Munirathna Incident: ಮುನಿರತ್ನ ಮೇಲಿನ ಹಲ್ಲೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಹಾಗೂ ಕಲ್ಲಿನಿಂದ ದಾಳಿಯಾಗಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಯಾರು ಮಾಡಿದ್ದೋ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ.
ಮುನಿರತ್ನ ಅವರ ಮೇಲೆ ಯಾರು ದಾಳಿ ನಡೆಸಿದರೋ ಗೊತ್ತಿಲ್ಲ. ಮುನಿರತ್ನ ಮೇಲೆ ಮೊಟ್ಟೆ ಎಸೆದಿದ್ದಾರೆ ಎನ್ನುವುದು ಗೊತ್ತಿದೆ. ಆದರೆ, ಯಾರು ಎಸೆದಿದ್ದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಇಬ್ಬರು ಮೊಟ್ಟೆ ಎಸೆದಿರುವ ಬಗ್ಗೆ ಮಾಹಿತಿ ಇದೆ. ಅವರು ನಮ್ಮ ಪಕ್ಷಕ್ಕೆ ಸೇರಿದ್ದಾ ಅಥವಾ ಬೇರೆಯವರಾ ಎನ್ನುವುದು ಇನ್ನು ಗೊತ್ತಾಗಿಲ್ಲ ಎಂದಿದ್ದಾರೆ.

ಜಾತಿನಿಂದನೆ, ಹನಿಟ್ರ್ಯಾಪ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಾಸಕ ಮುನಿರತ್ನ ಅವರು ಜಾಮೀನಿನ ಮೇಲೆ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದರು. ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮುನಿರತ್ನ ನಾಯ್ಡು ಮೇಲೆ ಕೆಲವರು ದಾಳಿ ನಡೆಸಿದ್ದರು. ಮುನಿರತ್ನ ಅವರ ತಲೆಗೆ ಮೊಟ್ಟೆಯಿಂದ ಹೊಡೆದಿರುವ ಘಟನೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ನಡೆದಿತ್ತು.
ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗವಹಿಸಿ ವಾಪಸ್ ಆಗುತ್ತಿದ್ದಾಗ ಕಲ್ಲು ಮತ್ತು ಮೊಟ್ಟೆಯಿಂದ ದಾಳಿಯಾಗಿತ್ತು. ಮುನಿರತ್ನ ಮೇಲೆ ದಾಳಿ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಲಾಗಿತ್ತು. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ತಮ್ಮ ಮೇಲಿನ ದಾಳಿ ಖಂಡಿಸಿ ಮುನಿರತ್ನ ಅವರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು. ನನ್ನ ಕೊಲೆಯ ಹಿಂದೆ ಮೂವರ ಕುಮ್ಮಕ್ಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರೇ ಇಂದಿನ ದಾಳಿಗೆ ಕಾರಣ ಎಂದು ದೂರಿದ್ದರು. ನನ್ನ ಜೀವಕ್ಕೆ ಏನೇ ಅಪಾಯ ಆದರೂ ಅದಕ್ಕೆ ಈ ಮೂವರೇ ಕಾರಣ ಎಂದೂ ಮುನಿರತ್ನ ಹೇಳಿದ್ದಾರೆ.

ನನ್ನ ರಾಜಕೀಯವಾಗಿ ಮುಗಿಸಲು ಈ ರೀತಿ ಸಂಚು ನಡೆದಿದೆ. ಕುಸುಮಾ ಅವರನ್ನು ಎಂಎಲ್‌ಎ ಮಾಡಲು ನನ್ನ ಮೇಲೆ ಮೊದಲಿನಿಂದಲೂ ಈ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕುಸುಮಾ ಹನುಮಂತರಾಯಪ್ಪ, ಶಾಸಕ ಮುನಿರತ್ನ ಅವರ ಮೇಲಿನ ಮೊಟ್ಟೆ ಅಟ್ಯಾಕ್ ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಅವರದ್ದೇ ಎಂದಿದ್ದಾರೆ. ದಲಿತರನ್ನು ಕೆಟ್ಟದಾಗಿ ನಿಂದಿಸಿ, ಒಕ್ಕಲಿಗ ಗುತ್ತಿಗೆದಾರನ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ನಾಲಿಗೆಹರಿಬಿಟ್ಟಿದ್ದ ಧ್ವನಿ ಎಫ್‌ಎಸ್‌ಎಲ್‌ನಲ್ಲಿ ಅವರದ್ದೇ ಎಂದು ಸಾಬೀತಾದ ಬೆನ್ನಲ್ಲೇ ಈ ನಾಟಕಗಳು ಶುರುವಾಗಿವೆ ಎಂದು ತಿರುಗೇಟು ನೀಡಿದ್ದಾರೆ.
ಜನರ ಮುಂದೆ ತನ್ನ ನಿಜರೂಪ ಬೆತ್ತಲಾದ ನಂತರ, ಸಿಂಪತಿಗಾಗಿ ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವೇ ಈ ದಿನ ನಡೆದ ಘಟನೆಗಳು. ಈತನ ಸ್ಕ್ರಿಪ್ಟೆಡ್ ಸ್ಟೋರಿ ಸ್ವಲ್ಪ ವಿರಾಮದ ನಂತರ ಮತ್ತೆ ಶುರುವಾಗಿವೆ. ಮಹಿಳೆಯರಿಗೆ ರಾಜಕೀಯದಲ್ಲಿ ಆದ್ಯತೆಯೇ ಕಡಿಮೆ ಇಂತಹ ಸನ್ನಿವೇಶದಲ್ಲಿ ಉತ್ತಮ ಸಮಾಜದ ನಿರ್ಮಾಣದ ಕನಸಿಗೆ ಬೆಲೆ ಇಲ್ಲ ಎನಿಸುತ್ತಿದೆ ಎಂದು ದೂರಿದ್ದಾರೆ.












Click it and Unblock the Notifications