ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಇದಿನ್ನು ಟೀಸರ್: ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು?
ನವದೆಹಲಿ, ಡಿಸೆಂಬರ್ 02: ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರ ಬೆನ್ನಲ್ಲೆ ಬ್ರೇಕ್ ಫಾಸ್ಟ್ ರಾಜಕಾರಣ ಹೆಚ್ಚು ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪರಸ್ಪರರ ಮನೆಗಳಿಗೆ ಭೇಟಿ ನೀಡಿ ಉಪಹಾರ ಸವಿಯುತ್ತಿದ್ದಾರೆ. ಈ ಮೂಲಕ ತಾವು ಒಗ್ಗಟ್ಟಿನಿಂದ ಇದ್ದೇವೆ, ನಾವೆ ಸಹೋದರರಂತೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಸವಾರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿ, ಇದಿನ್ನು ಟೀಸರ್, ಪಿಚ್ಚರ್ ಅಭಿ ಬಾಕಿ ಹೈ ಎಂದಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗ್ ಬರೀ ಟೀಸರ್, ಸಿನೆಮಾ ಇನ್ನೂ ಬಾಕಿ ಇದೆ. ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಅವರು ಲೇವಡಿ ಮಾಡಿದರು.

ಕೆಲವೇ ದಿನದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಎನ್ನುವುದು ಹೊರಬೀಳಲಿದೆ. ಇವರಿಬ್ಬರೂ ಒಬ್ಬರಿಗೊಬ್ಬರು ಬ್ರೇಕ್ ಫಾಸ್ಟ್ ಮಾಡುತ್ತ ಕಾಲಹರಣ ಮಾಡುತ್ತಿದ್ದರೆ ರಾಜ್ಯದ ಜನರ ಶ್ರೇಯೋಭಿವೃದ್ದಿ ಯಾರು ಮಾಡುತ್ತಾರೆ ಎನ್ನುವುದು ನಮ್ಮ ಕಾಳಜಿ. ಒಬ್ಬರು ಕುರ್ಚಿಯನ್ನು ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಬ್ಬರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ನಾಟಕ ನಿಲ್ಲಬೇಕು ಎನ್ನುವುದು ರಾಜ್ಯದ ಜನರ ಇಚ್ಚೆಯಾಗಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಗೊಂದಲ ನಿವಾರಿಸುವಲ್ಲಿ ವಿಫಲವಾಗಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿದೆ ಕಾಂಗ್ರೆಸ್ ಹೈಕಮಾಂಡ್, ಯಾರು ಹೈಕಮಾಂಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ತಮ್ಮ ಮೇಲೆ ಹೈಕಮಾಂಡ್ ಇದೆ ಎಂದು ಹೇಳಿದ ಮೇಲೆ ಹೈಕಮಾಂಡ್ ಗೆ ಏನು ಅರ್ಥ ಇದೆ. ಇದು ಒಂದು ಕುಟುಂಬದ ವಿಷಯ ಆಗಿದೆ ಎಂದು ಆರೋಪಿಸಿದರು.
ಮೆಕ್ಕೆಜೋಳ ಖರೀದಿ ಯಾವಾಗ: ಬೊಮ್ಮಾಯಿ ಗರಂ
ರಾಜ್ಯದಲ್ಲಿ ಮಾತನಾಡಿದ್ದ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ತನ್ನ ಬೊಕ್ಕಸದ ಹಣ ತೆಗೆದು ನೇರವಾಗಿ ರೈತರಿಂದ ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಖರೀದಿ ಮಾಡಬೇಕು. ಮನುಷ್ಯ ಕೇವಲ ಭೋಗಿಸಲು ಇಲ್ಲ. ಮನುಷ್ಯ ತನ್ನ ಸ್ವಾಭಿಮಾನಕ್ಕಾಗಿ ತನ್ನ ಬದುಕಿನ ದಾರಿಗಾಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡಲು ಮನುಷ್ಯ ಇದ್ದಾನೆ ಎಂದು ತಾವು ತೋರಿಸಿಕೊಟ್ಟಿದ್ದೀರಿ, ಮನಸ್ಸಿನಲ್ಲಿ ಕೋಲಾಹಲವಿದೆ. ಯಾಕೆಂದರೆ ಇದೇ ವೇದಿಕೆಯಲ್ಲಿ ನಾನು ಒಂದು ವಾರದ ಹಿಂದೆ ಬಂದಿದ್ದೆ ಅವತ್ತು ರೈತರ ಆಕೋಶ ಉತ್ತುಂಗದಲ್ಲಿತ್ತು. ನಮ್ಮ ಕುಮಾರ ಅಜ್ಜನವರು ಅಮರಣಾಂತ ಉಪವಾಸ ಆರಂಭಿಸಿದ್ದರು. ಆಗ ಸರ್ಕಾರಿ ಅಧಿಕಾರಿಗಳು ಬಂದು ಮೆಕ್ಕೆಜೋಳ ಖರೀದಿ ಆರಂಭಿಸುತ್ತೇವೆ ಎಂದು ಭರವಸೆ ಕೊಟ್ಟು ಹೋದರು.
ನಮ್ಮ ರೈತರು ಬುದ್ದಿವಂತರಿದ್ದಾರೆ. ಖರೀದಿ ಕೇಂದ್ರ ತೆರೆದು ನಮ್ಮ ಗೋವಿನ ಜೋಳ ಮಾರಾಟವಾದ ಮೇಲೆ ನಮ್ಮ ಹೋರಾಟ ನಿಲ್ಲಿಸುತ್ತೇವೆ ಎಂದು ಹೇಳಿದ್ದೀರಿ, ಸ್ವಾಮೀಜಿಗೆ ಸುಳ್ಳು ಹೇಳಿ, ಬೆಂಗಳೂರಿನಲ್ಲಿ ಸಭೆ ಮಾಡಿ 10 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುತ್ತೇವೆ ಎಂದು ಆದೇಶ ಮಾಡಿ ಹತ್ತು ದಿನವಾಯಿತು. ರಾಜ್ಯದ ಯಾವುದೇ ಮೂಲೆಯಲ್ಲಿ ಖರೀದಿ ಕೇಂದ್ರ ತೆರೆದಿಲ್ಲ. ಯಾವ ಏಜೆನ್ಸಿಗೆ ಖರೀದಿಗೆ ಕೊಡುತ್ತೇವೆ ಎಂದು ಹೇಳಿಲ್ಲ.
ಮಾರುಕಟ್ಟೆ ಫೆಡರೇಷಮ್ ಅವರು ದುಡ್ಡು ಕೊಟ್ಟರೆ ಖರೀದಿಸುತ್ತೇವೆ ಎಂದು ಹೇಳಿದ್ದಾರೆ. ಈ ಸರ್ಕಾರದ ಬಳಿ ಹಣ ಇಲ್ಲ. ಸಾಹುಕಾರನ ಬಂಡವಾಳ ಆತ ಇಲ್ಲದಾಗ ಗೊತ್ತಾಗುತ್ತದೆ. ಈ ಸರ್ಕಾರ ಎಷ್ಟು ಬೇಗ ಹೋಗುತ್ತದೆ ಅಷ್ಟು ಬೇಗ ರೈತರಿಗೆ ಅನುಕೂಲವಾಗುತ್ತದೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ನಾವು ಯಾವಾಗಲೂ ರೈತರ ಪರ ಹೋರಾಟವನ್ನು ನಿರಂತರ ಮಾಡುತ್ತ ಬಂದಿದ್ದೇವೆ. ಸ್ಪಂದಿಸದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.












Click it and Unblock the Notifications