ಜ್ವರ, ಕೆಮ್ಮು, ನೆಗಡಿ ಬಂದ್ರೆ ಸಿಎಂ ಸಿದ್ದರಾಮಯ್ಯ ಏನು ತಿಂತಿದ್ರು ಗೊತ್ತಾ?
ಬಾಲ್ಯದಲ್ಲಿ ನನಗೆ ಜ್ವರ, ಕೆಮ್ಮು-ನೆಗಡಿ ಬಂದರೆ ಡಾಕ್ಟರ್ ಬಳಿಗೆ ಹೋಗುತ್ತಿರಲಿಲ್ಲ. ಆರೋಗ್ಯ ಕೆಟ್ಟರೆ ಚಿಕನ್ ಬಿರಿಯಾನಿ, ಮಟನ್ ಫ್ರೈ ತಿನ್ನುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನಗೆ ಈಗ ವಯಸ್ಸಾಗಿರುವುದರಿಂದ ಜ್ವರ, ನೆಗಡಿಗೆ ಚಿಕನ್, ಮಟನ್ ತಿಂದರೆ ಗುಣಮುಖನಾಗಲ್ಲ, ಬದಲಿಗೆ ಇನ್ನೂ ಹೆಚ್ಚಾಗುತ್ತೆ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಈ ರೀತಿ ಮಾತನಾಡಿದ್ದಾರೆ. ಈ ಹಿಂದೆ ಹಳ್ಳಿಗಳಲ್ಲಿ ಶುಗರ್, ಬಿಪಿ ರೋಗಗಳೇ ಇರಲಿಲ್ಲ. ಈಗ ಗ್ರಾಮೀಣ ಭಾಗಕ್ಕೂ ಬಿಪಿ, ಶುಗರ್ ವಕ್ಕರಿಸಿದೆ. ಪೌಷ್ಟಿಕ ಹಾಗೂ ಸಾವಯವ ಆಹಾರ ಪದ್ಧತಿಯಿಂದ ಹಳ್ಳಿ ಜನರು ಕೂಡ ದೂರ ಸರಿಯುತ್ತಿದ್ದು ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮದ್ಯ ಸೇವನೆ ಬಿಟ್ಟರೆ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್: ಜನರು ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ, ಸರ್ಕಾರವೂ ಮದ್ಯ ಮಾರಾಟ ನಿಲ್ಲಿಸುತ್ತದೆ ಎಂದು ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮದ್ಯ ಸೇವನೆ ಅಪಾಯ, ದುಶ್ಚಟಗಳಿಂದ ದೂರವಿರಿ ಎಂದು ಹೇಳುವ ಸರ್ಕಾರವೇ ಮದ್ಯ ಮಾರಾಟ ಮಾಡೋದು ಸರೀನಾ? ಎಂದು ಹಲವರು ಕೇಳುತ್ತಾರೆ. ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸರ್ಕಾರವು ಅನಿವಾರ್ಯವಾಗಿ ಮದ್ಯ ಮಾರಾಟ ಮಾಡುತ್ತಿದೆ ಎಂದಿದ್ದಾರೆ. ಇನ್ನು ಕರ್ನಾಟಕದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವುದರಿಂದ ಅಬಕಾರಿ ಆದಾರ ಕೂಡ ಹೆಚ್ಚಾಗುತ್ತಿದೆ. ಆದರೆ ಜನರು ದಯವಿಟ್ಟು ಮದ್ಯಪಾನ ಮಾಡಬೇಡಿ, ಒಳ್ಳೆಯ ಆರೋಗ್ಯವಾದ ಜೀವನ ನಡೆಸಿ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಸಂವಿಧಾನದ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು: ಸಂವಿಧಾನ ಬಂದ ನಂತರ ಎಲ್ಲರೂ ಸಮಾನ ಅವಕಾಶಗಳನ್ನು ಪಡೆಯುವಂತಾಗಿದೆ. ಯಾರೂ ಯಾರಿಂದಲೂ ಶೋಷಣೆಗೆ ಒಳಗಾಗಬಾರದು, ಎಲ್ಲರಿಗೂ ಸಮಾನ ಶಿಕ್ಷಣ, ಬದುಕುವ ಅವಕಾಶಗಳನ್ನು, ಸಂವಿಧಾನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ದೊರಕಿಸಿ ಕೊಟ್ಟಿದ್ದಾರೆ. ಅದಕ್ಕಾಗಿಯೇ ನಮ್ಮ ಸರ್ಕಾರ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಓದಿಸಲಾಗುತ್ತಿದೆ. ಸಂವಿಧಾನದ ಆಶಯಗಳು ಹಾಗೂ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂವಿಧಾನ ಗೊತ್ತಿಲ್ಲದೇ ಹೋದರೆ ನಮಗಿರುವ ಹಕ್ಕುಗಳು ಯಾವುವು, ನಮ್ಮ ಕರ್ತವ್ಯಗಳೇನು ಎಂದು ತಿಳಿಯುವುದಿಲ್ಲ. ನಮಗೆ ಹಕ್ಕುಗಳು ತಿಳಿದರೆ ಅವುಗಳನ್ನು ಪಡೆಯುವ ಪ್ರಯತ್ನ ಮಾಡಬಹುದು. ಎಲ್ಲರಿಗೂ ಒಂದೇ ರೀತಿಯ ಹಕ್ಕುಗಳಿವೆ. ದಲಿತರು, ಹಿಂದುಳಿದವರು, ಮುಂದುವರೆದವರು ಬಹುಸಂಖ್ಯಾತರಿಗೆ ಒಂದೇ ರೀತಿಯ ಹಕ್ಕುಗಳಿವೆ ಎಂದಿದ್ದಾರೆ.
ಧರ್ಮವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. 'ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ' ಎಂದು ಬಸವಣ್ಣ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ದಯೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದಕ್ಕಾಗಿಯೇ 12ನೇ ಶತಮಾನದಲ್ಲಿಯೇ ಸಮಸಮಾಜಕ್ಕಾಗಿ ಕ್ರಾಂತಿ ಮಾಡಿದರು. ಕಂದಾಚಾರ, ಮೌಢ್ಯಗಳ ವಿರುದ್ಧ ಹೋರಾಟ ಮಾಡಿದರು, ಜೊತೆಗೆ ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈಗಲೂ ಅನೇಕರು ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಡುತ್ತಾರೆ. ಸ್ವರ್ಗ ನರಕದ ಕಲ್ಪನೆಯನ್ನು ನಿರಾಕರಿಸಿದ್ದ ಬಸವಣ್ಣ 'ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ' ಎಂದು ಹೇಳಿದ್ದರು. ಇದನ್ನು ನಾವು ಪಾಲನೆ ಮಾಡಬೇಕು. ನಾವೆಲ್ಲರೂ ಮನುಷ್ಯರಾಗಿ, ಮಾನವರಾಗಿ ಬದುಕುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.












Click it and Unblock the Notifications