2047ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು ₹320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ: ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಆಗಸ್ಟ್‌ 15: ರಾಜ್ಯದ ಅಭಿವೃದ್ಧಿಯ ತೇರನ್ನು ಎಳೆಯಲು ಕೇವಲ ಎರಡು ಕೈಗಳು ಸಾಲುವುದಿಲ್ಲ. ಕನ್ನಡ ಕುಲಕೋಟಿಯ ಕೈಗಳು ನನ್ನ ಜೊತೆ ಕೈಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನತೆಗೆ ಕರೆ ನೀಡಿದರು. ಇದೇ ವೇಳೆ ಇನ್ನೂ ಹಲವು ಮಹತ್ವದ ವಿಚಾರಗಳನ್ನ ಹಂಚಿಕೊಂಡರು.

ಮಾಣಿಕ್ ಷಾ ಮೈದಾನದಲ್ಲಿ ಶನಿವಾರ (ಆಗಸ್ಟ್‌ 15) ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. 'ನನ್ನನ್ನು ನಂಬಿ ಇಲ್ಲಿಯವರೆಗೆ ಕರೆತಂದ ನಾಡಿನ ಜನತೆಗೆ ನಾನು ಸಾಕ್ಷಿಗುಡ್ಡೆ ಉಳಿಸುತ್ತೇನೆ. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿ ಒಂದಕ್ಕೊಂದು ಪೂರಕವಾಗಿದ್ದು, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಕೃಷಿ, ಆರ್ಥಿಕತೆ ಹಾಗೂ ಸಂಸ್ಕೃತಿಯಲ್ಲಿ ದೇಶಕ್ಕೆ ದಾರಿ ತೋರಿಸುತ್ತಿರುವ ಕರ್ನಾಟಕದ ಶಕ್ತಿಯನ್ನು ಮತ್ತಷ್ಟು ಬೆಳೆಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

CM D K Shivakumar Independence Day Speech AI in Schools New Farmer Schemes and 2047 Vision

'ಮಾನವ ಧರ್ಮಕ್ಕೆ ಜಯವಾಗಲಿ'

'ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ ಮುಖ್ಯಮಂತ್ರಿಯವರು, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಅನಿಕೇತನದ ಆಶಯವನ್ನು ನೆನಪಿಸಿಕೊಂಡರು. ನೂರು ಮತದ ಹೊಟ್ಟ ತೂರಿ/ ಎಲ್ಲ ತತ್ವದ ಎಲ್ಲೆ ಮೀರಿ/ ನಿರ್ದಿಗಂತವಾಗಿ ಏರಿ/ ಓ ನನ್ನ ಚೇತನ/ ಆಗು ನೀ ಅನಿಕೇತನ, ಕವನದ ಸಾಲುಗಳನ್ನು ಓದಿ ಕನ್ನಡ ಮಣ್ಣಿನ ಮೌಲ್ಯಗಳನ್ನು ನಿತ್ಯದ ಬದುಕಿನಲ್ಲಿ ಪಾಲಿಸೋಣ,' ಎಂದು ಕರೆ ನೀಡಿದರು.

2047ರ ವೇಳೆಗೆ 320 ಲಕ್ಷ ಕೋಟಿ ರೂ. ಆರ್ಥಿಕತೆಯ ಗುರಿ

ಕರ್ನಾಟಕದ ತಲಾ ಆದಾಯ 4.33 ಲಕ್ಷ ರೂಪಾಯಿ ತಲುಪಿದ್ದು, ಜಿಎಸ್‌ಟಿ ಮತ್ತು ಆದಾಯ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುವ ಮೂಲಕ 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್, ಅಂದರೆ 320 ಲಕ್ಷ ಕೋಟಿ ರೂಪಾಯಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದರು.

'ಮುಖ್ಯಮಂತ್ರಿ ರೈತ ಚೈತನ್ಯ, ರೈತ ಮಿತ್ರ ಯೋಜನೆ ಜಾರಿ'

'ರೈತರ ಅನುಭವಕ್ಕೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ ಜಾರಿಯಾಗಲಿದ್ದು, ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುವುದು. ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯಲು 'ರೈತ ಮಿತ್ರ ಯೋಜನೆ' ಜಾರಿಗೊಳಿಸಲಾಗುವುದು. ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಾಡಿಗೆ ಶುಲ್ಕದ ಮೇಲೆ ಶೇಕಡ 50ರಷ್ಟು ಸಹಾಯಧನ ನೀಡಲಾಗುವುದು,' ಎಂದು ಅಭಯ ನೀಡಿದರು.

'ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಬೆಳೆ ವಿಮಾ ಯೋಜನೆಯಡಿ 12.35 ಲಕ್ಷ ರೈತರಿಗೆ 1,300 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. 25 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ವಿಸ್ತರಿಸಲಾಗಿದ್ದು, 184 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗಿದೆ' ಎಂದು ಹೇಳಿದರು.

'ಎಐ ಅಕ್ಷರ ಅಭಿಯಾನ, ಕೋಡಿಂಗ್ ಗುರುಕುಲ ಆರಂಭ'

'ಯುವ ಕರ್ನಾಟಕ-ನವ ಭಾರತ ನಮ್ಮ ಧ್ಯೇಯವಾಕ್ಯ. ಯುವಜನರ ಭವಿಷ್ಯ ರೂಪಿಸುವ ಸಲುವಾಗಿ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ರಾಜ್ಯದ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಎಐ (AI) ಪರಿಚಯಿಸುವುದರ ಜೊತೆಗೆ ಎಐ ಅಕ್ಷರ ಅಭಿಯಾನ ಮತ್ತು ಕೋಡಿಂಗ್ ಗುರುಕುಲ ಆರಂಭಿಸಲಾಗುತ್ತಿದೆ. ಬೆಂಗಳೂರಿನಲ್ಲಿ ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಹಾಗೂ ಎಐ ಹಬ್‌ಗಳನ್ಮು ನಿರ್ಮಿಸಲಾಗುವುದು,' ಎಂದು ಘೋಷಿಸಿದರು.

'ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ಸಂಘಕ್ಕೆ 10 ಲಕ್ಷದಂತೆ ವಾರ್ಷಿಕ 1,000 ಕೋಟಿ ಅನುದಾನ ಒದಗಿಸಲಾಗುವುದು. ಯುವನಿಧಿ ಯೋಜನೆಯಡಿ ಸುಮಾರು 4 ಲಕ್ಷ ನಿರುದ್ಯೋಗಿ ಹಾಗೂ ಡಿಪ್ಲೊಮಾ ಪದವೀಧರರಿಗೆ 1,200 ಕೋಟಿ ನೆರವು ನೀಡಲಾಗಿದೆ,' ಎಂದು ತಿಳಿಸಿದರು.

'ನವೆಂಬರ್ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು'

'ನೀರಿಗಿಂತ ಅಮೂಲ್ಯವಾದುದು ಮತ್ತೊಂದಿಲ್ಲ. ಜಲ ಭದ್ರತೆ ಸರ್ಕಾರದ ಮೊದಲ ಆದ್ಯತೆ. ಈ ವರ್ಷ ₹16 ಸಾವಿರ ಕೋಟಿ ಮೊತ್ತದ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತ ಪೂರ್ಣಗೊಳ್ಳುತ್ತಿದ್ದು, ನವೆಂಬರ್ ವೇಳೆಗೆ ತುಮಕೂರು ಜಿಲ್ಲೆಗೆ ನೀರು ತಲುಪಲಿದೆ,' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+