ಸಿಎಂ ಸಂಧಾನಕ್ಕೆ ಮಣಿದ ವಾಟಾಳ್ ನಾಗರಾಜ್: ಕರ್ನಾಟಕ ಬಂದ್ ವಾಪಸು ಪಡೆದ ಕನ್ನಡ ಪರ ಸಂಘಟನೆಗಳು
ಬೆಂಗಳೂರು, ಡಿ. 30: ಕನ್ನಡ ವಿರೊಧಿ ಕೃತ್ಯ ಎಸಗಿದ ಹಿನ್ನೆಲೆಯಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ಕಟ್ಟಿದ್ದ "ಡಿ. 31 ಕರ್ನಾಟಕ ಬಂದ್" ನ್ನು ವಾಪಸು ತೆಗೆದುಕೊಳ್ಳಲಾಗಿದೆ. ಡಿ. 31 ರಂದು ಬಂದ್‌ಗೆ ಕರೆ ಕೊಟ್ಟಿದ್ದ ಕನ್ನಡಪರ ಸಂಘಟನಗಳ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ಸ್ವತಃ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಚರ್ಚೆ ನಡೆಸಿದ ಬಳಿಕ ವಾಟಾಳ್ ನಾಗರಾಜ್ ಮಾಧ್ಯಮಗಳ ಮುಂದೆ ಪ್ರಕಟಿಸಿದ್ದಾರೆ.
ಡಿ. 31 ಕ್ಕೆ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕರೆಕೊಟ್ಟಿದ್ದ ಬಂದ್‌ನ್ನು ವಾಪಸು ಪಡೆಯಲಾಗುತ್ತಿದೆ. ಕನ್ನಡ ವಿರೋಧಿ ಎಂಇಎಸ್ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕಾನೂನಾತ್ಮಕವಾಗಿ ಎಂಇಎಸ್ ನಿಷೇಧ ಮಾಡುವ ಸಂಬಂಧ ಕಾನೂನಾತ್ಮಕ ನಡೆಯ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಹೀಗಾಗಿ ಕರ್ನಾಟಕ ಬಂದ್‌ನ್ನು ವಾಪಸು ಪಡೆಯಲಾಗಿದೆ. ನಾಳೆ ಯಾವುದೇ ರೀತಿಯ ಬಂದ್ ಇರುವುದಿಲ್ಲ. ಮುಖ್ಯಮಂತ್ರಿಗಳ ಮನವಿ ಮೇರೆಗೆ ನಾಳಿನ ಕರ್ನಾಟಕ ಬಂದ್‌ನ್ನು ಕೈ ಬಿಡಲಾಗಿದೆ ಎಂದು ವಾಟಾಳ್ ನಾಗರಾಜ್ ಸ್ಪಷ್ಟ ಪಡಿಸಿದ್ದಾರೆ.
ಕೇವಲ ಮೆರವಣಿಗೆ: ಎಂಇಎಸ್ ನಿಷೇಧ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಡಿ. 31 ರಂದು ಬೃಹತ್ ರ್‍ಯಾಲಿ ಹಮ್ಮಿಕೊಂಡಿವೆ. ನಾಳೆ ಕರ್ನಾಟಕ ಬಂದ್ ವಾಪಸು ಪಡೆದಿದ್ದೇವೆ. ಎಂಇಎಸ್ ನಿಷೇಧಕ್ಕೆ ಗುಡುವು ನೀಡಿದ್ದೇವೆ. ಒಂದು ವೇಳೆ ಎಂಇಎಸ್ ನಿಷೇಧ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪರೇಷಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸುತ್ತೇವೆ ಎಂದು ಕನ್ನಡ ಪರ ಸಂಘಟನೆಗಳ ಹೋರಾಟದ ನೇತೃತ್ವ ವಹಿಸಿದ್ದ ಸಾ.ರಾ. ಗೋವಿಂದ್ ತಿಳಿಸಿದ್ದಾರೆ.

ಕರ್ನಾಟಕ ಬಂದ್ ಇರುವುದಿಲ್ಲ. ಆದರೆ ಟೌನ್ ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನವನದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪ್ರತಿಭಟನಾ ಮೆರವಣಿಗೆಗ ಯಾವುದೇ ಕನ್ನಡ ಪರ ಸಂಘಟನೆಗಳು ಅನುಮತಿ ಪಡೆದಿಲ್ಲ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾಳೆ ಪ್ರತಿಭಟನೆ ಮೆರವಣಿಗೆ ನಡೆಯುವ ಸಾಧ್ಯತೆಯಿದೆ.
ಸಿಎಂ ಅಭಿನಂದನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ಡಿ. 31 ರಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ನ್ನು ಕನ್ನಡ ಪರ ಸಂಘಟನೆಗಳು ಹಿಂಪಡೆದಿವೆ. ತನ್ನ ಮನವಿಗೆ ಸ್ಪಂದಿಸಿ ಬಂದ್ ಹಿಂಪಡೆದ ಕನ್ನಡ ಪರ ಹೋರಾಟಗಾರರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ. ಕನ್ನಡ ಭಾಷೆ ರಕ್ಷಣೆಗೆ ಸರ್ಕಾರ ಬದ್ಧ. ಎಂಇಎಸ್ ನಿಷೇಧ ಮಾಡುವ ಕಾನೂನಾತ್ಮಕ ವಿಚಾರಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೀಗಾಗಿ ಸರ್ಕಾರದ ಮನವಿಗೆ ಸ್ಪಂದಿಸಿದ್ದು, ಬಂದ್ ವಾಪಸು ಪಡೆದಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸತ್ತೇನೆ ಎಂದು ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ಗೊಂದಲ ಮೂಡಿಸಿದ್ದ ಬಂದ್: ಡಿ. 31 ಕ್ಕೆ ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಗೆ ಅಪಸ್ವರ ಕೇಳಿ ಬಂದಿತ್ತು. ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿರಲಿಲ್ಲ. ಇದು ಜನ ಪ್ರತಿನಿಧಿಗಳಲ್ಲಿ ಕೂಡ ಬಂದ್ ವಿಚಾರ ಭಿನ್ನಾಭಿಪ್ರಾಯ ಹುಟ್ಟು ಹಾಕಿತ್ತು. ಎಂಇಎಸ್ ನಿಷೇಧ ಸಂಬಂಧ ಕರ್ನಾಟಕದಲ್ಲಿ ಹೋರಾಟ ಮಾಡಿ ಕನ್ನಡಿಗರೆ ಯಾಕೆ ತೊಂದರೆ ಕೊಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಹೊಸ ವರ್ಷ ಆಚರಣೆ, ಓಮಿಕ್ರಾನ್ ನೈಟ್ ಕರ್ಫ್ಯೂ, ಕನ್ನಡದ ಮೂರು ಸಿನಿಮಾಗಳ ಬಿಡುಗಡೆ ಮಧ್ಯೆ ಬಂದ್‌ಗೆ ಕರೆ ಕೊಟ್ಟಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಹಲವು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ನಿಂದ ಹಿಂದೆ ಸರಿದಿದ್ದವು. ನಾವು ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ಎಂದು ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದ್ ನೇತೃತ್ವದ ಕನ್ನಡ ಸಂಘಟನೆಗಳು ಪಟ್ಟು ಹಿಡಿದಿದ್ದವ. ಇದೀಗ ಸಿಎಂ ಸಂಧಾನ ಯಶಸ್ಸು ಹಿನ್ನೆಲೆಯಲ್ಲಿ ವಾಟಾಳ್ ಕೂಡ ಕರ್ನಾಟಕ ಬಂದ್‌ನಿಂದ ಹಿಂದೆ ಸರಿದಿದ್ದಾರೆ.












Click it and Unblock the Notifications