ಕಾಂಗ್ರೆಸ್ ಬಿಡುವುದಿಲ್ಲ, ಸ್ಪಷ್ಟನೆ ಕೊಟ್ಟ ಇಬ್ರಾಹಿಂ
ಬೆಂಗಳೂರು, ಅ. 13 : 'ನಾನು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ವಂದತಿ. ಪಕ್ಷ ಬಿಡುವ ಯಾವುದೇ ಉದ್ದೇಶವೂ ನನಗಿಲ್ಲ, ಈ ಬಗ್ಗೆ ಯಾವುದೇ ಗೊಂದಲ ಬೇಡ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸ್ನೇಹಿತ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರ ಸಿ.ಎಂ.ಇಬ್ರಾಹಿಂ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಭಾನುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಇಬ್ರಾಹಿಂ ಈ ಕುರಿತು ಸ್ಪಷ್ಟನೆ ನೀಡಿದರು. ತಾವು ಬಿಜೆಪಿ ಸೇರುವ ಬಗ್ಗೆ ಕೇಳಿಬರುತ್ತಿರುವ ಮಾಹಿತಿ ಮಾಧ್ಯಮಗಳ ಸೃಷ್ಟಿಯಷ್ಟೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಬಿಡುವಂತಹ ಯಾವ ಉದ್ದೇಶವೂ ನನ್ನ ಮುಂದೆ ಇಲ್ಲ. ಯೋಜನಾ ಮಂಡಳಿಯ ಜವಾಬ್ದಾರಿ ವಹಿಸಿಕೊಂಡು ಕೇಂದ್ರ ಮತ್ತು ರಾಜ್ಯಗಳ ಯೋಜನೆ ಅನುಷ್ಠಾನ ಸಂಬಂಧ ಸಮನ್ವಯ ಸಾಧಿಸುವ ಕೆಲಸ ಮಾಡಲಾಗುತ್ತಿದೆ. ಈ ಹೊತ್ತಿನಲ್ಲಿ ಪಕ್ಷ ಬಿಡುವ ವಿಷಯ ಏಕೆ ಹಬ್ಬಿತು ಎಂದು ತಿಳಿದಿಲ್ಲ ಎಂದರು. [ಸಿದ್ದರಾಮಯ್ಯ ಪರಮಾಪ್ತ ಸಿಎಂ ಇಬ್ರಾಹಿಂ ಬಿಜೆಪಿಗೆ?]
'ನಾನು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ, ಪಕ್ಷ ಬಿಡುವ ಆಲೋಚನೆಯೂ ನನಗೆ ಇಲ್ಲ, ಈ ಬಗ್ಗೆ ಯಾವುದೇ ಗೊಂದಲ ಬೇಡ' ಎಂದು ಸಿಎಂ ಇಬ್ರಾಹಿಂ ಸ್ಪಷ್ಟಪಡಿಸಿದರು. ಸಿ.ಎಂ.ಇಬ್ರಾಹಿಂ ಬಿಜೆಪಿ ಸೇರುತ್ತಾರೆ. ಅವರು ರಾಜ್ಯದ ಹಿರಿಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಈ ಕುರಿತು ಮಾತನಾಡಿದ್ದಾರೆ. ಬಿಜೆಪಿ ಸೇರುವ ಕುರಿತು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಗಳು ಕೇವಲ ವದಂತಿ ಎಂದು ತಿಳಿಸಿದರು.
ಸಿ.ಎಂ.ಇಬ್ರಾಹಿಂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೊಗಳಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ತೆಗಳಿಕೆಯಿಂದ ಮಾತ್ರ ಪಕ್ಷ ಕಟ್ಟಲಾಗದು. ಹೊಗಳಿಕೆಯೂ ಪಕ್ಷ ಕಟ್ಟಲು ನೆರವಿಗೆ ಬರುತ್ತದೆ' ಎಂದು ಹೇಳಿದರು.












Click it and Unblock the Notifications