ಮೋದಿ ಪ್ರಧಾನಿ ಆದ್ರೆ ದೇಶ ಬಿಡ್ತೀನಿ ಅಂದಿದ್ದ ದೇವೇಗೌಡ್ರು ಈಗ ಚೇಂಜ್-ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ, ಮಾರ್ಚ್ 14: ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟ ಬಿಜೆಪಿಯವರೇ ನಾಡಿನ ಜನರ ಎದುರು ಮೂರ್ಖರಾಗಿದ್ದಾರೆ. ಒಂದೂ ಗ್ಯಾರಂಟಿ ಯೋಜನೆ ಜಾರಿ ಆಗಲು ಸಾಧ್ಯವೇ ಇಲ್ಲ ಎಂದು ಜನರನ್ನು ಮೂರ್ಖರನ್ನಾಗಿ ಮಾಡಲು ಹೋದರು. ನಾವು ಐದೂ ಗ್ಯಾರಂಟಿಗಳನ್ನು ಕೇವಲ ಎಂಟು ತಿಂಗಳಲ್ಲಿ ಜಾರಿ ಮಾಡಿದೆವು. ಈಗ ನಾಡಿನ ಜನರ ಎದುರು ಬಿಜೆಪಿಯವರು ಪರಮ ಮೂರ್ಖರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಸುಳ್ಳುಗಳಿಗೆ ಮಿತಿಯೇ ಇಲ್ಲ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ರೂ ನೀಡುತ್ತೇವೆ ಎಂದರು. ಒಬ್ಬೇ ಒಬ್ಬ ಭಾರತೀಯನ ಖಾತೆಗೆ 15 ಲಕ್ಷ ಇರಲಿ, 15 ರೂಪಾಯಿ ಆದರೂ ಹಾಕಿದ್ರಾ ಮೋದಿಯವರೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದಿದ್ದ ಮೋದಿಯವರು ಇದನ್ನು ಮಾಡಿದ್ರಾ? ರೈತರ ಖರ್ಚು ಮೂರು ಪಟ್ಟು ಆಗಿದೆ. ಇದೇ ನಿಮ್ಮ ಅಚ್ಛೆ ದಿನವಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದಿದ್ದ ಮೋದಿಯವರು ಮಾಡಿದ್ರಾ? ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಮೋದಿಯವರು ಮಾಡಿದ್ರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಾವು ಐದು ಗ್ಯಾರಂಟಿ ಘೋಷಣೆ ಮಾಡಿ, ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿ ಜಾರಿ ಮಾಡಿ ಪ್ರತೀ ದಿನ, ಪ್ರತೀ ತಿಂಗಳು ನಾಡಿನ ಜನ ಇದರ ಫಲ ಅನುಭವಿಸುತ್ತಿದ್ದಾರೆ. ನಾಡಿನ ಜನರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿದೆ. ಇದೇ ನಮಗೂ, ಮೋದಿಯವರಿಗೂ ಇವರು ವ್ಯತ್ಯಾಸ.
ನೀವೂ ಸೇರಿ 7 ಕೋಟಿ ಕನ್ನಡಿಗರಿಗೆ ದ್ರೋಹ ಎಸಗಿದ ಬಿಜೆಪಿ ಪಕ್ಷ ಮತ್ತು ಸಂಸದರನ್ನು ಕ್ಷಮಿಸಬೇಡಿ. ನಾವು ಕೇಂದ್ರಕ್ಕೆ ಕೊಡುವ ಪ್ರತಿ 100 ರೂಪಾಯಿಯಲ್ಲಿ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಕೇವಲ 13 ರೂ. ಈ ಭೀಕರ ಅನ್ಯಾಯವನ್ನು ರಾಜ್ಯದಿಂದ ಆರಿಸಿ ಹೋದ ಸಂಸದರು ಇವತ್ತಿನವರೆಗೂ ಪ್ರಶ್ನಿಸಿಲ್ಲ. ಈ ಸಂದರನ್ನು ಎಂದಿಗೂ ಕ್ಷಮಿಸಬೇಡಿ ಎಂದರು.
ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ, ಮುಂದಿನ ಜನ್ಮದಲ್ಲಿ ಮುಸ್ಲೀಮನಾಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿ ಪ್ಲೇಟ್ ಚೇಂಜ್ ಮಾಡಿದ್ದಾರೆ. ತಮಗೂ ಮೋದಿಯವರಿಗೂ ನಡುವೆ ಅವಿನಾಭಾವ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ. ದೇವೇಗೌಡರು ತಮ್ಮ ಪಕ್ಷದ ಹೆಸರಿನಲ್ಲಿರುವ ಸೆಕ್ಯುಲರ್ ಪದ ಕಿತ್ತಾಕಿದರೆ ಒಳ್ಳೆಯದು ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications