ಜುಲೈ 26ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಯಡಿಯೂರಪ್ಪ
ಬೆಂಗಳೂರು, ಜುಲೈ 17: ಇದೇ ಜುಲೈ 26ರಂದು ಹಲವು ವಿಷಯಗಳ ಕುರಿತು ಚರ್ಚೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ತಮ್ಮ ನೇತೃತ್ವದ ಸರ್ಕಾರ ಜುಲೈ 26ಕ್ಕೆ ಎರಡು ವರ್ಷ ಪೂರೈಸುತ್ತಿದ್ದು, ಈ ಪ್ರಯುಕ್ತ ಶಾಸಕಾಂಗ ಸಭೆ ಕರೆಯಲಾಗಿದೆ. ಎಲ್ಲರನ್ನೂ ಒಟ್ಟಾಗಿ ಸೇರಿಸಿ ಮುಂದೆ ಪಕ್ಷ ಬಲಪಡಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಶನಿವಾರ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಕುರಿತು ಮಾತನಾಡಿರುವ ಅವರು, "ದೆಹಲಿ ಪ್ರವಾಸ ಬಹಳ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇನೆ. ಪ್ರಧಾನಿ ಮೋದಿಯವರ ಜತೆ ಅರ್ಧ ಗಂಟೆ ರಾಜ್ಯದ, ದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಾಗೆಯೇ ಅಮಿತ್ ಶಾ, ನಡ್ಡಾ ಅವರ ಜತೆ, ರಾಜನಾಥ್ ಸಿಂಗ್ ಅವರ ಜತೆ ಚರ್ಚೆ ಮಾಡಿದ್ದೇನೆ. ಎಲ್ಲರೊಂದಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ, ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಬಹಳ ಯಶಸ್ವಿಯಾದ ಭೇಟಿ ಇದು" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಮತ್ತೊಮ್ಮೆ ಹೆಚ್ಚಿನ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವುದು ವರಿಷ್ಠರ ಅಪೇಕ್ಷೆ. ಹೆಚ್ಚು ಜನ ಲೋಕಸಭೆ ಸಂಸದರು ಗೆಲ್ಲಬೇಕು, ಪಕ್ಷ ಸಂಘಟನೆ ಮಾಡಬೇಕು ಎನ್ನುವುದು ವರಿಷ್ಠರ ಅಪೇಕ್ಷೆ. ಮುಂಬರುವ ದಿನಗಳಲ್ಲಿ ಸಾಮೂಹಿಕವಾಗಿ ಪಕ್ಷ ಬಲವರ್ಧನೆ ಮಾಡುವ ಭರವಸೆ ಕೊಟ್ಟಿದ್ದೇನೆ. ಇದರಿಂದ ಒಂದು ಹೆಜ್ಜೆ ಹಿಂದೆ ಸರಿಯದೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ" ಎಂದು ತಿಳಿಸಿದರು.

ಪರ್ಯಾಯ ನಾಯಕತ್ವದ ವಿಚಾರವಾಗಿ ಮಾತನಾಡಿದ ಅವರು, "ಈವರೆಗೆ ವರಿಷ್ಠರ ಜತೆಗೆ ಪರ್ಯಾಯ ನಾಯಕತ್ವದ ಬಗ್ಗೆ ಚರ್ಚೆ ಆಗಿಲ್ಲ. ಬಿಜೆಪಿಯಲ್ಲಿ ನಾಯಕತ್ವಕ್ಕೆ ಕೊರತೆ ಇಲ್ಲ. ಒಬ್ಬರಾದ ಮೇಲೊಬ್ಬರು ಪರ್ಯಾಯ ನಾಯಕರು ಇದ್ದೇ ಇರುತ್ತಾರೆ. ಈಗ ಸದ್ಯಕ್ಕೆ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈಗಿನ ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ. ರಾಷ್ಟ್ರೀಯ ನಾಯಕರು ನೀವೇ ಮುಖ್ಯಮಂತ್ರಿ ಆಗಿ ಪಕ್ಷ ಬಲಪಡಿಸಿ ಎಂದು ಹೇಳಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ" ಎಂದರು.
"ಕೆಲವರು ಆಗಿನಿಂದಲೂ ನನ್ನ ವಿರುದ್ಧವಾಗಿ ಮಾತಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರ ಹೇಳಿಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಹೈಕಮಾಂಡ್ ಕೂಡ ಅದರ ಬಗ್ಗೆ ನನಗೆ ಪ್ರಶ್ನೆ ಕೇಳಲಿಲ್ಲ. ಸುಧಾರಣೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟಿದ್ದು" ಎಂದು ತಿರುಗೇಟು ನೀಡಿದರು.












Click it and Unblock the Notifications