ಮತ್ತೆ ರೆಸಾರ್ಟಿನತ್ತ ಸಿಎಂ ಕುಮಾರಸ್ವಾಮಿ, ಈ ಬಾರಿ ಯಾವಕಡೆ?
ಬೆಂಗಳೂರು, ಮೇ 9: ಕೆಲವು ದಿನಗಳ ಹಿಂದೆ ರೆಸಾರ್ಟಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದು ಬೆಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮತ್ತೆ ರೆಸಾರ್ಟಿನತ್ತ ಮುಖಮಾಡಲಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇದೇ ವಾರಾಂತ್ಯದಲ್ಲಿ ಮುಖ್ಯಮಂತ್ರಿಗಳು ಪತ್ನಿ ಸಮೇತರಾಗಿ ಮಡಿಕೇರಿಯ ರೆಸಾರ್ಟಿನಲ್ಲಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆಂದು ವರದಿಯಾಗಿದೆ.
ಎರಡು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರನೊಂದಿಗೆ ವಿಶ್ರಾಂತಿ ತೆಗೆದುಕೊಂಡಿದ್ದ ಮಡಿಕೇರಿಯ 'ಇಬ್ಬನಿ ರೆಸಾರ್ಟಿ' ನಲ್ಲಿಯೇ ಮುಖ್ಯಮಂತ್ರಿಗಳು ತಂಗಲಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ರೆಸಾರ್ಟಿನಿಂದ ವಾಪಸ್ ಆಗಿದ್ದಾರೆ.

ಕಳೆದ ವಾರ, ಉಡುಪಿಯ ಸಾಯಿರಾಧಾ ಬೀಚ್ ರೆಸಾರ್ಟಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದು ಅಲ್ಲಿಂದ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದು ಬೆಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ತಮಿಳುನಾಡಿನ ತಿರುಚೆಂಡೂರು ದೇವಾಲಯಕ್ಕೆ ತೆರಳಿದ್ದರು.
ರಾಜ್ಯದ ನೂರಾರು ಹಳ್ಳಿಗಳಲ್ಲಿ ಬರದ ಸಮಸ್ಯೆ ವಿಪರೀತ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಭಾಗದ ಹಲವು ಭಾಗಗಳಲ್ಲಿ ಜನರು ಹನಿ ನೀರಿಗೂ ಸಮಸ್ಯೆ ಎದುರಿಸುತ್ತಿದ್ದಾರೆ, ಜಾನುವಾರುಗಳಿಗೂ ಮೇವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ರೆಸಾರ್ಟಿನಲ್ಲಿ ಮೋಜು ಮಾಡುವುದು ಎಷ್ಟು ಸರಿ ಎಂದು ಬಿಜೆಪಿ ಟೀಕಿಸಿತ್ತು.
ಕೊಪ್ಪ ತಾಲೂಕಿನ, ತುಂಗಾ ನದಿಯ ತಟವಾದ ಕಮ್ಮರಡಿಗೆಯ ಉಮಾಮಹೇಶ್ವರಿ ದೇವಾಲಯದಲ್ಲಿ ಅಮಾವಾಸ್ಯೆಯಂದು ದೇವೇಗೌಡರ ಕುಟುಂಬದಿಂದ, ಹೋಮ ಹವನ, ವಿಶೇಷ ಪೂಜೆ ನಡೆದಿತ್ತು.












Click it and Unblock the Notifications