E Khata: ಇ-ಖಾತಾ ಮಹತ್ವದ ಮಾಹಿತಿ ನೀಡಿದ ಆಯುಕ್ತರಾದ ಡಾ ರಾಜೇಂದ್ರ
ಬೆಂಗಳೂರು, ನವೆಂಬರ್26: ಬಾಕಿ ಉಳಿದಿರುವ ಎಲ್ಲಾ ಇ-ಖಾತಾ ಅರ್ಜಿಗಳನ್ನು ವಾರಾಂತ್ಯದೊಳಗೆ ವಿಲೇವಾರಿ ಮಾಡಲು ಆಯುಕ್ತರಾದ ಡಾ ರಾಜೇಂದ್ರ ಕೆ.ವಿ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವುದೇ ಅರ್ಜಿಯನ್ನು ಸೂಕ್ತ ಕಾರಣವಿಲ್ಲದೆ ತಿರಸ್ಕರಿಸುವಂತಿಲ್ಲ. ನಾಗರಿಕರಿಗೆ ಇ-ಖಾತಾ ಪಡೆಯುವಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ-1 ರ ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಭೆಯನ್ನು ನಡೆಸಿ, ತೆರಿಗೆ ಸಂಗ್ರಹ, ಇ-ಖಾತಾ ಹಾಗೂ ಮತದಾರರ ಪಟ್ಟಿಯ ಸಕಾಲಿಕ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇಸ್ ವರ್ಕರ್ಸ್, ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಆಲಿಸಿ, ಜಿಬಿಎ ತಾಂತ್ರಿಕ ತಂಡದೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಪಶ್ವಿಮ ನಗರ ಪಾಲಿಕೆಯ ವಲಯ-1 ರಲ್ಲಿ ಆಸ್ತಿ ತೆರಿಗೆ ವಸೂಲಿಗೆ ಕ್ರಮವಹಿಸಲು ಆಯುಕ್ತರಾದ ಡಾ ರಾಜೇಂದ್ರ ಕೆ.ವಿ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರು ಪರಿಣಾಮಕಾರಿ ತೆರಿಗೆ ವಸೂಲಿಗೆ ಮುಂದಾಗಲು ಸೂಚನೆ ನೀಡಿದರು. ಪರಿಷ್ಕರಣೆ ಸಂಬಂಧಿತ ಎಲ್ಲಾ ಪ್ರಕರಣಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಸೂಚನೆ ನೀಡಿದರು.
ಬೇಡಿಕೆ ನೋಟಿಸ್‌ಗಳನ್ನು ತಕ್ಷಣ ಜಾರಿಗೊಳಿಸಿ ಬಾಕಿ ತೆರಿಗೆ ವಸೂಲಿ ಮಾಡಲು ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದರು. ತೆರಿಗೆ ಬಾಕಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಪ್ರಮುಖ ತೆರಿಗೆ ಬಾಕಿದಾರರ ಆಸ್ತಿಗಳಿಗೆ ಅಗತ್ಯವಿದ್ದಲ್ಲಿ ಮುಚ್ಚುವಿಕೆ ಕ್ರಮ ಜರುಗಿಸಲು ಸೂಚಿಸಿದರು. ಕರಡು ಮತದಾರರ ಪಟ್ಟಿ ಸಕಾಲದಲ್ಲಿ ಪೂರ್ಣಗೊಳಿಸಿ, ಅಂತಿಮ ಪಟ್ಟಿ ಸಿದ್ಧಪಡಿಸುವ ಕೆಲಸವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಲು ಸೂಚಿಸಿದರು.
ಬೂತ್ ಮಟ್ಟದ ಅಧಿಕಾರಿಗಳಿಗೆ ಸಮರ್ಪಕ ತರಬೇತಿ ನೀಡಲು ಸೂಚಿಸಿದರು. ಇನ್ನೂ ಬೂತ್ ಮಟ್ಟದ ಅಧಿಕಾರಿಗಳ ಕರ್ತವ್ಯಗಳನ್ನು ಯಾವುದೇ ಖಾಸಗಿ ವ್ಯಕ್ತಿಗಳ ಮೂಲಕ ನಡೆಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಶಿಕ್ಷಕರ ಕ್ಷೇತ್ರ ಚುನಾವಣೆಯು ಸಮೀಪಿಸುತ್ತಿರುವುದರಿಂದ ಹಾಗೂ ನಗರ ಪಾಲಿಕೆ ಚುನಾವಣೆಗಳು ಯಾವುದೇ ಸಮಯದಲ್ಲಿ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ, ಚುನಾವಣಾ ಸಂಬಂಧಿತ ಎಲ್ಲಾ ಕಾರ್ಯಗಳನ್ನು ನಿಖರವಾಗಿ ಯೋಜಿಸಿ ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಆಯುಕ್ತರು ನಿರ್ದೇಶಿಸಿದರು.












Click it and Unblock the Notifications