ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ. ಶ್ರೀ ರಾಮಚಂದ್ರ ಇಲ್ಲಿ ಇಲ್ಲವೇ? : ಸಿದ್ದರಾಮಯ್ಯ
ಬೆಂಗಳೂರು, ಜನವರಿ 11: ಸರ್ಕಾರ ವತಿಯಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ನಾನು ಸೂಚಿಸಿಲ್ಲ. ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ. ಶ್ರೀ ರಾಮಚಂದ್ರ ಇಲ್ಲಿ ಇಲ್ಲವೇ, ನಮ್ಮಲ್ಲಿರುವ ಶ್ರೀರಾಮನಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಲ್ಲಿಯೂ ಪೂಜೆ ನಡೆಯಲಿದೆ ಎಂದರು.
ಈ ಕುರಿತು ಗುರುವಾರ ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾರೂ ರಾಮಚಂದ್ರನ ವಿರುದ್ಧವಾಗಿಲ್ಲ. ಬಿಜೆಪಿ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ. ಶ್ರೀರಾಮಚಂದ್ರನನ್ನು ದೊಡ್ಡ ರಾಜಕೀಯ ವಿಷಯವಾಗಿ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಾವೆಲ್ಲರೂ ಶ್ರೀ ರಾಮಚಂದ್ರರಾಮನ ಭಕ್ತರೇ. ಬಿಜೆಪಿ ರಾಜಕೀಯವಾಗಿ ಮಾತನಾಡುತ್ತಿದ್ದು, ಅದಕ್ಕೆ ಔಷಧಿ ಇಲ್ಲ. ರಾಮಮಂದಿರ ಉದ್ಘಾಟನೆಯ ಬಗ್ಗೆ ಪಕ್ಷದ ನಿಲುವನ್ನು ಸ್ವಾಗತಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ. ನಾವು ರಾಮಚಂದ್ರನನ್ನು ಪೂಜಿಸಿ, ಭಜಿಸಿ, ರಾಮಮಂದಿರವನ್ನು ಕಟ್ಟಿದ್ದೇವೆ. ದೇವರ ಹೆಸರಲ್ಲಿ ರಾಜಕೀಯಕ್ಕೆ ವಿರೋಧವಾಗಿದ್ದೇವೆ ಅಷ್ಟೇ ಎಂದರು.
ಇನ್ನೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತು ಮಾತನಾಡಿ, ರೈಲ್ವೆ ದುರಂತವಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜವಾಹರಲಾಲ್ ನೆಹರೂ ಅವರ ನಂತರ ದೇಶದ ಪ್ರಧಾನಿಗಳಾಗಿದ್ದವರು. ಜೈ ಜವಾನ್ ಜೈ ಕಿಸಾನ್ ಎಂದು ಕರೆ ಕೊಟ್ಟವರು. ಆಹಾರ ಸ್ವಾವಲಂಬನೆ ಆಗದಿದ್ದ ಸಂದರ್ಭದಲ್ಲಿ ಇಡೀ ದೇಶದ ಜನ ಒಂದು ದಿನದ ಉಪವಾಸ ಮಾಡಲು ಕರೆ ಕೊಟ್ಟಿದ್ದ ಅವರು ಅಲ್ಪಾವಧಿ ಪ್ರಧಾನ ಮಂತ್ರಿ ಆಗಿದ್ದರೂ ಆಹಾರ ಸ್ವಾವಲಂಬನೆಗೆ ಪ್ರಯತ್ನ ಮಾಡಿದರು ಎಂದರು.
ಪ್ರಾಮಾಣಿಕ ರಾಜಕಾರಣಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದಿದ್ದರು. ಅತ್ಯಂತ ಪ್ರಾಮಾಣಿಕ ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರು. ಅವರ ಪುಣ್ಯತಿಥಿಯನ್ನು ಇಡೀ ದೇಶದಲ್ಲಿ ಆಚರಿಸಲಾಗುತ್ತಿದೆ. ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಗಿದೆ ಎಂದರು.
ಕಾಂಗ್ರೆಸ್ಸಿನ ಜಾತ್ಯತೀತತೆ ಬಣ್ಣ ಬಯಲು: ಕೋಟ ಶ್ರೀನಿವಾಸ ಪೂಜಾರಿ
ಭಾರತ ದೇಶದಲ್ಲಿ ಇಲ್ಲಿನವರೆಗೆ ಜಾತ್ಯತೀತತೆಯ ಮುಖವಾಡ ಹಾಕಿದ್ದ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಇಲ್ಲಿನವರೆಗೂ ಕಾಂಗ್ರೆಸ್ಸಿಗರು ತಾವು ಜಾತ್ಯತೀತರು, ಜಾತ್ಯತೀತರು ಎನ್ನುತ್ತಿದ್ದರು. ಶ್ರೀರಾಮಮಂದಿರದ ಆಹ್ವಾನಪತ್ರ ತಿರಸ್ಕರಿಸುವ ಮೂಲಕ ಅದು ಮತೀಯವಾದ ರಾಜಕೀಯ ಪಕ್ಷ ಎಂಬುದಕ್ಕೆ ಸ್ಪಷ್ಟ ನಿದರ್ಶನ ಲಭಿಸಿದೆ ಎಂದು ರಾಜ್ಯ ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಶ್ರೀರಾಮಮಂದಿರವನ್ನು ಸುಪ್ರೀಂ ಕೋರ್ಟಿನ ತೀರ್ಪಿನಡಿ ನಿರ್ಮಿಸಲಾಗಿದೆ. ಭಕ್ತಾದಿಗಳೇ ದೇಣಿಗೆ ಹಾಕಿ ನಿರ್ಮಾಣ ಕಾರ್ಯ ನಡೆದಿದೆ. ಇದೊಂದು ಅದ್ಭುತ ದೇವಸ್ಥಾನ. ಈ ಐತಿಹಾಸಿಕ ವಿಚಾರದಲ್ಲಿ ಶ್ರೀರಾಮ ಮಂದಿರಕ್ಕೆ ಬಂದು ಭಾಗವಹಿಸುವುದನ್ನು ಬಿಟ್ಟು ಅದನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿನವರು ರಾಮನೇ ಕಾಲ್ಪನಿಕ ಎಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ನಂತರ ರಾಮಮಂದಿರದ ಶಿಲಾನ್ಯಾಸದ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿ ಬಂದರು. ಅವೆಲ್ಲವನ್ನೂ ಮರೆತು ಹಿಂದೂಗಳು ಅವರ ಬಗ್ಗೆ ಸಹಾನುಭೂತಿಯಿಂದ ಇದ್ದರೆ ಇವತ್ತು ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ್ದರಿಂದ ಕಾಂಗ್ರೆಸ್ ಪಕ್ಷ ಒಂದು ಮತಕ್ಕೆ ಸೀಮಿತ ಎಂದು ಜಗಜ್ಜಾಹೀರಾಗಿದೆ ಎಂದರು.
ಕಾಂಗ್ರೆಸ್ ನಿಲುವು ಅತ್ಯಂತ ಖಂಡನೀಯ. ಇದರ ಫಲಿತಾಂಶವನ್ನು ಮತ್ತು ಫಲವನ್ನು ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಣ್ಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಮಮಂದಿರ ವಿಷಯದಲ್ಲಿ ಸಿದ್ದರಾಮಯ್ಯರು ಹೊರತುಪಡಿಸಿ ಬೇರೆಲ್ಲರೂ ಒಟ್ಟಾಗಿದ್ದಾರೆ. ಅವರಿಗೆ ಯಾವ ಆತಂಕವೂ ಬೇಡ ಎಂದು ಹೇಳಿದರು.












Click it and Unblock the Notifications