ಜ. 3ರಿಂದ ಮಕ್ಕಳಿಗೆ ಲಸಿಕೆ; ಉಸ್ತುವಾರಿ ಸಚಿವರಿಗೆ ಸಿಎಂ ಪತ್ರ
ಬೆಂಗಳೂರು, ಡಿಸೆಂಬರ್ 30; ಭಾರತದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳು ಲಸಿಕಾಕರಣಕ್ಕೆ ಒಳಪಡಲಿದ್ದಾರೆ. 2022ರ ಜನವರಿ 3ರ ಸೋಮವಾರ ಲಸಿಕಾ ಅಭಿಯಾನ ಆರಂಭಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಪತ್ರವನ್ನು ಬರೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ, ವಿಧಾನಸಭಾ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮನವಿ ಮಾಡಿದ್ದಾರೆ.
15 ರಿಂದ 18 ವರ್ಷದೊಳಗಿನ ಮಕ್ಕಳ ಕೋವಿಡ್ 19 ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕುರಿತು ಎಂದು ಪತ್ರದಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಪತ್ರ ಕಳಿಸಿಕೊಡಲಾಗಿದೆ.

ಪತ್ರದ ವಿವರ; ರಾಜ್ಯದಲ್ಲಿನ ಕೋವಿಡ್ 19 ಲಸಿಕಾಕರಣವು ಕೋವಿಡ್ 19 ನಿಯಂತ್ರಣದ ಕಾರ್ಯತಂತ್ರಗಳಲ್ಲಿ ಒಂದು ಯಶಸ್ವಿ ಹಾಗೂ ಪರಿಣಾಮಕಾರಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಜನವರಿ 16, 2021 ರಿಂದ ಕೋವಿಡ್ 19 ಲಸಿಕಾಕರಣವನ್ನು ವಿವಿಧ ಗುಂಪಿನ ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ನಡೆಸಲಾಯಿತು.
ರಾಜ್ಯದಲ್ಲಿ ಇದುವರೆಗೂ 8.5 ಕೋಟಿಗಿಂತ ಹೆಚ್ಚು ಕೋವಿಡ್ 19 ಲಸಿಕಾ ಡೋಸ್‌ಗಳನ್ನು ನೀಡಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿರುತ್ತದೆ. 4.75 ಕೋಟಿ ರಷ್ಟು ಮೊದಲ ಡೋಸ್ ಹಾಗೂ 3.78 ಕೋಟಿ ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ತಮ್ಮೆಲ್ಲರ ಅತ್ಯಮೂಲ್ಯ ಸಹಕಾರ, ಬೆಂಬಲ ಹಾಗೂ ಮುಂದಾಳತ್ವದಿಂದ ಈ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ. ಇದಕ್ಕಾಗಿ ತಮ್ಮೆಲ್ಲರಿಗೂ ಅಭಿನಂದನೆಗಳು.
ಆದರೆ ಇತ್ತೀಚಿಗೆ ಜಾಗತಿಕವಾಗಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿದ್ದು ಹಾಗೂ ಗುರುತಿಸಲಾಗಿರುವ ಓಮಿಕ್ರಾನ್ ತಳಿಯನ್ನು Variant of Concern ಎಂದು ವರ್ಗೀಕರಿಸಲಾದ ಹಿನ್ನಲೆಯಲ್ಲಿ ಮತ್ತು ಎನ್‌ಟಿಎಜಿಐಯ ಶಿಫಾರಸ್ಸಿನಂತೆ ಕೋವಿಡ್ ಲಸಿಕಾಕರಣದ ವೈಜ್ಞಾನಿಕ ಆದ್ಯತೆ ಮತ್ತು ವ್ಯಾಪ್ತಿಯ ಪರಿಷ್ಕರಿಸಲ್ಪಟ್ಟು ಭಾರತ ಸರ್ಕಾರದ ನಿರ್ದೇಶನದನ್ವಯ ಜನವರಿ 3, 2022 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ 19 ಲಸಿಕಾಕರಣವನ್ನು ನಡೆಸಬೇಕಾಗಿರುತ್ತದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಸಮನ್ವಯಿಸಲಿದ್ದು ದಿನಾಂಕ 3/1/2022 ರಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಹಾಗೂ ವಿಧಾನಸಭಾ ಸದಸ್ಯರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಕೋವಿಡ್ 19ನಿಂದ ರಕ್ಷಿಸಲು 15 ರಿಂದ 18 ವಯೋಮಾನದ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಈ ಮೂಲಕ ಕೋರಿದೆ.
ನರೇಂದ್ರ ಮೋದಿ ಭಾಷಣ; ಡಿಸೆಂಬರ್ 25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ದೇಶದಲ್ಲಿನ 15 ರಿಂದ 18 ವರ್ಷದೊಳಗಿನ ಮಕ್ಕಳು ಈಗ ಲಸಿಕಾಕರಣಕ್ಕೆ ಒಳಪಡಲಿದ್ದಾರೆ. ಇದನ್ನು 2022 ರ ಜನವರಿ 3, ಸೋಮವಾರದಿಂದ ಆರಂಭ ಮಾಡಲಾಗುತ್ತದೆ. ಈ ನಿರ್ಧಾರವು ಕೊರೊನಾ ವಿರುದ್ಧ ದೇಶ ನಡೆಸುತ್ತಿರುವ ಹೋರಾಟವನ್ನು ಬಲಪಡಿಸುವುದು ಮಾತ್ರವಲ್ಲದೆ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಹೋಗುವ ಮಕ್ಕಳ ಆತಂಕವನ್ನು ಮತ್ತು ಅವರ ಪೋಷಕರ ಆತಂಕವನ್ನು ಕಡಿಮೆ ಮಾಡಲಿದೆ" ಎಂದು ಹೇಳಿದ್ದರು.
"ಈ ಹೋರಾಟದಲ್ಲಿ ಕೊರೊನಾ ವಾರಿಯರ್‌ಗಳು, ಆರೋಗ್ಯರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ದೇಶವನ್ನು ಸುರಕ್ಷಿತವಾಗಿಟ್ಟ ಅನುಭವವನ್ನು ನಾವೆಲ್ಲ ಹೊಂದಿದ್ದೇವೆ. ಅವರು ಈಗಲೂ ತಮ್ಮ ಬಹು ಸಮಯವನ್ನು ಕೊರೊನಾ ರೋಗಿಗಳಿಗೆ ಸೇವೆ ಮಾಡುವುದರಲ್ಲಿ ಕಳೆಯುತ್ತಿದ್ದಾರೆ. ಆದುದರಿಂದ ಮುಂಜಾಗರೂಕತಾ ಕ್ರಮವಾಗಿ ಸರಕಾರವು ಆರೋಗ್ಯ ಕಾರ್ಯಕರ್ತೆಯರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯ ಮುಂಜಾಗರೂಕತಾ ಡೋಸ್ ಆರಂಭ ಮಾಡಲು ನಿರ್ಧರಿಸಿದ್ದು, ಅದು 2022ರ ಜನವರಿ 10ರಂದು ಆರಂಭಗೊಳ್ಳಲಿದೆ" ಎಂದು ಮೋದಿ ಘೋಷಣೆ ಮಾಡಿದ್ದರು.












Click it and Unblock the Notifications