ಲೋಕಾಯುಕ್ತ ಮುಚ್ಚಲು ಹೊರಟಿದೆಯಾ ಸಿದ್ದು ಸರಕಾರ? ಅಭಿಪ್ರಾಯ ತಿಳಿಸಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಒಂದು ಕಾಲದಲ್ಲಿ ದೇಶದ ಪ್ರಭಾವಿ ಸಂಸ್ಥೆಯಾಗಿದ್ದ ಲೋಕಾಯುಕ್ತ ಸದ್ಯ ಸೂತ್ರವಿಲ್ಲದ ಬೊಂಬೆಯಂತಾಗಿದೆ. ಕೆಲವು ದಿನಗಳ ಹಿಂದೆ ಕರ್ನಾಟಕ ಸರಕಾರ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಆದರೆ ರಾಜ್ಯಪಾಲರು ಶೆಟ್ಟಿ ಮೇಲಿನ ಆರೋಪಗಳ ಹಿನ್ನಲೆಯಲ್ಲಿ ಸರಕಾರದ ಶಿಫಾರಸ್ಸನ್ನು ಹಿಂದಕ್ಕೆ ಕಳುಹಿಸಿದ್ದರು. ಹೀಗೆ ಕಳೆದ ಒಂದೂವರೆ ವರ್ಷದಲ್ಲಿ ಸರಕಾರದ ಶಿಫಾರಸ್ಸನ್ನು ರಾಜ್ಯಪಾಲರು ಹಿಂದಕ್ಕೆ ಕಳುಹಿಸುತ್ತಿರುವ ಎರಡನೇ ನಿದರ್ಶನವಿದು. ಈ ಹಿಂದೆ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಹೆಸರನ್ನು ಇದೇ ರೀತಿ ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದರು.

ನ್ಯಾಯಮೂರ್ತಿ ವೆಂಕಟಾಚಲಯ್ಯ ಮತ್ತು ಸಂತೋಷ್ ಹೆಗ್ಡೆ ನಂತರ ಬಂದ ಯಾರೂ ಲೋಕಾಯುಕ್ತ ಹುದ್ದೆಯಲ್ಲಿ ಪೂರ್ಣ ಻ಅವಧಿ ಪೂರೈಸಲೇ ಇಲ್ಲ. ಸಂತೋಷ್ ಹೆಗ್ಡೆ ನಂತರ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ರನ್ನು ಸರಕಾರ ಲೋಕಾಯುಕ್ತ ಹುದ್ದೆಗೆ ನೇಮಿಸಿತು. ಆದರೆ ಅವರು ಬಂದ ದಾರಿಯಲ್ಲೇ ವಾಪಾಸಾದರು. ನಂತರ ಬಂದವರು ನ್ಯಾಯಮೂರ್ತಿ ಭಾಸ್ಕರ್ ರಾವ್.

ಭಾಸ್ಕರ್ ರಾವ್ ಹುದ್ದೆಗೆ ಬಂದ ನಂತರ ಅವರ ಮಗನ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂತು. ಲೋಕಾಯುಕ್ತ ನಿವಾಸದಲ್ಲೇ ರಾವ್ ಪುತ್ರ ಻ಅಶ್ವಿನ್ ರಾವ್ ಮತ್ತು ಸಹಚರರು ಸುಲಿಗೆ ದಂಧೆ ನಡೆಸುತ್ತಿದ್ದ ಪ್ರಕರಣ ಸುದ್ದಿಯಾಗಿತ್ತು.

 Comment: Is the Karnataka Lokayukta jinxed or does the govt want to shut it down

ತಮ್ಮ ಮಗನ ವಿರುದ್ಧ ಇಂಥಹದ್ದೊಂದು ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದಂತೆ ನ್ಯಾಯಮೂರ್ತಿ ರಾವ್ ದೀರ್ಘ ರಜೆಯ ಮೇಲೆ ತೆರಳಿದರು. ಆ ಸಂದರ್ಭದಲ್ಲಿ ಕಡತಗಳೆಲ್ಲಾ ವಿಲೇವಾರಿಯಾಗದೆ ಧೂಳು ತಿನ್ನಲು ಪ್ರಾರಂಭವಾಯಿತು. ರೈಡುಗಳಂತೂ ಪೂರ್ತಿ ನಿಂತೇ ಹೋಯಿತು. ಸುಮಾರು ಆರು ತಿಂಗಳ ಕಾಲ ಹುದ್ದೆಯಿಂದ ಹೊರಗೆಯೇ ಉಳಿದ ರಾವ್ ಲೋಕಾಯಕ್ತವನ್ನು ತಟಸ್ಥಗೊಳಿಸದವರಲ್ಲಿ ಒಬ್ಬರು.

ಇದೀಗ ಶೆಟ್ಟಿ ಹೆಸರು ತಿರಸ್ಕೃತವಾಗುವುದರೊಂದಿಗೆ ಸರಕಾರ ಮತ್ತೊಬ್ಬರು ಲೋಕಾಯುಕ್ತರನ್ನು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ನಿಯಮಗಳ ಪ್ರಕಾರ ಲೋಕಾಯುಕ್ತರಾಗಲು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಯಾಗಿರಬೇಕು ಅಥವಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರಬೇಕು. ಅದಲ್ಲದೆ ಇದ್ದಲ್ಲಿ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಯಾಗಿ ಕನಿಷ್ಠ10 ವರ್ಷ ಸೇವೆ ಸಲ್ಲಿಸಿರಬೇಕು. ಆದರೆ ಅಚ್ಚರಿಯ ವಿಷಯ ಎಂದರೆ ಸರಕಾರಕ್ಕೆ ಈ ಮಾನದಂಡಗಳನ್ನು ಪೂರೈಸುವ ಒಬ್ಬರೂ ಸಿಗುತ್ತಿಲ್ಲ.

ಒಂದೊಮ್ಮೆ ಸರಕಾರಕ್ಕೆ ಲೋಕಾಯುಕ್ತ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳು ಕರ್ನಾಟಕದಲ್ಲೇ ಸಿಕ್ಕಿಲ್ಲ ಅಂದುಕೊಂಡರೆ, ಬೇರೆ ರಾಜ್ಯಗಳಿಂದ ಕರೆತರಬಾರದು ಎಂಬ ಯಾವ ನಿಯಮಗಳೂ ಇಲ್ಲ.

ಭಾಸ್ಕರ್ ರಾವ್ ಲೋಕಾಯುಕ್ತ ಸ್ಥಾನದಿಂದ ಕೆಳಕ್ಕಿಳಿದ ಬಳಿಕ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿಕ್ರಂಜಿತ್ ಸೇನ್ ಅವರನ್ನು ಲೋಕಾಯುಕ್ತ ಸ್ಥಾನಕ್ಕೆ ಕರೆತರಲು ಸರಕಾರ ಉತ್ಸುಕವಾಗಿತ್ತು. ಆರಂಭದಲ್ಲಿ ಸೇನ್ ಹುದ್ದೆ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ ಕಾನೂನು ಸಚಿವ ಟಿ.ಬಿ ಜಯಚಂದ್ರ ಒತ್ತಾಯದ ಮೆರೆಗೆ ಸೇನ್ ಒಪ್ಪಿಗೆ ಸೂಚಿಸಿದ್ದರು. ಆದರೆ ಅತ್ತ ಸೇನ್ ಹುದ್ದೆ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದರೆ ಇತ್ತ ಸರಕಾರ ತನ್ನ ನಿರ್ಧಾರ ಬದಲಿಸಿತು. ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಹೆಸರನ್ನು ಶಿಫಾರಸ್ಸು ಮಾಡಿ ಕಳುಹಿಸಿತು. ಇದನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಇದೀಗ ಹಳೆ ವಿಚಾರ.

ಭ್ರಷ್ಟಾಚಾರ ನಡೆದಾಗ ದೂರು ನೀಡಲು ಲಕ್ಷಾಂತರ ಜನರಿಗೆ ಲೋಕಾಯುಕ್ತ ಎನ್ನುವುದು ಭರವಸೆಯ ಕೇಂದ್ರವಾಗಿತ್ತು. ಅದರಲ್ಲೂ ಸಚಿವರು, ಸ್ವತಃ ಮುಖ್ಯಮಂತ್ರಿಗಳ ವಿರುದ್ದವೇ ಆರೋಪಗಳು ಕೇಳಿ ಬಂದಾಗ ಪ್ರಕರಣಗಳೆಲ್ಲಾ ದಾಖಲಾಗುತ್ತಿದ್ದುದು ಇದೇ ಲೋಕಾಯುಕ್ತದಲ್ಲಿ. ಆದರೆ ಲೋಕಾಯುಕ್ತ ಹುದ್ದೆ ಖಾಲಿಯಾಗಿರುವುದರಿಂದ ಭ್ರಷ್ಟಾಚಾರ ವಿರೋಧಿ ಕಾಯಿದೆಯನ್ವಯ ಬಂದಿರುವ ಪ್ರಕರಣಗಳು ವಿಲೇವಾರಿಯಾಗದೆ ಕೊಳೆಯುತ್ತಿವೆ. ಈ ಸಂದರ್ಭದಲ್ಲಿ ಲೋಕಾಯುಕ್ತದ ಬಗ್ಗೆ ಸರಕಾರಕ್ಕೆ ನಿಜವಾಗಿಯೂ ಕಾಳಜಿ ಇದೆಯಾ? ಅಥವಾ ಸರಕಾರ ಶಾಶ್ವತವಾಗಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಹೊರಟಿದೆಯಾ? ನಿಮ್ಮ ಅಭಿಪ್ರಾಯ ತಿಳಿಸಿ.. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Lokayukta which was once a upon a time one of the most powerful institutions in the country is headless. When the Government of Karnataka finally arrived at a consensus and suggested the name of Justice Vishwanath Shetty, it was shot down by the Governor citing allegations and complaints.
Please Wait while comments are loading...