ಸಿ.ಎಂ ಬದಲಾವಣೆ: ಸೀನಿಯರ್ ಆಯ್ತು ಈಗ ಲಿಂಗಾಯತ ಸಮುದಾಯ, ಕಲ್ಯಾಣ ಕರ್ನಾಟದ ಚರ್ಚೆ!
ಮುಖ್ಯಮಂತ್ರಿ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ ಸಿ.ಎಂ ಸ್ಥಾನದಿಂದ ಇಳಿಸುವುದಿಲ್ಲ ಎಂದು ಹೇಳಲಾಗುತ್ತಿದೆಯಾದರೂ, ಒಬ್ಬೊಬ್ಬರೇ ಕಾಂಗ್ರೆಸ್ ಮುಖಂಡರು ನಾನೂ ಸಿ.ಎಂ ಅಭ್ಯರ್ಥಿ, ನಾನ್ಯಾಕೆ ಸಿ.ಎಂ ಆಗಬಾರದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಿ.ಎಂ ಬದಲಾವಣೆಯ ಚರ್ಚೆ ಇದೀಗ ರಾಜಕೀಯ ಹಾಗೂ ಪಕ್ಷದಲ್ಲಿನ ಸಿನೀಯರ್ ಎನ್ನುವುದರಿಂದ ಕ್ರಮೇಣ ಸಮುದಾಯವಾರು, ಪ್ರದೇಶಿಕವಾರು ಚರ್ಚೆಗೆ ತೆರೆದುಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಾಗಿನಿಂದಲೂ, ಕಾಂಗ್ರೆಸ್‌ನೊಳಗೇ ಭಿನ್ನವಾದ ಚರ್ಚೆಗಳು ನಡೆಯುತ್ತಿವೆ. ಇನ್ನು ಸಿ.ಎಂ ಬದಲಾವಣೆ ವಿಚಾರಣೆಯಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್‌ನ ನಾಯಕರು ಹಾಗೂ ಸಚಿವರೇ ಹೆಚ್ಚು ಚರ್ಚೆಗೆ ಗ್ರಾಸವಾಗುವಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಯೇ ಜೋರಾಗಿದೆ. ಇದರ ಬೆನ್ನಲ್ಲೇ ಉತ್ತರ ಕನ್ನಡ, ಕಲ್ಯಾಣ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯದ ಸಿಎಂ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.

ಇದೀಗ ನಾನು ಸಿಎಂ ಆಗಿ ಆಯ್ಕೆಯಾದರೆ ತಪ್ಪೇನು ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಕೇಳಿದ್ದಾರೆ. ನಾನು ಸಹ ಕಲ್ಯಾಣ ಕರ್ನಾಟಕದಿಂದ ಹೆಚ್ಚು ಬಾರಿ ಆಯ್ಕೆಯಾಗಿದ್ದೇನೆ. ಕರ್ನಾಟಕ ಕರ್ನಾಟಕದಿಂದ ಹೆಚ್ಚು ಬಾರಿ ಆಯ್ಕೆಯಾದ ಶಾಸಕರಲ್ಲಿ ನಾನು ಸಹ ಒಬ್ಬ. ಬಿ.ಆರ್ ಪಾಟೀಲ ಅವರನ್ನು ಹೊರತುಪಡಿಸಿದರೆ, ಈ ಭಾಗದಿಂದ ಆಯ್ಕೆಯಾದವರಲ್ಲಿ ನಾನೇ ಹಿರಿಯನಾಗಿದ್ದೇನೆ. ಈ ಭಾಗದವರಿಗೆ ಆದ್ಯತೆ ಹಾಗೂ ಲಿಂಗಾಯತ ಸಮುದಾಯದವರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದರೆ, ನಾನೇ ಮೊದಲ ಸಾಲಿನಲ್ಲಿ ಇರಲಿದ್ದೇನೆ ಎಂದು ಅವರು ಹೇಳಿದ್ದಾರೆ. ಯಾರಿಗೆ ಗೊತ್ತು ನನಗೂ ಒಂದು ದಿನ ಲಾಟರಿ ಹೊಡೆಯಬಹುದು. ಈ ಮೂಲಕ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಗೆ ಹೊಸ ಹೆಸರು ಸೇರ್ಪಡೆಯಾಗಿದೆ.
ಪ್ರಜಾಪ್ರಭುತ್ವದಲ್ಲಿ ಯಾರು ಏನ್ ಆಗ್ತಾರೋ ಗೊತ್ತಿಲ್ಲ. ಯಾರು ಏನು ಬೇಕಾದರೂ ಆಗುವುದಕ್ಕೆ ಅವಕಾಶ ಇದೆ. ಆದರೆ, ಇನ್ನು ಮೂರು ವರ್ಷಗಳ ಕಾಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಆಗ ಮಾತ್ರ ಕರ್ನಾಟಕದ ಅಭಿವೃದ್ಧಿಯಾಗುತ್ತದೆ ಎಂದೂ ರಾಯರೆಡ್ಡಿ ಹೇಳಿದ್ದಾರೆ. ರಾಜಕೀಯದಲ್ಲಿ ಇರುವವರು ಯಾರೇ ಆದರೂ ಸಿ.ಎಂ ಸ್ಥಾನಕ್ಕೆ ಆಸೆ ಪಡುವುದರಲ್ಲಿ ತಪ್ಪೇನು ಸಹ ಇಲ್ಲ. ಆ ರೀತಿ ನೋಡಿದರೆ ನಾನು ಸಹ ಲಿಂಗಾಯತ ಕೋಟಾದ ಅಡಿಯಲ್ಲಿ ಬರುತ್ತೇನೆ. ನಮ್ಮ ಪಕ್ಷವು ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಲು ಇಚ್ಛಿಸಿದರೆ, ನನಗೆ ಟಿಕೆಟ್ ನೀಡಲಿ. ನನಗೆ ಇದರಿಂದ ಯಾವ ಮುಜುಗರವೂ ಇಲ್ಲ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಅವರು ಮನಸ್ಸು ಮಾಡಬೇಕು. ಯಾವಾಗ ಯಾರು ಏನುಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲೇ ಇದೆ.
ವಿರೋಧ ಪಕ್ಷಗಳು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸಿ.ಎಂ ಬದಲಾವಣೆಯ ಚರ್ಚೆಯ ಬಗ್ಗೆ ವ್ಯಂಗ್ಯವಾಡಿವೆ. ಸಿ.ಎಂ ಬದಲಾವಣೆಗೆ ಕ್ಯೂ ಸ್ಟಾರ್ಟ್ ಆಗಿದೆ. ನಿತ್ಯವೂ ನಾನು ಸಿ.ಎಂ, ನಾನು ಸಿ.ಎಂ ಎಂದು ಸಚಿವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.











Click it and Unblock the Notifications