Karnataka Election: 2018ರ ಚುನಾವಣೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್
ಕರಾವಳಿ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯದ್ದೇ ಕಾರುಬಾರು. ಹಿಂದೆ ಉತ್ತರ ಕನ್ನಡ ಜಿಲ್ಲೆಯೂ ಕರಾವಳಿ ಕರ್ನಾಟಕದ ವ್ಯಾಪ್ತಿಯಲ್ಲಿದ್ದರೂ ನಂತರ ಅದನ್ನು ಕಿತ್ತೂರು ಕರ್ನಾಟಕ ಭಾಗದಡಿಯಲಿ ತರಲಾಯಿತು.
ಕ್ಷೇತ್ರಾಭಿವೃದ್ದಿ ವಿಚಾರಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸು ಮತ್ತು ಜಾತಿ ಆಧಾರಿತ ರಾಜಕಾರಣಕ್ಕೆ ಹೆಸರಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕ್ಷೇತ್ರಗಳ ಕೆಲವೊಂದು ಮತಗಟ್ಟೆಗಳು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲ್ಪಟ್ಟಿದೆ. ಎರಡು ಜಿಲ್ಲೆಯಲ್ಲಿ ಒಟ್ಟು ಹದಿಮೂರು ಕ್ಷೇತ್ರಗಳಿವೆ.

ಕಳೆದ ಕೆಲವು ವರ್ಷಗಳಿಂದ ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಜೆಡಿಎಸ್ ಇಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಿದ ಉದಾಹರಣೆಗಳು ತೀರಾ ಕಮ್ಮಿ. SDPI ಅಭ್ಯರ್ಥಿಗಳು ಕಣದಲ್ಲಿದ್ದರೂ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗದೇ ಇದ್ದದ್ದು ಹೆಚ್ಚು.
ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಎಂಟು, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡಿತ್ತು.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಬಂಟ್ವಾಳ, ಮೂಡಬಿದರೆ, ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರವನ್ನು ಹೊಂದಿದೆ. ಇವೆಲ್ಲವೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಇನ್ನು, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಉಡುಪಿ, ಕಾರ್ಕಳ, ಕಾಪು, ಕುಂದಾಪುರ ಮತ್ತು ಬೈಂದೂರು ಕ್ಷೇತ್ರವನ್ನು ಹೊಂದಿದೆ. ಬೈಂದೂರು ಹೊರತು ಪಡಿಸಿ ಮಿಕ್ಕೆಲ್ಲಾ ಕ್ಷೇತ್ರಗಳು ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಬೈಂದೂರು ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
2018ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ಸಿನ ಯು.ಟಿ.ಖಾದರ್ ಗೆಲುವು ಸಾಧಿಸಿದ್ದರು.ಇನ್ನು, ಮಂಗಳೂರು ದಕ್ಷಿಣದಿಂದ ವೇದವ್ಯಾಸ ಕಾಮತ್, ಉತ್ತರದಿಂದ ಡಾ.ಭರತ್ ಶೆಟ್ಟಿ, ಬೆಳ್ತಂಗಡಿಯಿಂದ ಹರೀಶ್ ಪೂಂಜಾ, ಮೂಡಬಿದರೆಯಿಂದ ಉಮಾನಾಥ ಕೋಟ್ಯಾನ್, ಬಂಟ್ವಾಳದಿಂದ ರಾಜೇಶ್ ನಾಯಕ್, ಪುತ್ತೂರಿನಿಂದ ಸಂಜೀವ ಮಠಂದೂರು ಆಯ್ಕೆಯಾಗಿದ್ದರು. ಇವೆರೆಲ್ಲರೂ ಬಿಜೆಪಿಯ ಅಭ್ಯರ್ಥಿಗಳಾಗಿದ್ದರು.
ಇನ್ನು, ಉಡುಪಿಯಲ್ಲಿ ರಘುಪತಿ ಭಟ್, ಕಾಪುವಿನಿಂದ ಲಾಲಾಜಿ ಮೆಂಡನ್, ಕಾರ್ಕಳದಿಂದ ಸುನೀಲ್ ಕುಮಾರ್, ಬೈಂದೂರಿನಿಂದ ಸುಕುಮಾರ್ ಶೆಟ್ಟಿ ಮತ್ತು ಕುಂದಾಪುರದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಯ್ಕೆಯಾಗಿದ್ದರು, ಎಲ್ಲರೂ ಬಿಜೆಪಿಯವರು.
| ಜಿಲ್ಲೆ | ಒಟ್ಟು ಕ್ಷೇತ್ರಗಳು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರರು |
| ದಕ್ಷಿಣ ಕನ್ನಡ | 08 | 07 | 01 | 00 | 00 |
| ಜಿಲ್ಲೆ | ಒಟ್ಟು ಕ್ಷೇತ್ರಗಳು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರರು |
| ಉಡುಪಿ | 05 | 05 | 00 | 00 | 00 |












Click it and Unblock the Notifications