Siddaramaiah: ಉಚಿತ ಅಕ್ಕಿಯಿಂದ ಸೋಮಾರಿ ಅನ್ನೋರು ದುಡಿಯದೆ ಬೊಜ್ಜು ಬೆಳೆಸಿಕೊಂಡವ್ರು
ಅನ್ನಭಾಗ್ಯ ಯೋಜನೆಯ ಬಗ್ಗೆ ಕೇಳಿಬಂದ ಟೀಕೆಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಾವು ಉಚಿತವಾಗಿ ಅಕ್ಕಿ ಕೊಟ್ಟಿದ್ದರಿಂದ ಬಡವರು, ಶ್ರಮಿಕರು ಸೋಮಾರಿಗಳಾಗುತ್ತಿದ್ದಾರೆ ಎಂದು ಯಾವತ್ತೂ ಕಷ್ಟಪಟ್ಟು ದುಡಿಯದ ಮೈಗಳ್ಳರು, ದುಡಿಯದೆ ಬೊಜ್ಜು ಬೆಳೆಸಿಕೊಂಡವರು ಮಾತ್ರ ಹೇಳಲು ಸಾಧ್ಯ ಎಂದು ಗುಡುಗಿದ್ದಾರೆ. ಮೈಸೂರು ಜಿಲ್ಲೆಯ ಶ್ರೀಕ್ಷೇತ್ರ ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ.
ಬರಿ ಬಾಯಿ ಮಾತಿನಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆಶಯಗಳು ಜಾರಿ ಆಗುವುದಿಲ್ಲ. ಆಶಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಈ ಉದ್ದೇಶದಿಂದಲೇ ನಾವು ಗ್ಯಾರಂಟಿಗಳನ್ನು ಜಾರಿಗೊಳಿಸಿದೆವು ಎಂದು ಬೆನ್ನುತಟ್ಟಿಕೊಂಡಿದ್ದಾರೆ.

ನಾವು ಗ್ಯಾರಂಟಿಗಳನ್ನು ಜಾರಿಗೊಳಿಸಿದಾಗ ರಾಜ್ಯದ ಬೊಕ್ಕಸ ದಿವಾಳಿ ಆಗುತ್ತೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯವರೇ ಈಗ ನಮ್ಮ ಗ್ಯಾರಂಟಿಗಳನ್ನು ಕಾಪಿ ಹೊಡೆದು ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಘೋಷಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಆರ್ಥಿಕ, ಸಾಮಾಜಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ಹೋಗಲು ಸಾಧ್ಯ.
ನಮ್ಮ ಗ್ಯಾರಂಟಿಗಳು ಪ್ರತೀ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಚಲನೆ ನೀಡಿವೆ. ಜನರ ಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿದ್ದರಿಂದಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಕೂಡ ಸದೃಢವಾಗಿದೆ. ಬಡವರ ಆರ್ಥಿಕ ಅಸಹಾಯಕತೆಯನ್ನು ಶೋಷಿಸುವ ಮೈಕ್ರೋ ಫೈನಾನ್ಸ್‌ಗಳ ಅತಿರೇಕದ ವಸೂಲಿ ನಿಯಂತ್ರಿಸಲು ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ತರುತ್ತಿದ್ದೇವೆ. ಮೈಕ್ರೋ ಫೈನಾನ್ಸ್‌ಗಳ ವಸೂಲಿ ಕ್ರಮಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸರ್ಕಾರ ನಿಮ್ಮ ಜೊತೆಗಿದೆ. ತೊಂದರೆ ಕೊಟ್ಟರೆ ದೂರು ಕೊಡಿ. ಕಾನೂನು ಕ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಜಾತ್ಯತೀತ ಸಮಾಜ ನಿರ್ಮಾಣ ಸಂವಿಧಾನದ ಮೂಲ ಉದ್ದೇಶ. ಶರಣ ಶ್ರೇಷ್ಠರಾದ ಬಸವಣ್ಣನ ಆಶಯವೂ ಅದೇ ಆಗಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬಸವಣ್ಣನವರ ಆಶಯದಂತೆ ಜಾತಿ, ಧರ್ಮದ ಹೆಸರಿನ ಮನುಷ್ಯ ತಾರತಮ್ಯ ಹಾಗೂ ಮೌಢ್ಯಗಳನ್ನು ತೊರೆಯಬೇಕು ಎಂದಿದ್ದಾರೆ.
ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯ ಆರ್ಥಿಕವಾಗಿ, ಸಾಮಾಜಿಕವಾಗಿ ಇಲ್ಲ. ಇದು ಸಿಗದ ಹೊರತು ಸ್ವಾತಂತ್ರ್ಯದ ಆಶಯ ಪೂರ್ತಿಯಾಗುವುದಿಲ್ಲ ಎನ್ನುವ ಮಾತನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಭೆಯಲ್ಲೇ ಹೇಳಿದ್ದರು. ಅವತ್ತಿನ ಅವರು ಮಾತು ಇವತ್ತಿಗೂ ಸತ್ಯ ಎಂದು ಹೇಳಿದ್ದಾರೆ.
ಬಸವಣ್ಣನವರು 850 ವರ್ಷಗಳ ಹಿಂದೆ ಇವನಾರವ ಎಂದು ಪ್ರಶ್ನಿಸದೆ, ಇವ ನಮ್ಮವ ಎಂದು ಹೇಳಿ ಅಂದಿದ್ದರು. ಆದರೆ ಇವತ್ತಿಗೂ ನಾವು ಜಾತಿ ಕೇಳುವುದನ್ನು ನಿಲ್ಲಿಸಿಲ್ಲ, ಜಾತಿ-ಧರ್ಮದ ಅನಿಷ್ಠ ತಾರತಮ್ಯವನ್ನು ಇವತ್ತಿಗೂ ನಮ್ಮ ಸುತ್ತಲೂ ಕಾಣುತ್ತೇವೆ. ನಾನು ವೈಯಕ್ತಿಕವಾಗಿ ಬಸವಣ್ಣನವರ ಅಪ್ಪಟ ಹಿಂಬಾಲಕ. ಅದಕ್ಕೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಕಡ್ಡಾಯಗೊಳಿಸಿದೆ ಎಂದಿದ್ದಾರೆ.
ವಿದ್ಯಾವಂತರೂ ಕರ್ಮಸಿದ್ಧಾಂತವನ್ನು ಆಚರಿಸುವ ದುರಂತವನ್ನು ನಾವು ಕಾಣುತ್ತೇವೆ. ಯಾವ ದೇವರೂ ಬಡವನಾಗಿರು, ಹಸಿದುಕೊಂಡಿರು, ಹರಿದ ಬಟ್ಟೆಯಲ್ಲಿರು ಎಂದು ಹಣೆಬರಹ ಬರೆಯುವುದಿಲ್ಲ. ಇಂಥಾ ಮೌಢ್ಯವನ್ನು ವಿದ್ಯಾವಂತರೂ ಆಚರಿಸುತ್ತಿದ್ದಾರೆ. ಹೀಗಾದಾಗ ಅವರ ವಿದ್ಯೆಗೆ ಗೌರವ ಬರುತ್ತದಾ? ಎಂದು ಪ್ರಶ್ನಿಸಿದ್ದಾರೆ.
ಜಾತಿ ಆಧಾರದಲ್ಲಿ ಮನುಷ್ಯನ ಯೋಗ್ಯತೆ ಅಳೆಯುವ ಪದ್ಧತಿಯನ್ನು ನಮ್ಮ ಸಂವಿಧಾನ ವಿರೋಧಿಸಿತು. ಪ್ರತಿಭೆ ಮತ್ತು ಸಾಮರ್ಥ್ಯ ಪ್ರತಿಯೊಬ್ಬರ ಸ್ವತ್ತು. ಅವಕಾಶಗಳು ಸಿಗಬೇಕಷ್ಟೆ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದ್ದಾರೆ.












Click it and Unblock the Notifications