ಸಿದ್ದರಾಮಯ್ಯ vs ವಿಜಯೇಂದ್ರ: ಬಿಜೆಪಿಗರ ಮೇಲೆ ಐಟಿ ದಾಳಿ ಆದರೂ ಅಕ್ರಮ ಹಣ ಹೊರ ಬರುತ್ತೆ
ಬೆಂಗಳೂರು, ಡಿಸೆಂಬರ್ 11: ಬಿಜೆಪಿ ನಾಯಕರ ಮೇಲೆ ದಾಳಿ ನಡೆದರೂ ಸಾಕಷ್ಟು ಹಣ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ಮೇಲೆ ಆರೋಪಿಸಿ ಐಟಿ ದಾಳಿ ಕುರಿತು ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಜಾರ್ಖಂಡ್ ಕಾಂಗ್ರೆಸ್ ಸಂಸದರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ 225 ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಪ್ರಶ್ನೆ ಮಾಡಿದ್ದರು. ಇದೀಗ ಅವರ ಮಾತಿಗೆ ತಿರುಗೇಟು ಕೊಡುವ ಮೂಲಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ಆದಾಯ ಮತ್ತು ತೆರಿಗೆ ಇಲಾಖೆ ದಾಳಿ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಬಿಜೆಪಿಯ ನಾಯಕರ ಮೇಲೂ ಐಟಿ ದಾಳಿ ನಡೆಸಿದರೂ ಸಹಿತ ಅಪಾರ ಪ್ರಮಾಣದ ಹಣ ಸಿಗುತ್ತದೆ. ಬಿಜೆಪಿ ನಾಯಕರ ಮನೆ ಮೇಲೆ ದಾಳಿ ನಡೆದರೆ ಬೇನಾಮಿ ಹಣ ಸಿಗುತ್ತದೆ ಎನ್ನುವ ಮೂಲಕ ಬಿಜೆಪಿ ನಾಯಕರ ಮನೆಗಳಲ್ಲಿ ಅಪಾರವಾದ ಹಣ ಇದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಗುಡುಗಿದರು.
ಬೇನಾಮಿ ಹಣ ಯಾರ ಬಳಿ ದೊರೆತರೂ ಅದು ಕಾನೂನು ರೀತಿಯಲ್ಲಿ ತಪ್ಪು. ಅಂತವರು ಯಾರೆ ಆಗಿದ್ದರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಐಟಿ ದಾಳಿ ಬಗ್ಗೆ ವಿಜಯೇಂದ್ರ ಹೇಳಿದ್ದೇನು?
ಜಾರ್ಖಂಡ್ ಕಾಂಗ್ರೆಸ್ ಸಂಸದರಾದ ಧೀರಜ್ ಸಾಹು ಮನೆ ಮೇಲೆ ಇತ್ತೀಚೆಗೆ ಐಟಿ ದಾಳಿ ನಡೆದಿದ್ದು, ಈ ವೇಳೆ 225 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಹೀಗೆ ಕಾಂಗ್ರೆಸ್ ನಾಯಕರು, ಏಜೆಂಟರ್ ಮೇಲೆ ದಾಳಿ ನಡೆದಷ್ಟು ಅಕ್ರಮ ಹಣ ಹೊರ ಬರುತ್ತದೆ ಎಂದು ವಿಜಯೇಂದ್ರ ಆರೋಪಿಸಿದ್ದರು.

ದೇಶದ ಹಣ ಮಾನವಾಗಿ ಹಂಚಿಕೆ ಆಗಿಲ್ಲ. ಮುಸ್ಲಿಂಮರಿಗೆ ರಾಷ್ಟ್ರ ಸಂಪತ್ತಿನ ಪಾಲು ಕೊಡುವುದಾಗಿ ಮಾತನಾಡಿದ್ದ, ಓಲೈಕೆ ಭಾಷಣ ಸಿಎಂ ಸಿದ್ದರಾಮಯ್ಯನವರೇ ಈ ದೇಶದ ಸಂಪತ್ತು ಯಾರ ಬಳಿ ಇದೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದರು. ದೇಶವನ್ನು ಲೂಟಿ ಹೊಡೆದವರು ಯಾರು. ನಿಮ್ಮ ಪ್ರಶ್ನೆಗಳಿಗೆ ಐಟಿ ಇಲಾಖೆ ದಾಳಿಯಿಂದ ಉತ್ತರ ಸಿಕ್ಕಿದೆಯೇ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಜಯೇಂದ್ರ ಆರೋಪಿಸಿದ್ದರು. ಇದೀಗ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮೇಲೆ ಐಟಿ ದಾಳಿ ಆಗಿದ್ದು, ಒಟ್ಟು ಸುಮಾರು 156 ಚೀಲಗಳಲ್ಲಿ ಕಂತೆ ಕಂತೆ ನಗದು ಹಣ ಪತ್ತೆಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನಗದು ಪತ್ತೆಯಾದ ಕೆಲವೇ ಪ್ರಕರಣಗಳಲ್ಲಿ ಇದು ಒಂದು.
ಸದ್ಯ ಈ ಐಟಿ ದಾಳಿ ಪ್ರಕರಣ ರಾಜಕೀಯ ನಾಯಕರ ಅದರಲ್ಲೂ ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ.












Click it and Unblock the Notifications