ಲೋಕಾಸಭಾ ಚುನಾವಣೆ ಹೊಸ್ತಿಲಲ್ಲಿ ‘ಕೈ’ನಲ್ಲಿ ಶೀತಲ ಸಮರ... ಲಾಭ ಯಾರಿಗೆ?
ಬೆಂಗಳೂರು, ಅಕ್ಟೋಬರ್ 30: ರಾಜ್ಯದಲ್ಲಿ 135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಅರ್ಥವಾಗಿ ಬಿಡುತ್ತದೆ. ಒಂದೆಡೆ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಲೇ ಮತ್ತೊಂದೆಡೆ ಸಿಎಂ ಸ್ಥಾನ ಅಧಿಕಾರ ಹಸ್ತಾಂತರದ ಕೂಗು ಎದ್ದಿರುವುದು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಇದೆಲ್ಲ ಬೇಕಿತ್ತಾ? ಎಂಬ ಪ್ರಶ್ನೆಯನ್ನು ಜನ ಕೇಳುವಂತಾಗಿದೆ.
ಇಷ್ಟಕ್ಕೂ ಬರೋಬ್ಬರಿ 135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಯಕರು ಎಲ್ಲೋ ಒಂದು ಕಡೆ ಆಪರೇಷನ್ ಕಮಲದ ಭೀತಿಯನ್ನು ಹೊರ ಹಾಕುತ್ತಿರುವುದು ಅಚ್ಚರಿ ತಂದಿದೆ. ನಿಜವಾಗಿಯೂ ಕಾಂಗ್ರೆಸ್ ನಾಯಕರು ಅಂಥದೊಂದು ಭಯದಲ್ಲಿದ್ದಾರಾ? ಅಥವಾ ಬಿಜೆಪಿಯನ್ನು ವಿಲನ್ ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ತಂತ್ರನಾ?

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವು ಸಚಿವರು, ಶಾಸಕರು ಆಪರೇಷನ್ ಕಮಲ ಆರೋಪವನ್ನು ಮಾಡುತ್ತಲೇ ಬರುತ್ತಿದ್ದಾರೆ. ಈ ಆರೋಪಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಒಂದು ವಿಚಾರವನ್ನು ಸ್ಪಷ್ಟಗೊಳಿಸಬೇಕಾಗಿದೆ. ಅದು ಏನೆಂದರೆ ನಿಮ್ಮ ಶಾಸಕರ ಬಗ್ಗೆ ನಿಮಗೆ ನಂಬಿಕೆ ಇಲ್ವಾ? ಅವರು ಪ್ರಾಮಾಣಿಕರಲ್ವ? ಅವರು ನಿಮ್ಮ ಪಕ್ಷದ ಸಿದ್ಧಾಂತವನ್ನು ನಂಬಿ ಬಂದಿದ್ದಾರೆ ಎನ್ನುವುದಾದರೆ ನೀವು ಇಂತಹ ಹೇಳಿಕೆಯನ್ನು ನೀಡಿ ಬಿಜೆಪಿಯನ್ನು ವಿಲನ್ ಮಾಡುವ ಭರದಲ್ಲಿ ನಿಮ್ಮದೇ ಪಕ್ಷದ ಶಾಸಕರಿಗೆ ಅನ್ಯಾಯ ಮಾಡಿದಂತೆ ಅಲ್ವಾ?
ಕಾಂಗ್ರೆಸ್ ಶ್ರಮ ಗೆಲುವು ತಂದಿದೆ
ಬಿಜೆಪಿಯನ್ನು ಮಣಿಸಿ ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ವಿಜಯದ ಸಂಭ್ರಮದಲ್ಲಿ ತೇಲಿದನ್ನು ನಾವೆಲ್ಲರೂ ನೋಡಿದ್ದೇವೆ. 135 ಸ್ಥಾನ ಗೆಲುವುದು ಸುಲಭವೇನಲ್ಲ. ಈ ಗೆಲುವು ಸಾಧಿಸಬೇಕಾದರೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಾಕಷ್ಟು ಶ್ರಮಪಟ್ಟಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ. ವಿಧಾನಸಭಾ ಚುನಾವಣೆ ವೇಳೆಯಲ್ಲಿ ತಮ್ಮೊಳಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದೆಲ್ಲವನ್ನು ಬದಿಗೊತ್ತಿ ಪಕ್ಷಕ್ಕಾಗಿ ದುಡಿದಿದ್ದಾರೆ. ಅಧಿಕಾರ ಹಿಡಿಯಲೇ ಬೇಕೆಂಬ ಛಲದಲ್ಲಿ ಕೆಲಸ ಮಾಡಿದ್ದಾರೆ.
ಅಧಿಕಾರ ಹಿಡಿಯಬೇಕಾದರೆ ರಾಜಕೀಯವಾಗಿ ಏನೆಲ್ಲ ಮಾಡಬೇಕೋ ಅದೆಲ್ಲವನ್ನು ಮಾಡಿದ್ದಾರೆ. ಅಲ್ಲಿ ಆಮಿಷ, ಭರವಸೆ, ತಂತ್ರ, ಕುತಂತ್ರ ಹೀಗೆ ಹತ್ತು ಹಲವು ಅಸ್ತ್ರಗಳಿದ್ದವು. ಗೆಲುವಿಗಾಗಿ ತಾವು ಏನೆಲ್ಲ ಬಳಸಿಕೊಳ್ಳಬಹುದೋ ಅದೆಲ್ಲ ಅಸ್ತ್ರವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಾಮೂಹಿಕ ನಾಯಕತ್ವದ ಘೋಷಣೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ ಕಾಂಗ್ರೆಸ್ ನಾಯಕರಿಗೆ ಒಂದು ಅದ್ಭುತ ಗೆಲುವು ಸಿಕ್ಕಿತು ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಅದೊಂದು ರಹಸ್ಯದ ಕುತೂಹಲ ಕಾಡುತ್ತಿದೆ
ಸಾಮಾನ್ಯವಾಗಿ ಯಾವುದೇ ಪಕ್ಷವಾಗಲಿ ಅದು ವಿರೋಧಪಕ್ಷದಲ್ಲಿದ್ದಾಗ ಅದಕ್ಕೆ ಆಡಳಿತ ಪಕ್ಷದ ವಿರುದ್ಧ ಆರೋಪ ಮತ್ತು ಹೋರಾಟ ಮಾಡಲು ಬಹಳಷ್ಟು ವಿಚಾರಗಳು ಸಿಗುತ್ತವೆ. ಅಷ್ಟೇ ಅಲ್ಲದೆ ಬಹು ಸುಲಭವಾಗಿ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿ ಮಾಡಿಬಿಡುವ ಅವಕಾಶವೂ ಇರುತ್ತದೆ. ಆದರೆ ಅಧಿಕಾರದಲ್ಲಿರುವ ಪಕ್ಷಕ್ಕೆ ಆಡಳಿತದ ಜತೆಗೆ ವಿರೋಧ ಪಕ್ಷಗಳು ಮಾಡುವ ಆರೋಪಗಳಿಗೆ ಉತ್ತರ ನೀಡಬೇಕಾಗುತ್ತದೆ. ಒಂದು ವೇಳೆ ಆರೋಪಕ್ಕೆ ತಕ್ಕ ಉತ್ತರವನ್ನು ಕೊಡದೆ ಮೌನಕ್ಕೆ ಜಾರಿದರೆ ಏನಾಗುತ್ತದೆ ಎಂಬುದಕ್ಕೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿದರ್ಶನವಾಗಿದೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣವಿದೆ ಎಂಬುದು ಹಲವು ಸಂದರ್ಭಗಳಲ್ಲಿ ಜಗಜ್ಜಾಹೀರಾಗಿದೆ. ಚುನಾವಣೆ ಬಳಿಕ ಸಿಎಂ ಸ್ಥಾನಕ್ಕಾಗಿ ಏನೆಲ್ಲ ಕಸರತ್ತು ನಡೆಯಿತು ಎಂಬುದು ಕೂಡ ನಮ್ಮ ಮುಂದಿದೆ. ಆದರೆ ಸಿಎಂ ಸ್ಥಾನದ ಅಧಿಕಾರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಆಗಿದೆಯಾ? ಎಂಬುದು ಮಾತ್ರ ಗೌಪ್ಯವಾಗಿ ಉಳಿದಿದೆ. ಹೀಗಾಗಿ ಅದು ಕೇವಲ ರಾಜ್ಯದ ಜನತೆಯನ್ನು ಮಾತ್ರ ಕಾಡುತ್ತಿಲ್ಲ ಸ್ವತಃ ಕಾಂಗ್ರೆಸ್ ಪಕ್ಷದೊಳಗೆ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ.
'ಕೈ'ಗೆ ಇಪ್ಪತ್ತು ಸ್ಥಾನ ಗೆಲ್ಲುವ ಗುರಿ
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದು ಐದು ತಿಂಗಳನ್ನು ಪೂರೈಸಿದೆ. ಇನ್ನು ಐದಾರು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು, ಅದನ್ನು ಎದುರಿಸಲು ಕಾಂಗ್ರೆಸ್ ಸರ್ಕಾರ ಸಜ್ಜಾಗಬೇಕಾಗಿದೆ. 135 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದೆ. ಹೈಕಮಾಂಡ್ ಕೂಡ ಕರ್ನಾಟಕದತ್ತ ಒಳ್ಳೆಯ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಅದನ್ನು ಉಳಿಸಿಕೊಳ್ಳಬೇಕಾದರೆ ಈಗಿನಿಂದಲೇ ಅಖಾಡಕ್ಕೆ ಇಳಿಯಬೇಕಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಗೆ ವಿರೋಧ ಪಕ್ಷವಾಗಿ ಬಿಜೆಪಿ ಇದ್ದರೂ ಇದುವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ಹೀಗಾಗಿ ಪಕ್ಷದಲ್ಲಿ ಇರುವ ನಾಯಕರೆಲ್ಲರೂ ಸರ್ಕಾರದ ವಿರುದ್ಧ ಮುಗಿಬೀಳಲಾರಂಭಿಸಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವುದರಿಂದ ಎರಡು ಪಕ್ಷಗಳನ್ನು ಎದುರಿಸುವುದು ಅನಿವಾರ್ಯವಾಗಿದೆ. ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಅಲ್ಲಿ ಜನ ರಾಷ್ಟ್ರೀಯ ನಾಯಕನ ಮುಖ ನೋಡಿಕೊಂಡು ಮತ ಚಲಾಯಿಸುತ್ತಾರೆ.
ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ
ರಾಜ್ಯ ಕಾಂಗ್ರೆಸ್ ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ. ಆದರೆ ಇದೇ ವೇಳೆಯಲ್ಲಿ ಆಪರೇಷನ್ ಕಮಲದ ಆರೋಪ ಮಾಡುವುದು, ಸಿಎಂ ಅಧಿಕಾರದ ಹಸ್ತಾಂತರದ ಬಗ್ಗೆ ಶಾಸಕರು ಮಾತನಾಡುವುದು, ಕೆಪಿಸಿಸಿ ಅಧ್ಯಕ್ಷರು ಖಡಕ್ ವಾರ್ನಿಂಗ್ ನೀಡಿದ ಬಳಿಕವೂ ಹೇಳಿಕೆ ನೀಡುವುದು, ಔತಣಕೂಟದ ನೆಪದಲ್ಲಿ ಒಂದು ಬಣದ ನಾಯಕರು ಒಟ್ಟಾಗಿ ಸೇರಿ ಮಾತುಕತೆ ನಡೆಸುವುದು, ಮತ್ತೊಂದೆಡೆ ಬೆಳಗಾವಿ ಸಾಹುಕಾರರಾದ ಸತೀಶ್ ಜಾರಕಿಹೊಳಿ ಅವರ ಪ್ರವಾಸ ಪ್ರಕರಣ ಹೀಗೆ ಎಲ್ಲವೂ ಎಲ್ಲೋ ಒಂದು ಕಡೆ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಶೀತಲ ಸಮರ ನಡೆಯುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದೆ.
ಕಾಂಗ್ರೆಸ್ ನಾಯಕರು ಎಚ್ಚೆತ್ತು ಕೊಳ್ಳದೆ ಇದೇ ರೀತಿಯ ವರ್ತನೆಗಳನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುವುದು ಅಷ್ಟು ಸುಲಭವಾಗಿ ಉಳಿಯಲಾರದೇನೋ? ಮುಂದೇನು ಆಗುತ್ತೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟವಾಗಿರುವುದರಿಂದ ಎಲ್ಲರೂ ಮುಂದಿನ ಬೆಳವಣಿಗೆಯನ್ನು ಕಾದು ನೋಡುವುದು ಅನಿವಾರ್ಯವಾಗಿದೆ.












Click it and Unblock the Notifications