Summer Holidays: ಬೇಸಿಗೆ ರಜೆ ಕುರಿತು ಮಹತ್ವದ ಮಾಹಿತಿ ಕೊಟ್ಟ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ಬೇಸಿಗೆ ರಜೆ ಬಗ್ಗೆ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ. ಈಗಾಗಲೇ ಶಾಲಾ ಮಕ್ಕಳು ಬೇಸಿಗೆ ರಜೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಬೇಸಿಗೆ ರಜೆ ಬಗ್ಗೆ ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ದಿನಾಚರಣೆ ಹಾಗೂ ವಕೀಲರ ವೇದಿಕೆಯ ಅಭಿನಂದನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, ವಕೀಲರಿಗೂ ನೀಡಿರುವ ಬೇಸಿಗೆ ರಜೆ ಕುರಿತು ಉಲ್ಲೇಖಿಸಿ ಮಹತ್ವದ ಸಲಹೆ ನೀಡಿದ್ದಾರೆ.
ಪ್ರತಿನಿತ್ಯವೂ ಕೋರ್ಟ್ ಕಲಾಪಗಳಲ್ಲೇ ತೊಡಗಿರುವ ವಕೀಲರಿಗೆ ಬೇಸಿಗೆ ರಜೆಯು ಸಂಜೀವಿನಿಯಂತೆ. ಮೇ 2ರಿಂದ ಆರಂಭವಾಗುವ ಬೇಸಿಗೆ ರಜೆಯನ್ನು ಕುಟುಂಬದೊಡನೆ ಸುಖಕರವಾಗಿ ಕಳೆಯಿರಿ ಎಂದು ವಕೀಲರಿಗೆ ಸಲಹೆ ನೀಡಿದ್ದಾರೆ. ಸರ್ಕಾರಿ ವಕೀಲರು ಹೆಚ್ಚು ಮಾತನಾಡಲ್ಲ ಎಂಬ ಆರೋಪವಿದೆ. ಪ್ರಕರಣವನ್ನು ಚೆನ್ನಾಗಿ ಓದಿ, ಸರಿಯಾದ ರೀತಿಯಲ್ಲಿ ನ್ಯಾಯಾಧೀಶರ ಮುಂದೆ ಮಂಡಿಸಿ ಕಕ್ಷಿದಾರರ ಹಕ್ಕನ್ನು ರಕ್ಷಿಸಬೇಕು.
ಬೆಂಗಳೂರಿನ ವಕೀಲರ ಸಂಘವು ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡ ಸಂಘವಾಗಿದ್ದು, 25 ಸಾವಿರ ಸದಸ್ಯರನ್ನು ಹೊಂದಿರುವುದು ಸಣ್ಣ ಸಂಗತಿಯೇನಲ್ಲ ಎಂದು ಶ್ಲಾಘಿಸಿದ್ದಾರೆ.

ಹಣ ಮಾಡುವುದು ಮುಖ್ಯವಲ್ಲ
ಕೇವಲ ಪರಿಣಿತರೇ ಸಂವಿಧಾನವನ್ನು ಓದಬೇಕು ಎಂದೇನಿಲ್ಲ. ಆ ಭಾವನೆ ಬಿಟ್ಟು ವಕೀಲ ವೃತ್ತಿಯಲ್ಲಿ ಇರುವ ಎಲ್ಲರೂ, ಪ್ರತಿಯೊಬ್ಬರೂ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಪಾಲಿಸಿ. ನಮ್ಮದು ಅತ್ಯಂತ ಶ್ರೇಷ್ಠ ಸಂವಿಧಾನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ, ನಮ್ಮ ಸಮಾಜಕ್ಕೆ ಅನುಗುಣವಾದ ಸಂವಿಧಾನ ರಚಿಸಿಕೊಟ್ಟಿದ್ದಾರೆ. ನ್ಯಾಯ ಪಡೆಯುವುದು ದುಬಾರಿಯಾಗಿದ್ದು, ಅನೇಕರಿಗೆ ಹಣವಿಲ್ಲದೆ ನ್ಯಾಯ ಪಡೆಯಲು ಸಾಧ್ಯವಾಗ್ತಿಲ್ಲ. ಅಂತವರಿಗೆ ಅನ್ಯಾಯವಾಗುತ್ತಿದ್ದು, ಹಣ ಮಾಡುವುದು ವಕೀಲ ವೃತ್ತಿಯ ಉದ್ದೇಶವಲ್ಲ, ನ್ಯಾಯ ಕೊಡಿಸುವುದು ಉದ್ದೇಶವಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶೀಘ್ರವಾಗಿ ನ್ಯಾಯ ಸಿಗುವ ರೀತಿ ಮಾಡಬೇಕು. ನ್ಯಾಯ ವಿಳಂಬವಾದರೆ, ನ್ಯಾಯ ನಿರಾಕರಿಸಿದಂತೆ ಎಂಬ ಮಾತನ್ನು ನೆನಪಿಡಬೇಕು. ಇದು ವಕೀಲರ ದಿನನಿತ್ಯದ ಮಂತ್ರವಾಗಬೇಕು. ವಕೀಲರು ಮನಸ್ಸು ಮಾಡಿದರೆ ವಿಳಂಬವಾಗುವುದನ್ನು ತಪ್ಪಿಸಬಹುದು. ಸತ್ಯ, ಸಾಕ್ಷ್ಯಾಧಾರಗಳಿಲ್ಲದ ಕೇಸ್‌ಗಳನ್ನು ವರ್ಷಾನುಗಟ್ಟಲೆ ಎಳೆಯಬಾರದು. ಇದು ವೃತ್ತಿಗೆ ಅನ್ಯಾಯ ಮಾಡಿದಂತೆ. ಅಶಕ್ತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು. ಕಕ್ಷಿದಾರರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ನೋಡಿಕೊಂಡು ಶುಲ್ಕ ಪಡೆಯಬೇಕು ಎಂದು ಕಿವಿಮಾತು ಹೇಳಿದ್ದಾರೆ.

ವಕೀಲರ ಬೇಡಿಕೆ ಈಡೇರಿಸಲು ಪ್ರಯತ್ನಿಸುವೆ
ಈ ಹಿಂದೆ ವಕೀಲರಿಗೆ ಭರವಸೆ ನೀಡಿದ್ದಂತೆ ಕಾಯ್ದೆ ರೂಪಿಸಿದ್ದೇವೆ. ಇಂದಿನ ದಿನಗಳಲ್ಲಿ ವಕೀಲರು ಬೆದರಿಕೆ, ಕಿರುಕುಳ, ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವಂತಹ ಅನೇಕ ಆತಂಕಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಲು ಒಂದು ಕಾಯ್ದೆ ಅತ್ಯಂತ ಅವಶ್ಯಕ ಎಂದು ಮನಗಂಡು ವಿಧಾನಸಭೆ, ಪರಿಷತ್ ಎರಡೂ ಕಡೆ ಮಂಡಿಸಿ ಅಂಗೀಕಾರವಾಗಿ ಈಗ ಕಾಯ್ದೆಯಾಗಿದೆ. ಈ ಕಾಯ್ದೆಯಿಂದಾಗಿ ವಕೀಲರಿಗೆ ರಕ್ಷಣೆ ಸಿಕ್ಕಿದೆ. ಕಾಯ್ದೆಯಿಂದ ಕೇವಲ ನಿಮ್ಮ ರಕ್ಷಣೆ ಆದರೆ ಸಾಲದು, ನಾಡಿನ ಜನರ, ನ್ಯಾಯ ಕೇಳಿ ಬರುವವರ ರಕ್ಷಣೆ ಆಗಬೇಕು. ವಕೀಲ ಸಂಘದವರು ಸಲ್ಲಿಸಿರುವ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ನಿಧಿಗೆ ಅನುದಾನವನ್ನು ಹೆಚ್ಚಿಸಲಾಗುವುದು. ಸರ್ವೋಚ್ಚ ನ್ಯಾಯಾಲಯದ ಪೀಠದ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.












Click it and Unblock the Notifications