ಕಾಡು ಪ್ರಾಣಿ ದಾಳಿಯಿಂದ ಸಾವು, ಆಸ್ತಿ ನಷ್ಟ; ಪರಿಹಾರ ಹೆಚ್ಚಿಸಿದ ಸರ್ಕಾರ
ಬೆಂಗಳೂರು, ಡಿಸೆಂಬರ್ 16; ಕರ್ನಾಟಕ ಸರ್ಕಾರ ವನ್ಯ ಪ್ರಾಣಿಗಳಿಂದ ಉಂಟಾಗುವ ಮಾನವ ಪ್ರಾಣ ಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ, ಗಾಯಗೊಂಡವರು, ಆಸ್ತಿ ನಷ್ಟಕ್ಕೆ ನೀಡುವ ಪರಿಹಾರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ-2 ಶಂಕರ ಎಸ್. ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಹಿಂದಿನ ಆದೇಶಗಳಂತೆ ನೀಡುತ್ತಿರುವ ಪರಿಹಾರ ಧನ ಮತ್ತು ಮಾಶಾಸನವನ್ನು ಪರಿಷ್ಕರಿಸಲಾಗಿದೆ.
ಸರ್ಕಾರದ ಆದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳನಾಶ, ಮಾನವ ಪ್ರಾಣಹಾನಿ, ಶಾಶ್ವತ ಅಂಗವಿಕಲತೆ, ಸಾಕು ಪ್ರಾಣಿಗಳ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಹಾಗೂ ಗಾಯಗೊಂಡವರಿಗೆ ನೀಡಲಾಗುತ್ತಿರುವ ಪರಿಹಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾವತಿಸುತ್ತಿರುವ ದಯಾತ್ಮಕ ಧನವನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರ ಪ್ರಸ್ತಾವನೆಯಲ್ಲಿ ಮುಖ್ಯಮಂತ್ರಿಗಳು 2022-23ನೇ ಸಾಲಿನ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಅಧಿವೇಶನದಲ್ಲಿ ವನ್ಯಪ್ರಾಣಿ ದಾಳಿಯಿಂದ ಉಂಟಾದ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ಪ್ರಸ್ತುತ ಪಾವತಿಸಲಾಗುತ್ತಿರುವ ಪರಿಹಾರ ಧನವನ್ನು ದುಪ್ಪಟ್ಟು ಮಾಡುವುದಾಗಿ ಘೋಷಿಸಿದ್ದರು. ಪರಿಹಾರ ಎಷ್ಟು ಏರಿಕೆ ಮಾಡಲಾಗಿದೆ? ಎಂಬ ವಿವರಗಳು ಇಲ್ಲಿವೆ..

ಯಾವುದಕ್ಕೆ ಎಷ್ಟು ಪರಿಹಾರ ಹೆಚ್ಚಳ
* ವನ್ಯಪಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳು. ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನ 7.50 ಲಕ್ಷ ರೂ.ಗಳು. ನಿಗದಿಪಡಿಸಲಾದ ದಯಾತ್ಮಕ ಧನ ರೂ. 15 ಲಕ್ಷ ರೂ.ಗಳು.
* ಕಾಡು ಪ್ರಾಣಿಗಳಿಂದ ಉಂಟಾಗುವ ಶಾಶ್ವತ ಅಂಗವಿಕಲತೆ ಪ್ರಕರಣಗಳು. ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನ 5 ಲಕ್ಷ ರೂ.ಗಳು. ನಿಗದಿಪಡಿಸಲಾದ ದಯಾತ್ಮಕ ಧನ ರೂ. 10 ಲಕ್ಷ ರೂ.ಗಳು.

ಭಾಗಶಃ ಅಂಗವಿಕಲತೆ ಪ್ರಕರಣಗಳು
* ಕಾಡು ಪ್ರಾಣಿಗಳಿಂದ ಉಂಟಾಗುವ ಭಾಗಶಃ ಶಾಶ್ವತ ಅಂಗವಿಕಲತೆ ಪ್ರಕರಣಗಳು. ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನ 2.50 ಲಕ್ಷ ರೂ.ಗಳು. ನಿಗದಿಪಡಿಸಲಾದ ದಯಾತ್ಮಕ ಧನ ರೂ. 5 ಲಕ್ಷ ರೂ.ಗಳು.
* ಕಾಡು ಪ್ರಾಣಿಗಳಿಂದ ಗಾಯಗೊಂಡ ಪ್ರತಿ ವ್ಯಕ್ತಿಗೆ ಗರಿಷ್ಟ ಮೊತ್ತ ಪ್ರಕರಣಗಳು. ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನ 30 ಸಾವಿರ ರೂ.ಗಳು. ನಿಗದಿಪಡಿಸಲಾದ ದಯಾತ್ಮಕ ಧನ 60 ಸಾವಿರ ರೂ.ಗಳು.

ಕಾಡಾನೆ ದಾಳಿಯಿಂದ ಆಸ್ತಿ ನಷ್ಟ
* ಕಾಡಾನೆ ದಾಳಿಯಿಂದ ಉಂಟಾದ ಆಸ್ತಿ ನಷ್ಟ ಪ್ರತಿ ಪ್ರಕರಣಕ್ಕೆ. ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನ 10 ಸಾವಿರ ರೂ.ಗಳು. ನಿಗದಿಪಡಿಸಲಾದ ದಯಾತ್ಮಕ ಧನ ರೂ. 20 ಸಾವಿರ ರೂ.ಗಳು.
* ವನ್ಯಪ್ರಾಣಿಗಳ ದಾಳಿ/ ಹಾವಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಹಾಗೂ ಶಾಶ್ವತ ಅಂಗವಿಕಲತೆಗೊಳಗಾದ ವ್ಯಕ್ತಿಗಳಿಗೆ ನೀಡಲಾಗುತ್ತಿರುವ ಧಯಾತ್ಮಕ ಧನದ ಜೊತೆ ಪ್ರತಿ ತಿಂಗಳು 5 ವರ್ಷಗಳ ವರೆಗೆ ಮಾಸಾಶನ ನೀಡಲಾಗುತ್ತದೆ. ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನ 2 ಸಾವಿರ ರೂ.ಗಳು. ನಿಗದಿಪಡಿಸಲಾದ ದಯಾತ್ಮಕ ಧನ 4 ಸಾವಿರ ರೂ.ಗಳು.

ಬಸವರಾಜ ಬೊಮ್ಮಾಯಿ ಘೋಷಣೆ
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಜನ ಸಂಕಲ್ಪ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕಾಡಾನೆ ದಾಳಿಯಿಂದ ಸಾವಿಗೀಡಾದವರ ಕುಟುಂಬಕ್ಕೆ ನೀಡುವ ಪರಿಹಾರವನ್ನು 7.5 ರಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ" ಎಂದು ಹೇಳಿದ್ದರು.
"ಆನೆ ಉಪಟಳ ನಿಯಂತ್ರಣ ಕಾರ್ಯಕ್ಕೆ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ 50 ಮಂದಿಯ ದಳ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದರು.












Click it and Unblock the Notifications