ಗೆಳೆಯ ಅಂಬರೀಶ್ ಕುರಿತು ಕುಮಾರಸ್ವಾಮಿ ಆತ್ಮೀಯ ಟ್ವೀಟ್
Recommended Video
ಬೆಂಗಳೂರು, ಮೇ 29: ಸುಮಲತಾ ಅಂಬರೀಶ್ ಅವರ ಎದುರು ಸೋಲು ಕಂಡಿದ್ದರೂ ಸಹ ಅಂಬರೀಶ್ ಹುಟ್ಟುಹಬ್ಬದಂದು ಅವರನ್ನು ನೆನಪಿಸಿಕೊಳ್ಳುವ ಮೂಲಕ ಕುಮಾರಸ್ವಾಮಿ ಸೌಜನ್ಯ ಮೆರೆದಿದ್ದಾರೆ.
ಅಂಬರೀಶ್ ಹುಟ್ಟುಹಬ್ಬದಂದು ಸಿಎಂ ಕುಮಾರಸ್ವಾಮಿ ಅವರು ಅಂಬರೀಶ್ ಅವರೊಂದಿಗೆ ಇದ್ದ ಆತ್ಮೀಯತೆಯನ್ನು ನೆನಪಿಸಿಕೊಂಡಿದ್ದಾರೆ.
ಬದಲಾದ ಸನ್ನಿವೇಶದಲ್ಲಿ ಅಂಬಿ ಪತ್ನಿ ಸುಮಲತಾ ಅವರು ಕುಮಾರಸ್ವಾಮಿ ಅವರ ರಾಜಕೀಯ ಎದುರಾಳಿಯಾಗಿ ಬದಲಾಗಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಅಂಬರೀಶ್ ಅವರನ್ನು ನೆನಪಿಸಿಕೊಳ್ಳಲು ಇದು ಅಡ್ಡಿಯಾಗಿಲ್ಲ.
ಟ್ವಿಟ್ಟರ್‌ನಲ್ಲಿ ಅಂಬರೀಶ್ ಅವರನ್ನು ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ನೆನಪಿಸಿಕೊಂಡಿರುವ ಕುಮಾರಸ್ವಾಮಿ, 'ಅಂಬರೀಷ್ ಹಾಗೂ ನನ್ನ ಸ್ನೇಹ ಮರೆಯಲಾಗದಂತಹದ್ದು. ಸದಾ ಜನರ ಜೊತೆ ಬೆರೆತ, ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು' ಎಂದು ಹೇಳಿದ್ದಾರೆ.
ಮುಂದುವರೆದು, 'ಅಂಬರೀಷ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಹಾರೈಸುತ್ತೇನೆ' ಎಂದು ಸಹ ಕುಮಾರಸ್ವಾಮಿ ಹೇಳಿದ್ದಾರೆ.
|
ಸುಮಲತಾ ಅವರನ್ನುದ್ದೇಶಿಸಿಯೇ ಬರೆದಿದ್ದಾರಾ?
ಕುಮಾರಸ್ವಾಮಿ ಅವರು ಟ್ವಿಟ್ಟರ್‌ನಲ್ಲಿ ಬರೆದಿರುವ ಕೊನೆಯ ಮಾತುಗಳು ಸುಮಲತಾ ಅವರನ್ನು ಉದ್ದೇಶಿಸಿಯೇ ಬರೆಯಲಾಗಿರುವುದಾ ಎಂಬ ಅನುಮಾನವೂ ಮೂಡುವಂತಿದೆ. ಏಕೆಂದರೆ ಈ ಹಿಂದೆಯೂ ಕುಮಾರಸ್ವಾಮಿಯವರು ಅಂಬರೀಶ್ ಅವರನ್ನು ಸುಮಲತಾ ಅವರೊಂದಿಗೆ ಹೋಲಿಸುವಂತಿಲ್ಲ ಎಂದಿದ್ದರು.

ಎಚ್‌ಡಿಕೆ-ಅಂಬಿ ಬಹು ಕಾಲದ ಗೆಳೆಯರು
ಕುಮಾರಸ್ವಾಮಿ ಮತ್ತು ಅಂಬರೀಶ್ ಅವರು ಬಹಳ ಕಾಲದ ಸ್ನೇಹಿತರು. ಕುಮಾರಸ್ವಾಮಿ ಅವರು ರಾಜಕೀಯ ಪ್ರವೇಶಕ್ಕೆ ಮುನ್ನವೇ ಇಬ್ಬರೂ ಗೆಳೆಯರಾಗಿದ್ದರು. ಅಲ್ಲದೆ ಅಂಬರೀಶ್ ಅವರು ರಾಜಕೀಯ ಪ್ರವೇಶಿಸಿದ್ದು ಜೆಡಿಎಸ್ ಪಕ್ಷದ ಮೂಲಕವೇ.

ಅಂಬರೀಶ್ ನಿಧನದ ಸಮಯ ಸಿಎಂ ಸಹಾಯ
ಅಂಬರೀಶ್ ಅವರು ನಿಧನರಾದಾಗ ಕುಮಾರಸ್ವಾಮಿ ಅವರು ಎರಡು ದಿನಗಳ ಕಾಲ ಹತ್ತಿರವೇ ಇದ್ದು, ಎಲ್ಲ ಕಾರ್ಯಗಳನ್ನು ಸ್ವತಃ ಮುತುವರ್ಜಿ ವಹಿಸಿ ನಡೆಸಿಕೊಟ್ಟಿದ್ದನ್ನು ನೆನಪಿಸಿಕೊಳ್ಳಬಹುದು. ಅಂಬಿ ನಿಧನದ ಸಮಯದಲ್ಲೂ ಸಹ ಕುಮಾರಸ್ವಾಮಿ ಅವರು ಅಂಬರೀಶ್ ಮತ್ತು ತಮ್ಮ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ್ದರು.

ಬದಲಾದ ರಾಜಕೀಯ ಸನ್ನಿವೇಶ
ಬದಲಾದ ಸನ್ನಿವೇಶದಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಎದುರು ಸುಮಲತಾ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸಿದರು. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ವಿರೋಧದ ನಡುವೆಯೂ ಸುಮಲತಾ ಅವರು ಚುನಾವಣೆಗೆ ನಿಂತಿದ್ದು ಎಚ್‌ಡಿಕೆ ಅವರನ್ನು ಕೆರಳಿಸಿತ್ತು. ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತು ಸುಮಲತಾ ಗೆಲ್ಲುವ ಮೂಲಕ ಕುಮಾರಸ್ವಾಮಿ ಅವರಿಗೆ ಸುಮಲತಾ ಅವರು ಭಾರಿ ಮುಖಭಂಗವನ್ನೇ ಉಂಟು ಮಾಡಿದರು.












Click it and Unblock the Notifications