ಧರ್ಮಸ್ಥಳ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಖಡಕ್ ರಿಯಾಕ್ಷನ್! ಹೇಳಿದ್ದೇನು?
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಹಾಗೂ ಶವಗಳನ್ನು ಹೂತು ಹಾಕಿರುವ ಪ್ರಕರಣವು ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕೇಸ್ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಈ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಹಿಳಾ ಆಯೋಗ ಕೂಡ ಈ ಪ್ರಕರಣ ತನಿಖೆಗೆ ಎಸ್‌ಐಟಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಕೊನೆಗೂ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಖಡಕ್ ಆಗಿ ಮಾತನಾಡಿದ್ದಾರೆ. ಜೊತೆಗೆ ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ತನಿಖೆ ನಡೆಸುತ್ತಿದ್ದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಈ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ, ಎಸ್‌ಐಟಿ ರಚನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ತನಿಖೆ ವಿಷಯದಲ್ಲಿ ಯಾರ ಒತ್ತಡವೂ ಇಲ್ಲ, ಒತ್ತಡ ಹಾಕಿದ್ರೂ ನಾವು ಯಾರ ಮಾತೂ ಕೇಳಲ್ಲ. ಕಾನೂನು ರೀತಿಯಲ್ಲೇ ಕ್ರಮ ಆಗಲಿದೆ ಎಂದು ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದ ಬಗ್ಗೆ ತಪ್ಪೊಪ್ಪಿಗೆ ನೀಡಿರುವ ವ್ಯಕ್ತಿ ಸುಮಾರು ಹತ್ತು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಈಗ ಪೊಲೀಸರ ಮುಂದೆ ಬಂದು ಏನು ಹೇಳಬೇಕೋ ಎಲ್ಲ ಹೇಳಿದ್ದಾನೆ. ಶವಗಳನ್ನ ನಾನೇ ಹೂತು ಹಾಕಿದ್ದೀನಿ, ನಾನೇ ಆ ಜಾಗಗಳನ್ನ ತೋರಿಸುತ್ತೀನಿ ಎಂದು ಹೇಳಿದ್ದಾನೆ. ಪೊಲೀಸರು ಈ ಬಗ್ಗೆ ಏನು ವರದಿ ಕೊಡ್ತಾರೋ ಅದರ ಮೇಲೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ ಎಂದಿದ್ದಾರೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡರು ಎಸ್.ಐ.ಟಿ ರಚನೆ ಮಾಡುವಂತೆ ಹೇಳಿದ್ದಾರೆ. ನಾವು ಅವರ ಹೇಳಿಕೆಗೆ ಪರವೂ ಇಲ್ಲ, ವಿರೋಧವೂ ಇಲ್ಲ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು. ಯಾರ ಮೇಲೂ ರಾಜಕೀಯ ಅಥವಾ ವೈಯಕ್ತಿಕ ಒತ್ತಡವಿಲ್ಲದೆ, ಕಾನೂನು ಪ್ರಕಾರ ನ್ಯಾಯ ದೊರಕಿಸಬೇಕು. ಇದಕ್ಕಾಗಿ ಎಸ್‌ಐಟಿ ರಚನೆಯಾಗಬೇಕು. ಸತ್ಯ ಹೊರ ಬರಲಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹ ಕೇಳಿಬಂದಿತ್ತು.

ಏನಿದು ಪ್ರಕರಣ?
ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ*ತ್ಯಾಚಾರ ಮತ್ತು ಹತ್ಯೆಯಾದ ಶಾಲಾ ಬಾಲಕಿಯರು ಮತ್ತು ಮಹಿಳೆಯರ ಶವಗಳನ್ನು ಬಲವಂತವಾಗಿ ಹೂತು ಹಾಕಲು ಬೆದರಿಕೆ ಹಾಕಲಾಗಿತ್ತು ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು. ಈ ವೇಳೆ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆಯೂ ಕೋರಿದ್ದರು. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಧರ್ಮಸ್ಥಳದಲ್ಲಿ ಹಲವು ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಶವಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದರು. ಅಲ್ಲದೆ ಆ ಹೆಣಗಳನ್ನು ಹೂತು ಹಾಕಿರುವ ಜಾಗವನ್ನು ನಾನೇ ಖುದ್ದಾಗಿ ತೋರಿಸುತ್ತೇನೆ. ಅದನ್ನು ಹೊರತೆಗೆದು ತನಿಖೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆ ವ್ಯಕ್ತಿ ಮುಂದೆ ಬಂದಿದ್ದರು. ಇತ್ತೀಚೆಗೆ ಈ ಕೇಸ್ ಸಂಬಂಧ ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹೆಣಗಳನ್ನು ಹೂತಿದ್ದ ವ್ಯಕ್ತಿ ತಮ್ಮ ಹೇಳಿಕೆ ದಾಖಲಿಸಿದ್ದರು.












Click it and Unblock the Notifications