ಕಾಂಗ್ರೆಸ್ಸಿಗರು 'ತಲೆತಿರುಕರು' ಎನ್ನುವ ಯಡಿಯೂರಪ್ಪ ಹೇಳಿಕೆ ಸರೀನಾ?
ನವದೆಹಲಿ, ಆ 17: ಕಂಡು ಕೇಳರಿಯದ ನೆರೆಪ್ರವಾಹಕ್ಕೆ ಸಿಕ್ಕಿರುವ ಕರ್ನಾಟಕಕ್ಕೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಕರ್ನಾಟಕ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ.
ಕೇಂದ್ರ ಸರಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಿದ್ದಾರೆ, ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎನ್ನುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, " ಇದು ತಲೆತಿರುಕರು ಆಡುವ ಮಾತಿದು. ಪ್ರಧಾನಿಯವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ" ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
" ಅಮಿತ್ ಶಾ ಅವರು ವೈಮಾನಿಕ ಸಮೀಕ್ಷೆ ಮಾಡಿ ಹೋದರು, ನಿರ್ಮಲಾ ಸೀತಾರಾಮನ್ ಕೂಡಾ ಬಂದಿದ್ದರು. ಒಂದು ವಾರದಲ್ಲಿ ನಿರಾಶ್ರಿತ ಶಿಬಿರಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಲಾಗಿದೆ. ಶುಕ್ರವಾರ ಪ್ರಧಾನಿಯವರನ್ನು ಭೇಟಿಯಾದಾಗ, ಟೀಂ ಕಳುಹಿಸಿಕೊಡುತ್ತೇನೆ ಎಂದಿದ್ದಾರೆ".

" ತಾತ್ಕಾಲಿಕವಾಗಿ ಹಣ ಬಿಡುಗಡೆ ಮಾಡುವುದಾಗಿ ಪ್ರಧಾನಿಯವರು ಹೇಳಿದ್ದಾರೆ. ಹೀಗಿರುವಾಗ, ಕಾಂಗ್ರೆಸ್ಸಿನವರು ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವಂತಹ ವಿಚಾರವಲ್ಲ" ಎಂದು ಯಡಿಯೂರಪ್ಪ ಹೇಳಿದರು.
"ಇಂದು ಹೇಗಾದರೂ ಮಾಡಿ ಅಮಿತ್ ಶಾ ಅವರನ್ನು ಭೇಟಿಯಾಗಿ ಸಂಪುಟ ರಚನೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಾ ಸರಿಹೋದರೆ, ಮುಂದಿನ ಸೋಮವಾರ ಅಥವಾ ಮಂಗಳವಾರ ಸಂಪುಟ ರಚನೆಯಾಗಲಿದೆ" ಎಂದು ಯಡಿಯೂರಪ್ಪ ಹೇಳಿದರು.
"ಈ ಹಿಂದಿನ ಯಾವ ಸರ್ಕಾರಗಳೂ ನೆರೆ ಅಥವಾ ಬರ ಪರಿಸ್ಥಿತಿ ಎದುರಾದಾಗ ರಾಜ್ಯವನ್ನು ನಿರ್ಲಕ್ಷ್ಯ ಮಾಡಿರಲಿಲ್ಲ. ಆದರೆ, ಕೇಂದ್ರ ಸರ್ಕಾರ ರಾಜ್ಯವನ್ನು ನಿರ್ಲಕ್ಷಿಸಿದ್ದಲ್ಲದೆ, ಮುಖ್ಯಮಂತ್ರಿಯನ್ನು ಅವಮಾನಿಸಿದೆ" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications