JDS Joins NDA: 'ಸೆಕ್ಯುಲರ್' ಪದ ಕೈಬಿಡಲಿ! ಜನತಾದಳಕ್ಕೆ ಹೊಸ ಹೆಸರು ಸೂಚಿಸಿದ ಕಾಂಗ್ರೆಸ್
ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿಯ ಊಹಾಪೋಹಕ್ಕೆ ತೆರೆ ಬಿದ್ದಿದೆ. ಶುಕ್ರವಾರ ಜೆಡಿಎಸ್ ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿಯಾದ ಹೆಚ್‌ಡಿ ಕುಮಾರಸ್ವಾಮಿ ಮೈತ್ರಿಯನ್ನು ಖಚಿತಪಡಿಸಿದರು.
ಜೆಡಿಎಸ್ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕರ್ನಾಟಕ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ ನಾಯಕರ ಬಗ್ಗೆ ವ್ಯಂಗ್ಯವಾಡಿದೆ. ಅಲ್ಲದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎನ್ನುವುದು ಖಚಿತವಾಗಿದೆ ಎಂದು ಹೇಳಿದೆ. ಸರಣಿ ಟ್ವೀಟ್ ಮಾಡಿದ್ದು ಜೆಡಿಎಸ್ ನಾಯಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ.

ಚುನಾವಣೆಯಲ್ಲಿ ಸೋತರೆ ಪಕ್ಷವನ್ನು ವಿಸರ್ಜಿಸುತ್ತೇನೆ ಎಂದಿದ್ದವರು ಇಂದು ಸೆಕ್ಯುಲರ್ ಪದವನ್ನು ವಿಸರ್ಜಿದ್ದಾರೆ. ಜೆಡಿಎಸ್ ಎಸ್ ಕೈಬಿಟ್ಟು ಕೆಡಿ ಎಂದು ಇಟ್ಟುಕೊಳ್ಳಲಿ ಎಂದು ಸಲಹೆ ಕೂಡ ನೀಡಿದ್ದು, ಇದಕ್ಕೆ ಸ್ಪಷ್ಟನೆಯನ್ನು ನೀಡಿದೆ.
ಕಮಲ ದಳ ಎಂದು ಹೆಸರಿಟ್ಟುಕೊಳ್ಳಲಿ
ಕರ್ನಾಟಕ ಕಾಂಗ್ರೆಸ್ ಮಾಡಿರುವ ಟ್ವೀಟ್‌ನಲ್ಲಿ "ಜೆಡಿಎಸ್ ಇಂದು ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟದೊಳಗೆ ವಿಲೀನವಾಗಿದೆ, ಇನ್ಮುಂದೆ ಜೆಡಿಎಸ್ ಪಕ್ಷವು ತನ್ನ ಹೆಸರಿನ ಮುಂದಿರುವ "ಸೆಕ್ಯೂಲರ್" ಪದವನ್ನು ಕೈಬಿಡುವುದು ಒಳ್ಳೆಯದು. ಕೇವಲ ಜೆಡಿ ಎಂದು ಇಟ್ಟುಕೊಳ್ಳಬಹುದು ಇಲ್ಲವೇ ಕೆಡಿ ಎಂದು ಬದಲಿಸಿಕೊಳ್ಳಬಹುದು, ಕೆಡಿ ಅಂದರೆ ಅಪಾರ್ಥ ಬೇಡ! ಕೆಡಿ ಅಂದರೆ 'ಕಮಲ ದಳ'! ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನು ವಿಸರ್ಜಿಸಿದ್ದಾರೆ, ಅಭಿನಂದನೆಗಳು" ಎಂದು ಹೇಳಿದೆ.
ಜೆಡಿಎಸ್ ಇಂದು ಅಧಿಕೃತವಾಗಿ NDA ಮೈತ್ರಿಕೂಟದೊಳಗೆ ವಿಲೀನವಾಗಿದೆ,
— Karnataka Congress (@INCKarnataka) September 22, 2023
ಇನ್ಮುಂದೆ JDS ಪಕ್ಷವು ತನ್ನ ಹೆಸರಿನ ಮುಂದಿರುವ “ಸೆಕ್ಯೂಲರ್ ಪದವನ್ನು ಕೈಬಿಡುವುದು ಒಳ್ಳೆಯದು.
ಕೇವಲ JD ಎಂದು ಇಟ್ಟುಕೊಳ್ಳಬಹುದು ಇಲ್ಲವೇ KD ಎಂದು ಬದಲಿಸಿಕೊಳ್ಳಬಹುದು, ಕೆಡಿ ಅಂದರೆ ಅಪಾರ್ಥ ಬೇಡ!
KD ಅಂದರೆ “ಕಮಲ ದಳ”!
ಪಕ್ಷ ವಿಸರ್ಜಿಸುತ್ತೇನೆ ಎಂದವರು…
ಬಿಜೆಪಿ ಬಿ ಟೀಂ ಎನ್ನುವುದು ಸಾಬೀತಾಗಿದೆ
"ಬಿಜೆಪಿಯ ಬಿ ಟೀಮ್ ಜೆಡಿಎಸ್ ಎಂಬುದಕ್ಕೆ ಇಂದು ಅಧಿಕೃತ ಮುದ್ರೆ ಬಿದ್ದಿದೆ, ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕದ್ದುಮುಚ್ಚಿ ಅಫೇರ್ ಇಟ್ಟುಕೊಂಡಿದ್ದ ಜೆಡಿಎಸ್ ಇಂದು ಬಹುರಂಗವಾಗಿ ಜೊತೆಗೂಡಿದೆ. ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದಿದ್ದ ಕುಮಾರಸ್ವಾಮಿಯವರು ಇಂದು ದರಿದ್ರ ಬಂದಿದೆ ಎಂದು ಒಪ್ಪಿಕೊಂಡಂತಾಗಿದೆ." ಎಂದು ಜೆಡಿಎಸ್ ನಾಯಕರ ಬಗ್ಗೆ ವ್ಯಂಗ್ಯವಾಡಿದೆ.
ರಾಜ್ಯಾಧ್ಯಕ್ಷರು ಎಲ್ಲಿ?
ಮತ್ತೊಂದು ಟ್ವೀಟ್ ಮಾಡಿದ್ದು, "ಜೆಡಿಎಸ್ ಪಕ್ಷಕ್ಕೆ ರಾಜ್ಯಾಧ್ಯಕ್ಷ ಅಂತ ಒಬ್ಬರಿದ್ದರು ಈ ಚಿತ್ರದಲ್ಲಿ ಅವರೆಲ್ಲಿದ್ದಾರೆ? ಪಕ್ಷದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಕ್ಕೆ ರಾಜ್ಯಾಧ್ಯಕ್ಷರ ಅಭಿಪ್ರಾಯ ಬೇಕಿಲ್ಲವೇ? ಅವರ ಉಪಸ್ಥಿತಿ ಬೇಕಿಲ್ಲವೇ? ರಾಜ್ಯಾಧ್ಯಕ್ಷ ಹುದ್ದೆ ಎನ್ನುವುದು ಕುಮಾರಸ್ವಾಮಿಯವರ ಕುಟುಂಬ ಕೈ ಒರೆಸಲು ಇಟ್ಟುಕೊಂಡಿರುವ ಟಿಶ್ಯೂ ಪೇಪರ್ ಮಾತ್ರವೇ? ವಿಮಾನದ ಟಿಕೆಟ್ ಬುಕ್ ಮಾಡಲೊಬ್ಬರು, ಹೋಟೆಲ್ ರೂಮ್ ಬುಕ್ ಮಾಡಲೊಬ್ಬರು ಹಾಗೂ ತಮ್ಮ ಪುತ್ರ ಜೊತೆಗಿದ್ದರೆ ಸಾಕೇ?" ಎಂದು ಜೆಡಿಎಸ್ ನಾಯಕರನ್ನು ಪ್ರಶ್ನೆ ಮಾಡಿದೆ.












Click it and Unblock the Notifications