ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ಇದು ಸಹಿಸಲಾಗುತ್ತಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು
ಮಂಗಳೂರು ಕ್ಯಾಬಿನೆಟ್ ಬಗ್ಗೆ "ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್ ಎಂದು ಬಿಜೆಪಿ ಹೇಳಿದ್ದು ಇದಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ಮಾಡಿರುವುದು "ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್' ಎನ್ನುವುದು ಬಿಜೆಪಿಗರ ಹತಾಶೆಯ ಟೀಕೆ, ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿಪರ ನಿಲುವುಗಳನ್ನು ನೋಡಿ ತಳಮಳ ಶುರುವಾಗಿದೆ. ಬಿಜೆಪಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿತ್ತು, ನಾವು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಬಿಜೆಪಿ ಕರಾವಳಿಯನ್ನು ಕೇವಲ ಮತಬ್ಯಾಂಕಿನ ಪ್ರದೇಶವಾಗಿ ಮಾತ್ರ ಕಾಣುತ್ತದೆ, ನಾವು ಕರಾವಳಿಯಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ. ಬಿಜೆಪಿಗರು ಕರಾವಳಿಗೆ ಕಾಲಿಡುತ್ತಿದ್ದಿದ್ದು ಹೊಡಿ, ಬಡಿ ಎಂಬ ಪ್ರಚೋದನೆಯ ಭಾಷಣ ಕುಟ್ಟುವುದಕ್ಕೆ ಮಾತ್ರವಾಗಿತ್ತು, ನಾವು ಕರಾವಳಿಗರ ಆತ್ಮಗೌರವವನ್ನು ಗೌರವಿಸಲು ಕಾಲಿಟ್ಟಿದ್ದೇವೆ.

Coastal Karnataka: ಬಿಜೆಪಿ ಕರಾವಳಿಯಲ್ಲಿ ಕೋಮು ಕಲಹದ ಚರ್ಚೆಗಳನ್ನು ಮಾತ್ರ ಹುಟ್ಟು ಹಾಕುತ್ತಿತ್ತು
ಬಿಜೆಪಿ ಕರಾವಳಿಯಲ್ಲಿ ಕೋಮು ಕಲಹದ ಚರ್ಚೆಗಳನ್ನು ಮಾತ್ರ ಹುಟ್ಟು ಹಾಕುತ್ತಿತ್ತು, ನಾವು ಡೇಟಾ ಸೆಂಟರ್, ವಾಟರ್ ಮೆಟ್ರೋ, ಪ್ರವಾಸೋದ್ಯಮ, ಮರೀನ್ ಬಯೋಟೆಕ್, ಮಾಹಿತಿ ತಂತ್ರಜ್ಞಾನಗಳಂತಹ ಪ್ರಗತಿಪರ ವಿಷಯಗಳ ಚರ್ಚೆ ಹುಟ್ಟುಹಾಕಿದ್ದೇವೆ. ದಕ್ಷಿಣ ಕನ್ನಡದ ಜನರ ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಕೆಲಸ ಬಿಜೆಪಿಗರು ಮಾಡಿರಲಿಲ್ಲ, ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ್ದು ನಮ್ಮ ಸರ್ಕಾರ. ಕೋಮು ಪ್ರಚೋದನೆ ಮತ್ತು ರಕ್ತ ಕಣ್ಣೀರು ಇವೆರಡನ್ನೂ ಹೊರತುಪಡಿಸಿದರೆ ಕರಾವಳಿಗೆ ಬಿಜೆಪಿ ಕೊಟ್ಟ ಕೊಡುಗೆ ಶೂನ್ಯ!
ಕರಾವಳಿಯ 3 ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಘೋಷಣೆ ಐತಿಹಾಸಿಕವಾದುದು, ಕರಾವಳಿಯನ್ನು ಮತಬ್ಯಾಂಕ್ ಮಾಡಿಕೊಂಡಿದ್ದ ಬಿಜೆಪಿಗೆ ಈ ಅಭಿವೃದ್ಧಿಪರ ನಿಲುವು ತಳೆಯುವುದಕ್ಕೆ ಸಾಧ್ಯವಾಗಲಿಲ್ಲ ಏಕೆ? ಜನತೆ ಕೋಮು ವಿಷಯಗಳನ್ನು ಬಿಟ್ಟು ಪ್ರಗತಿಯ ವಿಷಯಗಳತ್ತ ಚಿಂತನೆಗಳನ್ನು ಆರಂಭಿಸಿರುವುದೇ ಬಿಜೆಪಿಗೆ ಅಸ್ತಿತ್ವದ ಭಯ ಕಾಡಲು ಶುರುವಾಗಿದೆ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಕರಾವಳಿ ಭಾಗದ ಜನರ ಆಶಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಆದರೆ ಜನರ ಸಮಸ್ಯೆಗಳನ್ನು ಆಲಿಸಲು, ಪರಿಹಾರ ಕಂಡುಕೊಳ್ಳಲು ಸರ್ಕಾರ ಕೈಗೊಂಡಿರುವ ಈ ಪ್ರಯತ್ನವನ್ನೇ ಬಿಜೆಪಿಯವರು ಟೀಕಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಕಲ್ಯಾಣ ಕರ್ನಾಟಕವಾಗಲಿ, ಕರಾವಳಿಯಾಗಲಿ, ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಪ್ರಬುದ್ಧತೆ ಇದ್ದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಜನರಲ್ಲಿ ಈ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ.
ಸರ್ಕಾರವೇ ಜನರ ಮನೆಬಾಗಿಲಿಗೆ ಬಂದು ಸಮಸ್ಯೆಗಳಿಗೆ ಪರಿಹಾರ ನೀಡುವುದು ತಪ್ಪೇ? ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಲೋಕಾರ್ಪಣೆ ಮಾಡುವುದು ತಪ್ಪೇ? ಅಭಿವೃದ್ಧಿಯ ಕೆಲಸಗಳಲ್ಲೂ ರಾಜಕೀಯ ಹುಡುಕುತ್ತ ಕುಳಿತರೆ ಜನರಿಗೆ ಉತ್ತರ ನೀಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ರಾಜಕೀಯಕ್ಕಿಂತ ಜನರ ಹಿತಕ್ಕೆ ಆದ್ಯತೆ ನೀಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವುದರಲ್ಲಿ ನಿರತವಾಗಿರಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.


Click it and Unblock the Notifications
