Heart Attack: ಹೃದಯಾಘಾತ ಪ್ರಕರಣ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರದಿಂದ ತಜ್ಞರ ಸಮಿತಿ ರಚನೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಹಾಸನ ಜಿಲ್ಲೆಯೊಂದರಲ್ಲೇ 20ಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. 10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.
ಕಳೆದೊಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ 20ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸರಣಿ ಸಾವುಗಳಿಗೆ ನಿಖರ ಕಾರಣವನ್ನು ಪತ್ತೆಹಚ್ಚಿ, ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಚಿಕ್ಕ ವಯಸ್ಸಿನವರ, ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಎಂದು ಕೂಲಂಕುಷವಾಗಿ ಅಧ್ಯಯನ ನಡೆಸಲು ಈ ಸಮಿತಿಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಆದೇಶ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹೃದ್ರೋಗಿಗಳನ್ನು ಪರಿಶೀಲನೆಗೊಳಪಡಿಸಿ, ವಿಶ್ಲೇಷಣೆ ಮಾಡುವ ಕಾರ್ಯ ಕೂಡ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ?
ಬದುಕಿ ಬಾಳಬೇಕಾದ ಚಿಕ್ಕಮಕ್ಕಳು, ಯುವಜನರು, ಅಮಾಯಕರ ಜೀವಗಳ ಬೆಲೆ, ಅವರ ಕುಟುಂಬಸ್ಥರ ಕಾಳಜಿ ನಮಗೂ ಇದೆ. ಇಂತಹ ವಿಚಾರಗಳನ್ನು ಕೂಡ ತಮ್ಮ ರಾಜಕೀಯ ಸಾಧನೆಗೆ ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರ ನಡೆಯನ್ನು ನಾನು ಖಂಡಿಸುತ್ತೇನೆ. ಆತುರಾತುರದಲ್ಲಿ ಕೊರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದು. ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೋವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ. ಈ ವಿಚಾರದಲ್ಲಿ ಬಿಜೆಪಿಯವರು ನಮ್ಮನ್ನು ಟೀಕಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಎದೆನೋವು, ಉಸಿರಾಟದ ತೊಂದರೆ ಆದ್ರೆ ಎಚ್ಚರ!
ಜನರ ಆರೋಗ್ಯ ರಕ್ಷಣೆಗಾಗಿ ಒಂದು ಸರ್ಕಾರವಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತಿದ್ದು, ಸಾರ್ವಜನಿಕರು ಎದೆನೋವು, ಉಸಿರಾಟದ ತೊಂದರೆ ಕಂಡುಬಂದರೆ ಅಲಕ್ಷ್ಯ ತೋರದೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಬೇಕು ಎಂದು ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸರಣಿ ಸಾವುಗಳಿಗೆ ನೈಜ ಕಾರಣ ಪತ್ತೆ ಮಾಡಿ, ತಡೆಯುವ ನಿಟ್ಟಿನಲ್ಲಿ ನಾವು ಸಂಪೂರ್ಣ ಬದ್ಧರಿದ್ದೇವೆ. ಈ ಉದ್ದೇಶದಿಂದಲೇ ಹೃದಯ ಜ್ಯೋತಿ ಮತ್ತು ಗೃಹ ಆರೋಗ್ಯದಂತಹ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಲಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಈಗ ಡಾ.ರವೀಂದ್ರನಾಥ್ ಅವರ ನೇತೃತ್ವದ ತಜ್ಞರ ಸಮಿತಿ ವರದಿ ಆಧರಿಸಿ, ಮುಂದಿನ ಅಗತ್ಯ ಕ್ರಮಗಳನ್ನು ಕೂಡ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.












Click it and Unblock the Notifications