ಮನೆ ಇಲ್ಲದವರಿಗೆ ಗಣೇಶ ಹಬ್ಬದ ಬಂಪರ್ ಕೊಡುಗೆ ಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರು, ಸೆ. 10: ಮನೆಯಿಲ್ಲದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಣೇಶ ಹಬ್ಬದ ದಿನ ಶುಭ ಸುದ್ದಿ ಕೊಟ್ಟಿದ್ದಾರೆ. ಕಳೆದ ತಿಂಗಳು ಅವರು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಇಂದು ಶುಕ್ರವಾರ ಮಹತ್ವದ ಆದೇಶ ಮಾಡಿದ್ದಾರೆ. ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಸತಿ ಇಲಾಖೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ 4 ಲಕ್ಷ ಹೊಸ ಮನೆಗಳ ಗುರಿಗೆ ಅನುಮೋದನೆ ದೊರೆಯದಿದ್ದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮನೆಗಳಿಗೆ ಅನುಮೋದನೆ ದೊರೆತಲ್ಲಿ ಉಳಿದ ಮನೆಗಳನ್ನು ರಾಜ್ಯದ ವಸತಿ ಯೋಜನೆಗಳಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಳೆದ ಆಗಸ್ಟ್ 17ರಂದು ಸಿಎಂ ಬೊಮ್ಮಾಯಿ ಸೂಚಿಸಿದ್ದರು.

ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದರಿಗೆ ಮನೆ
ಸರ್ಕಾರ ಸಲ್ಲಿಸಿದ ಪ್ರಸ್ತಾವನೆ ಇದೀಗ ಅನುಷ್ಠಾನವಾಗುತ್ತಿದ್ದು, ರಾಜ್ಯದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ವಸತಿ ರಹಿತರಿಗೆ ಮನೆ ಕಟ್ಟಲು ಯೋಜನೆ ರೂಪಸಲಾಗಿದೆ. ವಸತಿ ಯೋಜನೆಯಡಿ 4 ಲಕ್ಷ ಹೊಸ ಮನೆಗಳಿಗೆ ಎದುರಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಣೇಶ ಚತುರ್ಥಿಯಂದು ಶುಕ್ರವಾರ ವಸತಿ ಇಲಾಖೆಗೆ ಸೂಚಿಸಿದ್ದಾರೆ.

ಹಿಂದೆಯೇ ಆದೇಶ ಮಾಡಿದ್ದ ಸಿಎಂ ಬೊಮ್ಮಾಯಿ!
ಕಳೆದ ಆಗಸ್ಟ್ 17 ರಂದು ಆದೇಶ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದಿಳಿದವರಿಗೆ ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಆ ಆದೇಶದ ಮುಂದುವರೆದ ಭಾಗವಾಗಿ ಇಂದು ಮತ್ತೊಂದು ಆದೇಶವನ್ನು ಮುಖ್ಯಮಂತ್ರಿಗಳು ಮಾಡಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸೂರಿಲ್ಲದವರಿಗೆ ಹೊಸ ಭರವಸೆ ಸಿಕ್ಕಂತಾಗಿದೆ. ಈ ಹಿಂದೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದಿದ್ದ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಸಚಿವ ವಿ. ಸೋಮಣ್ಣ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಲಕ್ಷಕ್ಕೂ ಅಧಿಕ ಮನೆಗಳು ಬಾಕಿಯಿದ್ದವು!
ರಾಜ್ಯದಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಗಳಡಿ, 4.09 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬಾಕಿ ಇರುವ 1.67 ಲಕ್ಷ ಮನೆಗಳಿಗೆ ಮುಂದಿನ 15 ದಿವಸದೊಳಗೆ ಜಿಪಿಎಸ್ ಅಪ್‌ಲೋಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ಆಗಸ್ಟ್ 17ರಂದು ಸೂಚಿಸಿದ್ದರು.
Recommended Video

ವಿವಿಧ ವಸತಿ ಯೋಜನೆಗಳ ಅನುಷ್ಠಾನ
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಎಎಚ್ ಪಿ- 1.8 ಲಕ್ಷ ಮನೆಗಳು ಕಾಮಗಾರಿ ಪ್ರಾರಂಭವಾಗಿಲ್ಲ. ಈ ಯೋಜನಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ, ಹಿಂದುಳಿದ ವರ್ಗಗಳು ಹಾಗೂ ಕಾರ್ಮಿಕ ಫಲಾನುಭವಿಗಳ ವಂತಿಗೆ ಮೊತ್ತವನ್ನು ಆಯಾ ಇಲಾಖೆಗಳ ಯೋಜನೆಗಳಡಿ ಪಡೆದುಕೊಂಡು, ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆಯೂ ಸಿಎಂ ಬೊಮ್ಮಾಯಿ ಸೂಚಿಸಿದ್ದರು. ಅದರೊಂದಿಗೆ ಬೆಂಗಳೂರು ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ 42,361 ಮನೆ ನಿರ್ಮಾಣವಾಗುತ್ತಿದ್ದು ಬಾಕಿ ಮನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸುವಂತೆಯೂ ಆದೇಶ ಮಾಡಿದ್ದರು.
ಒಟ್ಟಾರೆ ಈ ಎಲ್ಲ ವಸತಿ ಯೋಜನೆಯೊಂದಿಗೆ 4 ಲಕ್ಷ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಹೀಗಾಗಿ ವಸತಿ ವಸತಿ ರಹಿತರಿಗೆ ಗಣಪತಿ ಹಬ್ಬದ ಬಂಪರ್ ಕೊಡುಗೆ ಸಿಕ್ಕಂತಾಗಿದೆ.












Click it and Unblock the Notifications