CM and DCM: "ಏಕತೆಯ ಪ್ರದರ್ಶನ ಅಲ್ಲ; ಕೇವಲ ಕದನ ವಿರಾಮವಷ್ಟೇ!"
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಕುರ್ಚಿ ಗುದ್ದಾಟ ಇಂದು ತಾರ್ಕಿಕ ಅಂತ್ಯ ಕಂಡಿದೆ. ಆದರೆ, ಇದು ಅಂತ್ಯವಲ್ಲ ಕದನ ವಿರಾಮವಷ್ಟೇ ಎನ್ನುವ ಮಾತು ಕೇಳಿ ಬಂದಿದೆ. ಹೈಕಮಾಂಡ್ ಮಧ್ಯಪ್ರವೇಶದಿಂದಾಗಿ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಅಂತ್ಯ ಕಂಡಂತೆ ಇದೆ. ಆದರೆ ಇದು ಕೊನೆಯಲ್ಲ ಮತ್ತೆ ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಈ ರೀತಿಯ ಚರ್ಚೆಯೊಂದು ಪ್ರಾರಂಭವಾಗುವುದಕ್ಕೆ ಮುಖ್ಯ ಕಾರಣ ವಿರೋಧ ಪಕ್ಷಗಳು ಈ ವಿಚಾರವಾಗಿ ಮಾಹಿತಿಯೊಂದನ್ನು ಹಂಚಿಕೊಂಡಿರುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಡುವಿನ ಬಹುನಿರೀಕ್ಷಿತ 'ಬೆಳಗಿನ ಉಪಾಹಾರ ಶೃಂಗಸಭೆ' ಅಂತೂ ಇಂತೂ ಜರುಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.

ಅಸಲಿಗೆ ಇದನ್ನು "ಬ್ರೇಕ್‌ಫಾಸ್ಟ್ ಮೀಟಿಂಗ್" ಎಂದು ಕರೆಯುವುದು ಒಂದು ಔದಾರ್ಯವೇ ಸರಿ. ನಿಜ ಹೇಳಬೇಕು ಅಂದರೆ ಇದು ದಿನಬೆಳಗಾದರೆ ಒಬ್ಬರ ಮೇಲೊಬ್ಬರು ಹೊಂಚು ಹಾಕುವ, ಕತ್ತಿ ಮಸಿಯುವ ಎರಡು ಯುದ್ಧ ನಿರತ ಬಣಗಳ ಕಮಾಂಡರ್‌ಗಳ ನಡುವಿನ "ಕದನ ವಿರಾಮ" ಸಭೆಯಂತೆ ಕಾಣಿಸಿತು. ಎಲ್ಲಕ್ಕಿಂತ ಮಿಗಿಲಾದ ಅತ್ಯಂತ ಹಾಸ್ಯಾಸ್ಪದ ಸಂಗತಿ ಏನೆಂದರೆ - ಇಬ್ಬರೂ ನಾಯಕರು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಎಲ್ಲಾ ಗೊಂದಲಗಳಿಗೆ ಮಾಧ್ಯಮಗಳನ್ನೇ ದೂಷಿಸುತ್ತಿರುವುದು ಎಂದು ವ್ಯಂಗ್ಯವಾಡಿದ್ದಾರೆ.
ಪ್ರಶ್ನೆ ಇಷ್ಟೇ, ಸ್ವಾಮಿ: ಇಷ್ಟಕ್ಕೂ ಈ ಗೊಂದಲ ಸೃಷ್ಟಿಸಿದ್ದು ಯಾರು? ಮಾಧ್ಯಮಗಳೋ, ತಾವುಗಳೋ?
ನವೆಂಬರ್‌ನಲ್ಲಿ 'ಕ್ರಾಂತಿ' ಎಂದು ಕರೆ ನೀಡಿ, ಹೇಳಿಕೆಗಳ ಮೇಲೆ ಹೇಳಿಕೆ ಕೊಟ್ಟು, ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದು ಪತ್ರಕರ್ತರಾ? "ಕೊಟ್ಟ ಮಾತು ಉಳಿಸಿಕೊಳ್ಳವವನು ನಿಜವಾದ ನಾಯಕ," "ಐದಾರು ಜನರ ಮಧ್ಯೆ ನಡೆದಿರುವ 'ವ್ಯಾಪಾರ'", "ಐದು ವರ್ಷ ನಾನೇ ಸಿಎಂ" ಎಂದೆಲ್ಲಾ ಬಹಿರಂಗ ಹೇಳಿಕೆಗಳ ಮೂಲಕ ಬಿಕ್ಕಟ್ಟು ಸೃಷ್ಟಿಸಿದ್ದು ಪತ್ರಕರ್ತರಾ ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಮುಂದುವರಿದು ಶಕ್ತಿ ಪ್ರದರ್ಶನಕ್ಕೆಂದು ಶಾಸಕರ ಗುಂಪುಗಳನ್ನು ಕಟ್ಟಿಕೊಂಡು ತಂಡ ತಂಡವಾಗಿ ದೆಹಲಿಗೆ ಹೋಗಿ, ಗುಪ್ತ ಸಭೆಗಳನ್ನು ನಡೆಸಿದ್ದು ಪತ್ರಕರ್ತರಾ ಎಂದೂ ಅವರು ಕೇಳಿದ್ದಾರೆ. ಇವತ್ತು ರಾಜ್ಯದಲ್ಲಿ ಸೃಷ್ಟಿ ಆಗಿರುವ ಈ ಎಲ್ಲಾ ಗೊಂದಲಗಳಿಗೆ ಕಾರಣವೇನು ಗೊತ್ತೇ? ತಮ್ಮಿಬ್ಬರ ಒಣಪ್ರತಿಷ್ಠೆ, ಅಧಿಕಾರದ ಲಾಲಸೆ ಮತ್ತು ಶಾಸಕರ ಗುಂಪುಗಾರಿಕೆಯೇ ಕಾರಣವೇ ಹೊರತು, ನಿಮ್ಮ ನಾಟಕಗಳನ್ನು ವರದಿ ಮಾಡಿ ಸತ್ಯವನ್ನು ಬಿತ್ತರಿಸಿದ ಮಾಧ್ಯಮಗಳಲ್ಲ.
ಈ ತೋರಿಕೆಯ "ಏಕತೆಯ ಪ್ರದರ್ಶನ"ದ ಹಿಂದೆ ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತಿರುವುದು ಬಿಡಿಸಲಾಗದ ಕಗ್ಗಂಟು ಮತ್ತು ಸಂಪೂರ್ಣವಾಗಿ ಒಡೆದ ಕನ್ನಡಿಯ ಚೂರುಗಳೇ ಹೊರತು, ಯಾವುದೇ ಪ್ರಾಮಾಣಿಕ ಮೈತ್ರಿಯಲ್ಲ. ಇದು ಕೇವಲ ಒಂದು ಕ್ಷಣಿಕ 'ಆಪ್ಟಿಕ್ಸ್' ಅಷ್ಟೇ ಎನ್ನುವುದು ಮಾತ್ರ ಗ್ಯಾರಂಟಿ ಎಂದೂ ಅವರು ಹೇಳಿದ್ದಾರೆ.












Click it and Unblock the Notifications