Muda Siddarmaiah: ತನಿಖೆ ಎದರಿಸಲು ನಾನು ಸಿದ್ಧ: ಕೋರ್ಟ್ ಆದೇಶ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಬೆಂಗಳೂರು, ಸೆಪ್ಟಂಬರ್ 25: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೆನ್ನೆ ಮಂಗಳವಾರ ಹೈಕೋರ್ಟ್ ಆದೇಶಕ್ಕೆ ಪೂರಕವಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ತನಿಖೆಗೆ ಒಪ್ಪಿಸಿದೆ. ನಾನು ಯಾವುದೇ ತನಿಖೆಗೆ ಎದುರಿಸಲು ಸಿದ್ಧನಿದ್ದೇನೆ ಎಂದು ಕೋರ್ಟ್ ತನಿಖೆ ಆದೇಶ ಕುರಿತು ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೆನ್ನೆ ಹೈಕೋರ್ಟ್ ಪಿಸಿ ಕಾಯ್ದೆ 17ಎ ಅನ್ವಯ ತನಿಖೆಗೆ ಆದೇಶ ಮಾಡಿದೆ. ಅದರ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಯನ್ನು ಮೈಸೂರು ಲೋಕಾಯುಕ್ತ ಎಸ್‌ಪಿಗೆ ನೀಡಿದೆ. ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ. ನಾವು ಕಾನೂನು ರೀತಿಯಲ್ಲಿ ತನಿಖೆ ಎದುರಿಸಲಿದ್ದೇವೆ ಎಂದು ಅವರು ಪುನರುಚ್ಚರಿಸಿದರು.

ಇಂದು ನಾನು ಕೇರಳಕ್ಕೆ ಹೊರಟಿದ್ದೇನೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕೊಟ್ಟ ತೀರ್ಪು ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಆದೇಶ ಪ್ರತಿ ನನಗೆ ಸಿಕ್ಕಿಲ್ಲ. ನನಗೆ ಸಿಕ್ಕ ಬಳಿಕ ನಾನು ವಕೀಲರ ಬಳಿ ಚರ್ಚಿಸುತ್ತೇನೆ. ಮುಂದಿನ ನಿರ್ಧಾರಗಳ ಬಗ್ಗೆ ನಾಳೆ ಬೆಳಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಶೀಘ್ರವೇ ಸಿಎಂ ಸಿದ್ದರಾಮಯ್ಯ ವಿರುದ್ಧ FIR
ಮೈಸೂರಿನಲ್ಲಿ ಮುಡಾ ಸಂಬಂಧ ದೂರು ದಾಖಲಾಗಿದ್ದರಿಂದ ಅಲ್ಲಿಯ ಲೋಕಾಯುಕ್ತ ಎಸ್‌ಪಿಗೆ ತನಿಖೆ ನೀಡಿ ಇಂದು ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿತು. ಸದ್ಯ ಸಿಎಂ ಸಿದ್ದರಾಮಯ್ಯ ಅವರೇ ತನಿಖೆ ಒಪ್ಪಿದ್ದು, ಶೀಘ್ರವೇ ಅವರ ಮೇಲೆ FIR ದಾಖಲಾಗುವ ಸಾಧ್ಯತೆ ಇದೆ.
ಇನ್ನು ರಾಜ್ಯಪಾಲ ಆದೇಶ ಎತ್ತಿ ಹಿಡಿದ ಹೈಕೋರ್ಟ್ ನಾಯಪೀಠದ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದಿತ್ತು. ಅಲ್ಲದೇ ತನಿಖೆಗೆ ಆದೇಶಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದಿತ್ತು.
ಆದರೆ ಈ ಬಗ್ಗೆ ಏನು ತಿಳಿಸದ ಸಿಎಂ ಸಿದ್ದರಾಮಯ್ಯ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ತನಿಖೆ ಎದುರಿಸುತ್ತೇನೆ ಅಂತಲೂ ತಿಳಿಸಿದ್ದಾರೆ. ಸದ್ಯ ಅವರ ನಡೆ ರಾಜಕೀಯ ವಲಯದಲ್ಲಿ ಹೆಚ್ಚು ಕುತೂಹಲ ಸೃಷ್ಟಿಸಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪುಟ ಸದಸ್ಯರು, ಶಾಸಕರು, ನಾಯಕರು ಮುಖ್ಯಮಂತ್ರಿಗಳ ಪರವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶವೇನು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬ ದೂರಿನ ಮೇರೆಗೆ ರಾಜ್ಯಾಪಾಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಅದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ರಾಜ್ಯಪಾಲರ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್ ತನಿಖೆಗೆ ಆದೇಶಿಸಿತು.












Click it and Unblock the Notifications