ಗುಡಿಯಲ್ಲಿ ಕೂತ ದೇವರಿಗೂ ಎಚ್ಡಿಕೆಯ ಮಲತಾಯಿ ಧೋರಣೆ, ಶೆಟ್ಟರ್: ಸಿಎಂ ಪ್ರತಿಕ್ರಿಯೆ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಮತ್ತು ನಂತರದ ಅವಧಿಯಲ್ಲಿ ಬಹುಷಃ ಜನತಾದರ್ಶನ ಮಾಡಿದ್ದಕ್ಕಿಂತ ಹೆಚ್ಚಾಗಿ ಎಚ್ ಡಿ ಕುಮಾರಸ್ವಾಮಿಯವರು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವ ಹಾಗೇ, ಎಚ್ಡಿಕೆ ತಮ್ಮ ಟೆಂಪಲ್ ರನ್ ಅನ್ನು ಮುಂದುವರಿಸಿದ್ದರು.
ಗುಜರಾತ್ ಚುನಾವಣೆಯ ವೇಳೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಾಲುಸಾಲು ದೇವಸ್ಥಾನಕ್ಕೆ ಹೋಗಿದ್ದಾಗ, ಟೆಂಪಲ್ ರನ್ ಎನ್ನುವ ಪದ ಚಾಲ್ತಿಗೆ ಬಂತೋ ಏನೋ, ಅದಾದ ನಂತರ ಅದನ್ನು ಕುಮಾರಸ್ವಾಮಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ಮಾತೂ ಚಾಲ್ತಿಯಲ್ಲಿತ್ತು.
ಈಗ, ವಿರೋಧ ಪಕ್ಷಗಳಿಗೆ ಟೀಕಿಸಲು ಏನಾದರೂ ಒಂದು ಬೇಕಲ್ವಾ ಎನ್ನುವಂತೆ, ದೇವಸ್ಥಾನಕ್ಕೆ ಹೋಗುವ ವಿಚಾರದಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ತಾರತಮ್ಯ ಮಾಡುತ್ತಿದ್ದಾರೆಂದು ಶಾಸಕ ಮತ್ತು ಬಿಜೆಪಿಯ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದರು.
ಮುಖ್ಯಮಂತ್ರಿ ಆದರೆ, ಉತ್ತರ ಕರ್ನಾಟಕದಲ್ಲಿ ಮನೆಮಾಡಿ ತಿಂಗಳಿಗೊಮ್ಮೆ ಬಂದು ಜನರ ಅಹವಾಲನ್ನು ಸ್ವೀಕರಿಸುತ್ತೇನೆ ಎಂದಿದ್ದ ಕುಮಾರಸ್ವಾಮಿಯವರು, ಹುಬ್ಬಳ್ಳಿಯ ತಮ್ಮ ನಿವಾಸವನ್ನು ಖಾಲಿ ಮಾಡಿದ್ದಾರೆಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.
ಸಮ್ಮಿಶ್ರ ಸರಕಾರ, ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿ, ಮಲತಾಯಿ ಧೋರಣೆ ಅನುಸರಿಸುತ್ತಿದೆ, ಈ ಭಾಗದ ಯಾವ ದೇವಸ್ಥಾನಗಳಿಗೂ ಕುಮಾರಸ್ವಾಮಿ ಭೇಟಿ ನೀಡಲಿಲ್ಲ ಎಂದು ಶೆಟ್ಟರ್ ಟೀಕಿಸಿದ್ದರು. ಅದಕ್ಕೆ ಎಚ್ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಎಚ್ಡಿಕೆ ಟೆಂಪಲ್ ರನ್ ಸುತ್ತ ಒಂದು ರೌಂಡ್ ಅಪ್, ಮುಂದೆ ಓದಿ..

ಕೇಂದ್ರದ ಸಿಆರ್ಎಫ್ ಅನುದಾನವನ್ನೂ ಕುಮಾರಸ್ವಾಮಿ ಬಳಸಿಕೊಳ್ಳುತ್ತಿಲ್ಲ
ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿ ಬುಧವಾರ (ಸೆ 5) ಮಾತನಾಡುತ್ತಿದ್ದ ಶೆಟ್ಟರ್, ಕೇಂದ್ರದ ಸಿಆರ್ಎಫ್ ಅನುದಾನವನ್ನೂ ಕುಮಾರಸ್ವಾಮಿ ಬಳಸಿಕೊಳ್ಳುತ್ತಿಲ್ಲ. ಉದ್ದೇಶಪೂರ್ವಕವಾಗಿಯೇ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಭಾಗವನ್ನು ಸಮ್ಮಿಶ್ರ ಸರಕಾರ ಕಡೆಗಣಿಸುತ್ತಿದೆ. ರಾಜ್ಯದಿಂದ ಈ ಭಾಗಕ್ಕೆ ಹೆಚ್ಚಿನ ಅನುದಾನ ಬರದಿದ್ದರೆ, ಬೃಹತ್ ಪ್ರತಿಭಟನೆ ಅನಿವಾರ್ಯ ಎಂದಿದ್ದಾರೆ.

ಬರೀ ದಕ್ಷಿಣದ ದೇವಸ್ಥಾನಗಳಿಗೆ ಹೋಗುವ ಮುಖ್ಯಮಂತ್ರಿ
ಆಡಳಿತ ನಡೆಸುವುದನ್ನು ಬಿಟ್ಟು ದೇವಸ್ಥಾನಕ್ಕೆ ಸುತ್ತುತ್ತಾರೆ, ಅದರಲ್ಲೂ ತಾರತಮ್ಯ ಎಸಗುತ್ತಾರೆ. ಬರೀ ದಕ್ಷಿಣದ ದೇವಸ್ಥಾನಗಳಿಗೆ ಹೋಗುವ ಮುಖ್ಯಮಂತ್ರಿಗಳು ಒಮ್ಮೆಯಾದರೂ, ಉತ್ತರ ಕರ್ನಾಟಕದ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರಾ ಎಂದು ಶೆಟ್ಟರ್ ಕಾಲೆಳೆದಿದ್ದಾರೆ. ದೇವಸ್ಥಾನದ ಭೇಟಿಯಲ್ಲೂ ತಾರತಮ್ಯ ಎಸಗುವ ಇವರಿಂದ ಜನತೆ ಏನು ನಿರೀಕ್ಷಿಸಲು ಸಾಧ್ಯ ಎಂದು ಶೆಟ್ಟರ್ ಟೀಕಿಸಿದ್ದಾರೆ.

ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗವನ್ನು ಕಡೆಗಣಿಸಲಾಗುತ್ತಿದೆ
ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗವನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಬಿಜೆಪಿ ಹೇಳಿಕೆಗೆ ಸಾಕಷ್ಟು ಬಾರಿ ಉತ್ತರ ನೀಡಿದ್ದೇನೆ. ವೈದ್ಯರು ಪ್ರಯಾಣ ಮಾಡಲು ಅನುಮತಿ ನೀಡದೇ ಇರುವುದರಿಂದ, ಆ ಭಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಬಿಜೆಪಿಯವರು ಹತಾಶೆಯಿಂದ ಮಾತನಾಡುತ್ತಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ.

ಉತ್ತರ ಕರ್ನಾಟಕದ ಭಾಗದ ದೇವಾಲಯಗಳಿಗೂ ಭೇಟಿ ನೀಡುತ್ತೇನೆ
ದಕ್ಷಿಣಭಾಗದ ದೇವಸ್ಥಾನದ ಹೆಚ್ಚು ಹೋಗಿರುವುದು ಹೌದು, ಉತ್ತರ ಕರ್ನಾಟಕದ ಭಾಗದ ದೇವಾಲಯಗಳಿಗೂ ಭೇಟಿ ನೀಡುತ್ತೇನೆ, ಬಿಜೆಪಿಯವರು ಎಲ್ಲಾ ವಿಚಾರದಲ್ಲಿ ತಪ್ಪು ಹಿಡಿಯುವುದನ್ನು ನಿಲ್ಲಿಸಲಿ. ಮೊದಲು ಇಂಧನ ದರ ಏರಿಕೆಯಿಂದ ಜನರಿಗಾಗುತ್ತಿರುವ ತೊಂದರೆಯ ಬಗ್ಗೆ ಬಿಜೆಪಿಯವರು ಪ್ರಧಾನಮಂತ್ರಿಯವರ ಗಮನಕ್ಕೆ ಇದನ್ನು ತರಲಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ನಲವತ್ತಕ್ಕೂ ಹೆಚ್ಚು ದೇವಾಲಗಳಿಗೆ ಭೇಟಿ ನೀಡಿದ ಕುಮಾರಸ್ವಾಮಿ
ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕುಮಾರಸ್ವಾಮಿ ಸುಮಾರು ನಲವತ್ತಕ್ಕೂ ಹೆಚ್ಚು ದೇವಾಲಗಳಿಗೆ ಭೇಟಿ ನೀಡಿದ್ದರು. ಅದರಲ್ಲಿ ಪ್ರಮುಖವಾಗಿ ಧರ್ಮಸ್ಥಳ, ಕುಕ್ಕೇ, ಚಾಮುಂಡಿ, ತಿರುಪತಿ, ಮಧುರೈ, ಕನಕದುರ್ಗ, ಶ್ರೀರಂಗಂ, ಅಜ್ಮೀರ್, ಪುಷ್ಕರ್ ಮುಂತಾದ ಪ್ರದೇಶಗಳ ದೇವಾಲಯಗಳಿಗೆ ಭೇಟಿ ನೀಡಿದ್ದರು. ಕುಕ್ಕೇ ಯಲ್ಲಿ ತುಲಾಭಾರವನ್ನೂ ನಡೆಸಿದ್ದರು.












Click it and Unblock the Notifications