ರಾಜ್ಯಕ್ಕೆ 1,87,867 ಕೋಟಿ ರೂ ಅನ್ಯಾಯ: ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಮನವಿ
ಬೆಂಗಳೂರು, ಫೆಬ್ರವರಿ 06: ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಳೆ(ಫೆಬ್ರವರಿ 06) ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಅನುದಾನ ತಾರತಮ್ಯ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುವ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗುತ್ತಿದ್ದು, ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ 'ಕೇಂದ್ರ ಸರ್ಕಾರದಿಂದ ಕರ್ನಾಟಕದ ಮೇಲೆ ನಡೆಯುತ್ತಿರುವ ಆರ್ಥಿಕ ದೌರ್ಜನ್ಯದ ವಿರುದ್ಧ ಧ್ವನಿಯೆತ್ತೋಣ. ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಹಕ್ಕಿಗಾಗಿ ಪ್ರತಿಭಟಿಸೋಣ' ಎಂದಿದ್ದಾರೆ.

'ಕೇಂದ್ರದಿಂದ ಕರುನಾಡಿಗೆ ಅನ್ಯಾಯ ಉತ್ತರ ರಾಜ್ಯಗಳ ಪಾಲಾಗುತ್ತಿದೆ ಕನ್ನಡಿಗರ ಬೆವರ ಹಣ ಎಂದಿರುವ ಸಿದ್ದರಾಮಯ್ಯ ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾದರೂ ಏರಿಕೆಯಾಗದ ರಾಜ್ಯದ ತೆರಿಗೆ ಪಾಲು' ಎಂದು ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.
"2017-18 ರಲ್ಲಿ ಕೇಂದ್ರದ ಬಜೆಟ್ ಗಾತ್ರ 21,46,735 ಕೋಟಿ ಇತ್ತು. ಆಗ ರಾಜ್ಯಕ್ಕೆ ತೆರಿಗೆ ಪಾಲು ರೂ. 31,908 ಕೋಟಿ, ಅನುದಾನ ಹಾಗೂ ನಗದು ಹಂಚಿಕೆ ರೂ.16,072 ಕೋಟಿ, ಎರಡೂ ಸೇರಿಸಿ ರೂ.47,990 ಕೋಟಿ ಸಿಕ್ಕಿತ್ತು. 2023-24 ಸಾಲಿನಲ್ಲಿ 45,03,097 ಕೋಟಿ ಕೇಂದ್ರ ಬಜೆಟ್ ಆಗಿದ್ದು, ರಾಜ್ಯಕ್ಕೆ ರೂ.50,257 ಕೋಟಿ ಮಾತ್ರ ಸಿಗುವ ಅಂದಾಜಿದೆ. ತೆರಿಗೆ ಹಂಚಿಕೆ 2.2 ಇಂದ 2024-25 ಕ್ಕೆ 1.23 ಗೆ ಇಳಿದಿದೆ. ಇದರಿಂದಾಗಿ ರಾಜ್ಯಕ್ಕೆ ಆಗುವ ಅನ್ಯಾಯದ ಪ್ರಮಾಣ ಹೆಚ್ಚುತ್ತಲೇ ಇದೆ" ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಕರ್ನಾಟಕದ ಮೇಲೆ ನಡೆಯುತ್ತಿರುವ ಆರ್ಥಿಕ ದೌರ್ಜನ್ಯದ ವಿರುದ್ಧ ಧ್ವನಿಯೆತ್ತೋಣ.
— Siddaramaiah (@siddaramaiah) February 6, 2024
ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಹಕ್ಕಿಗಾಗಿ ಪ್ರತಿಭಟಿಸೋಣ. #ನನ್ನತೆರಿಗೆನನ್ನಹಕ್ಕು #MyTaxMyRight pic.twitter.com/lTNRfGcx4W
ಇನ್ನು "ಬಜೆಟ್ ಗಾತ್ರ ಡಬಲ್ ಆದಾಗ, ರಾಜ್ಯದ ತೆರಿಗೆಯ ಪಾಲು ದುಪ್ಪಟ್ಟಾಗಬೇಕಿತ್ತು. ಆದರೆ ಈಗ ಅರ್ಧಕ್ಕಿಂತ ಹೆಚ್ಚು ಕಡಿಮೆ ಆಗಿದೆ. ಸೆಸ್, ಸರ್ ಚಾರ್ಜ್ ಪ್ರತೀ ವರ್ಷ ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ. ಸೆಸ್, ಸರ್ ಚಾರ್ಜ್ ಮೂಲಕ ಕೇಂದ್ರ ವಸೂಲಿ ಮಾಡುವ ತೆರಿಗೆಯಲ್ಲಿ ರಾಜ್ಯಗಳಿಗೆ ನಯಾಪೈಸೆ ವಾಪಾಸ್ ಬರಲ್ಲ.
ಆದರೆ ಸೆಸ್, ಸರ್ ಚಾರ್ಜ್ ಎರಡೂ ಕೊಡುವುದು ರಾಜ್ಯಗಳೇ, ಆದ್ದರಿಂದ 16ನೇ ಹಣಕಾಸು ಆಯೋಗದ ಮುಂದೆ ಸೆಸ್ ಹಾಗೂ ಸರ್ ಚಾರ್ಜ್ ನಲ್ಲೂ ಪಾಲು ಕೊಡಲೇಬೇಕು ಎಂದು ಒತ್ತಾಯಿಸುತ್ತೇವೆ. ಈ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲಿದ್ದೇವೆ. ಮೋದಿ ಅವರು ಬಂದ ನಂತರ ರಚನೆಯಾದ 15ನೇ ಹಣಕಾಸು ಆಯೋಗದ ಬಳಿಕ ರಾಜ್ಯಕ್ಕೆ 1,87,867 ಕೋಟಿ ರೂ. ಅನ್ಯಾಯವಾಗಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.












Click it and Unblock the Notifications