ಲಿ ವರ್ಚಸ್ಸಿರುವ ನಾಯಕರು ಬಳಿ ಲಾಭಿ ಮಾಡಿದ್ದಾರೆ. ಇತ್ತ ಡಿ ಕೆ ಶಿವಕುಮಾರ್ ಬೆಂಲಿಗರು ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದು, ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು ಎಂದು ಇಬ್ಬರು ನಾಯಕರಲ್ಲಿ ಜಟಾಪಟಿ ಏರ್ಪಟ್ಟಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಯಲ್ಲಿ ಬೆಂಬಲಗರ ಹೆಸರನ್ನ ಸೇರ್ಡಿಸಿದ್ದು, ಅಂತಿಮವಾಗಿ ಇದೀಗ ಸಂಭಾವ್ಯ ಅಭ್ಯರ್ತಿಗಳ ಪಟ್ಟಿ ಹೈಕಮಾಂಡ್ ಅಂಗಳದಲ್ಲಿದೆ ಎಂದು ಹೇಳಲಾಗಿದೆ.

ಈ ಬಾರಿ ಹೆಚ್ಚಿನ ಟಿಕೆಟ್ ಗಾಗಿ ಲಿಂಗಾಯತ, ಕುರುಬ ನಾಯಕರು ಪಟ್ಟು
ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಸಮುದಾಯದ 70 ರಷ್ಟು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಅಖಿಲ ಭಾರತ ವೀರಶಿವ ಮಹಾಸಭೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾಗಿ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಲಿಂಗಾಯತ ಸಮುದಾಯದ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿ ಕನಿಷ್ಠ 70 ರಷ್ಟು ಟಿಕೆಟ್ ಈ ಬಾರಿ ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ
ಇನ್ನೂ ಲಿಂಗಾಯತ ಸಮುದಾಯಾದ ನಾಯಕರು ಬೇಡಿಕೆ ಇಟ್ಟ ಬೆನ್ನಲ್ಲೇ ಕುರುಬ ಸಮುದಾಯವೂ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಆಗ್ರಹಿಸಿದೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಪತ್ರಿಕಾಗೋಷ್ಠಿ ನಡೆಸಿ, ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕುರುಬ ಸಮುದಾಯದ 20 ಜನರಿಗೆ ಟಿಕೆಟ್ ನೀಡಿತ್ತು. 2018 ರಲ್ಲಿ 8 ಮಂದಿ ಕುರುಬ ಸಮುದಾಯದ ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 150 ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದು, ಈ ನಿಟ್ಟಿನಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆನ್ನುವುದು ಕುರುಬ ಸಮುದಾಯದ ಬೇಡಿಕೆ ಆಗಿದೆ.

ಈ ಬಾರಿ ಹೆಚ್ಚು ಟಿಕೆಟ್ ಗಾಗಿ ಬೇಡಿಕೆ ಇಟ್ಟ ಮುಸ್ಲಿಂ ನಾಯಕರು
ಇನ್ನು ಮುಸ್ಲಿಮ್ ನಾಯಕರು ಸಹ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಈ ಬಾರಿ ಕನಿಷ್ಠ 25 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ಹಿಂದೆ ಕಾಂಗ್ರೆಸ್ ಮುಸ್ಲಿಂ ಶಾಸಕರು ಹಾಗೂ ಮುಖಂಡರೂ ಸಭೆಯನ್ನು ನಡೆಸಿ ಕನಿಷ್ಠ 25 ರಿಂದ 28 ಕ್ಷೇತ್ರಗಳಲ್ಲಿ ಟಿಕೆಟ್ ಗೆ ಬೇಡಿಕೆ ಇಡುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮುಸ್ಲಿಂ ಮೌಲ್ವಿಗಳು ಸಹ ಭೇಟಿ ಮಾಡಿ ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.

ಹೆಚ್ಚಿನ ಟಿಕೆಟ್ ಗಾಗಿ ಮಹಿಳಾ ಕಾಂಗ್ರೆಸ್ ಬೇಡಿಕೆ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ 30 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಭೆ ನಡೆಸಿದ್ದು, ಈ ಬಾರಿ ಒಟ್ಟು 109 ಮಂದಿ ಮಹಿಳೆಯರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕನಿಷ್ಠ 30 ಮಂದಿ ಮಹಿಳೆಯರಿಗೆ ಟಿಕೆಟ್ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾ೦ರೆ.
ಒಟ್ಟಿನಲ್ಲಿ ಜಾತಿವಾರು ಟಿಕೆಟ್ ಬೇಡಿಕೆ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡುವ ನಿಟ್ಟಿನಲ್ಲಿ ರಾಜ್ಯ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ. ಆದರೆ ಈ ಬಾರಿ ತಮ್ಮ ತಮ್ಮ ಸಮುದಾಯವನ್ನ ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೇಡಿಗೆ ಸಲ್ಲಿಸಿರುವ ಜಾತಿವಾರು ಬೇಡಿಕೆ ಎಷ್ಟರ ಮಟ್ಟಿಗೆ ಈಡೇರಲಿದೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications