Siddaramaiah: ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ ಸ್ಥಿತಿ ಈಗ ಹೇಗಿದೆ?
ಮಂಡಿನೋವು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ಡಿಸ್ಚಾರ್ಜ್ ಆಗಿದ್ದಾರೆ. ಎಡಗಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ತಪಾಸಣೆಗೆ ಒಳಗಾದರು.
ತಪಾಸಣೆ ನಡೆಸಿದ ವೈದ್ಯರು ಈ ಹಿಂದೆ ಲೆಗ್‌ಮೆಂಟ್ ಶಸ್ತ್ರಚಿಕಿತ್ಸೆ ನಡೆದ ಜಾಗದ ಮೇಲೆ ಒತ್ತಡ ಬಿದ್ದಿರುವುದರಿಂದ ನೋವು ಕಾಣಿಸಿಕೊಂಡಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಎರಡು ದಿನ ಯಾವುದೇ ಪ್ರಯಾಣ ಮಾಡದೆ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಆಸ್ಪತ್ರೆಯ ವೈದ್ಯರಾದ ಡಾ.ಸತ್ಯನಾರಾಯಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಆರೋಗ್ಯ ತಪಾಸಣೆ ನಡೆದಿದೆ. ಸಿಎಂ ಅವರಿಗೆ ಮಂಡಿನೋವು ಹಿನ್ನೆಲೆ ನೀ ಪ್ಯಾಡ್ ಹಾಕಲಾಗಿದೆ. ಸದ್ಯ ಅವರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಿದ್ದರಾಮಯ್ಯ ಅವರು ಕಾವೇರಿ ನಿವಾಸಕ್ಕೆ ತೆರಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಮೊಣಕಾಲಿಗೆ ಗಂಭೀರವಾದ ಗಾಯವಾಗಿದೆ. ಹಾಗಾಗಿ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ಇಂದು ಬೆಳಿಗ್ಗೆ ಸ್ನಾನದ ಮನೆಯಲ್ಲಿ ಅವರು ಕಾಲು ಜಾರಿ ಬಿದ್ದಿದ್ದಾರೆ. ಬಳಿಕ ನಾವೆಲ್ಲ ಸಿದ್ದರಾಮಯ್ಯ ಅವರುನ್ನು ಕಾರಿನಲ್ಲಿ ಆಸ್ಪತ್ರೆಗೆ ಕಳಿಸಿಕೊಟ್ಟೆವು. ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಅವರ ಮೊಣಕಾಲು ಸ್ಕ್ಯಾನ್ ಕೂಡ ಮಾಡಲಾಗಿದೆ ಎಂದು ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಇನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಸಿಎಂ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಂಡಿ ನೋವಿನ ಹಿನ್ನೆಲೆ ವೈದ್ಯರು ಎಡಗಾಲಿನ ಎಕ್ಸ್ ರೇ ಕೂಡ ಮಾಡಿದ್ದಾರೆ. ವರದಿಯಲ್ಲಿ ಎಲ್ಲವೂ ನಾರ್ಮಲ್ ಇದೆ ಎಂದು ತಿಳಿದುಬಂದಿದೆ. ಮಂಡಿ ನೋವಿಗೆ ಔಷಧಗಳನ್ನು ನೀಡಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಲೆಗಮೆಂಟ್ ಸರ್ಜರಿಗೆ ಒಳಗಾಗಿದ್ದರು. ಈಗ ಅದೇ ಜಾಗದಲ್ಲಿ ಮತ್ತೆ ಒತ್ತಡ ಬಿದ್ದ ಕಾರಣ ನೋವು ಕೂಡ ಹೆಚ್ಚಾಗಿದೆಯಂತೆ. ಈ ಹಿನ್ನೆಲೆ ಅವರು ಎಲ್ಲಿಯೂ ಹೊರಗೆ ಪ್ರಯಾಣ ಮಾಡದಂತೆ ವೈದ್ಯರು ಸಲಹೆ ಕೊಟ್ಟಿದ್ದಾರೆ.

ಹಾಗಾಗಿ ಸಿದ್ದರಾಮಯ್ಯ ಅವರು ಇನ್ನೆರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಇಂದಿನಿಂದ ನಿಗದಿಯಾಗಿದ್ದ ಕಾರ್ಯಕ್ರಮಗಳೆಲ್ಲವೂ ಸಹ ರದ್ದಾಗಿದೆ. ಇಂದು ಕೂಡ ಸಿಎಂ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿಮ ಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಡಾ.ಎಚ್.ನರಸಿಂಹಯ್ಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಮಂಡಿನೋವು ಕಾಣಿಸಿಕೊಂಡ ಕಾರಣ ಅವರು ಕಾರ್ಯಕ್ರಮಕ್ಕೆ ಹೋಗಲಿಲ್ಲ.
ಚನ್ನಪಟ್ಟಣಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಗೆಲುವಿನ ಹಿನ್ನೆಲೆ ಇಂದು ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೂ ಹೋಗುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಕಾಲು ನೋವು ಕಾರಣದಿಂದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.












Click it and Unblock the Notifications