ಪೊಲೀಸರ ಪ್ರತಿಭಟನೆ, ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಜೂನ್ 01 : 'ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರಾಗಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ, ಮಾನ, ಪ್ರಾಣ ಕಾಪಾಡುವ ಜವಾಬ್ದಾರಿ ಇಲಾಖೆಯ ಮೇಲಿದೆ. ಪ್ರಚೋದನೆಗೆ ಒಳಗಾಗಿ ಪ್ರತಿಭಟನೆಯ ಹಾದಿ ತುಳಿಯಬೇಡಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಜೂನ್ 4ರಂದು ಪೊಲೀಸರು ಸಾಮೂಹಿಕ ರಜೆ ಹಾಕಲಿದ್ದಾರೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಮುಖ್ಯಮಂತ್ರಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಪ್ರತಿಭಟನೆ ಹಾದಿ ತುಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. [ಪೊಲೀಸರ ಸಮಸ್ಯೆಗೆ ಕಿವಿಗೊಡಿ, ಸರ್ಕಾರಕ್ಕೆ ಆಪ್ ಸಲಹೆ]

siddaramaiah

ಮುಖ್ಯಮಂತ್ರಿಗಳು ಹೇಳಿದ್ದಿಷ್ಟು [ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ]

* ಮಾನ್ಯತೆ ಇಲ್ಲದ ಸಂಘವೊಂದು ಜೂನ್ 4ರಂದು ಪೊಲೀಸರ ಪ್ರತಿಭಟನೆಗೆ ಕರೆ ನೀಡಿದೆ. ಒಂದು ದಿನ ಸಾಮೂಹಿಕ ರಜೆ ಹಾಕುವಂತೆ ಆ ಸಂಘದ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ. [ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಶಾಕಿಂಗ್ ವರದಿ]

* ಪೊಲೀಸ್ ಇಲಾಖೆ ಮೊದಲಿನಿಂದಲೂ ಶಿಸ್ತಿಗೆ ಹೆಸರಾದ ಇಲಾಖೆ. ರಾಜ್ಯದ ಜನರ ಆಸ್ತಿಪಾಸ್ತಿ, ಮಾನ, ಪ್ರಾಣ ಕಾಪಾಡಲು ಇರುವಂಥ ಜವಾಬ್ದಾರಿಯುತ ಇಲಾಖೆ. ಇಲಾಖೆಯಲ್ಲಿ ಅಶಿಸ್ತಿಗೆ ಎಂದೂ ಅವಕಾಶ ನೀಡಬಾರದು. ಅಶಿಸ್ತಿನಿಂದ ಯಾರೇ ನಡೆದುಕೊಂಡರೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಜೊತೆಗೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ.

* ಪೊಲೀಸರ ಬೇಡಿಕೆಗಳು ನ್ಯಾಯಯುತವಾಗಿದ್ದರೆ ಸರ್ಕಾರ ಅಥವಾ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆನಡೆಸಲಿ. ಈ ವಿಚಾರದಲ್ಲಿ ಸರ್ಕಾರ ಮುಕ್ತ ಮನಸ್ಸಿನಿಂದ ಇರಲಿದೆ. ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದರೆ ಅವುಗಳನ್ನು ಈಡೇರಿಸಲು ಬದ್ಧವಾಗಿದೆ.

* ಮಾನ್ಯತೆ ಇಲ್ಲದ ಸಂಘ ಕರೆ ನೀಡಿರುವ ಪ್ರತಿಭಟನೆಯಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಬಾರದು. ರಜೆ ಹಾಕುವ ಪ್ರಯತ್ನ ಮಾಡಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಅದು ಅಶಿಸ್ತು ಆಗಲಿದೆ. ನನಗೂ ನಮ್ಮ ಪೊಲೀಸರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.

* ಮಾನ್ಯತೆ ಇಲ್ಲದ ಸಂಘದ ಮಾತುಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಕಾನೂನು ಪಾಲನೆ ಮತ್ತು ರಾಜ್ಯದ ಜನರ ಹಿತದೃಷ್ಟಿಯಿಂದ ಪೊಲೀಸರು ಪ್ರತಿಭಟನೆಯಿಂದ ದೂರ ಉಳಿಯಲಿದ್ದಾರೆ. ಪ್ರಚೋದಿಸುವವರ ಮಾತುಗಳನ್ನು ಧಿಕ್ಕರಿಸುತ್ತಾರೆ ಎಂಬ ವಿಶ್ವಾಸವಿದೆ. ಜೊತೆಗೆ ಸಾಮೂಹಿಕ ರಜೆಗೆ ಇಲಾಖೆಯಲ್ಲಿ ಅವಕಾಶವೂ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು.

* ಪೊಲೀಸರನ್ನು ಪ್ರಚೋದಿಸುತ್ತಿರುವವರು ಯಾರು? ಎಂಬುದನ್ನು ಸರ್ಕಾರ ಗುರುತಿಸುತ್ತಿದೆ. ಅವರ ವಿರುದ್ಧ ಕೈಗೊಳ್ಳಬೇಕಾದ ಕ್ರಮ ಏನು ಎಂಬುದನ್ನು ಮುಂದೆ ನಿರ್ಧರಿಸಲಾಗುವುದು. ಬಿಜೆಪಿಯ ಕೆಲ ನಾಯಕರೂ ಪೊಲೀಸರನ್ನು ಪ್ರಚೋದಿಸುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಅವರು ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಇದರಿಂದ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗುವುದು ಖಂಡನೀಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A non-recognized organization has called for protest by police on June 4, 2016 by going on one day mass leave. It is a department that has the responsibility of protecting public life and property. There should not be any room for indiscipline said Karnataka Chief Minister Siddaramaiah.
Please Wait while comments are loading...