ಮೈಸೂರಿನಲ್ಲಿ ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರು, ಅ. 06: ಮೈಸೂರು ದಸರಾ ಉದ್ಘಾಟನೆಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲ್ಲಿ ಬೆಂಗಳೂರಿಗರಿಗೆ ನೆಮ್ಮದಿ ಕೊಡುವಂತಹ ಸುದ್ದಿಯನ್ನು ಕೊಟ್ಟಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೆಂಗಳೂರಿನಲ್ಲಿ ಸರ್ಕಾರವೇ ಇಲ್ಲದಂತಹ ಸ್ಥಿತಿಯಿದೆ ಎಂದು ವಿರೋಧ ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಆ ಎಲ್ಲ ಆರೋಪಗಳಿಂದ ಮುಕ್ತವಾಗಲು ರಾಜ್ಯ ಸರ್ಕಾರ ಮುಂದಾಗಿದೆ.
ಮಳೆ ಬಂದಾಗ ಬೆಂಗಳೂರು ಅಕ್ಷರಶಃ ಹೊಂಡದಂತಾಗುತ್ತದೆ. ಕೆರೆಗಳನ್ನು ಅತಿಕ್ರಮಿಸಿ ಮನೆಗಳನ್ನು ನಿರ್ಮಾಣ ಮಾಡಿದ್ದೂ ಅದಕ್ಕೊಂದು ಕಾರಣ. ಹೀಗಾಗಿ ಮಳೆ ಬಂದಾಗೆಲ್ಲ ಮನೆಗಳಿಗೆ ನೀರು ನುಗ್ಗುವುದು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ. ಹೀಗಾಗಿ ಬಿಬಿಎಂಪಿ ಮೇಲೆ ಜನರ ಆಕ್ರೋಶ ಆಗಾಗ ಸ್ಫೋಟವಾಗುತ್ತಲೇ ಇರುತ್ತದೆ. ಆದರೆ ಮಳೆ ನಿಂತ ಬಳಿಕ ಅದೂ ಕಡಿಮೆಯಾಗುತ್ತದೆ.
ಈ ಎಲ್ಲ ಸಮಸ್ಯೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ಕುರಿತು ಮೈಸೂರಿನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದೇನು? ಜೊತೆಗೆ ಚಾಮರಾಜನಗರಕ್ಕೆ ಹೋಗುವ ಬಗ್ಗೆ ಸಿಎಂ ಕೊಟ್ಟಿರುವ ಸ್ಪಷ್ಟನೆ ಏನು? ಮುಂದಿದೆ ಮಾಹಿತಿ!

ಸಿಎಂ ಬೊಮ್ಮಾಯಿ ಕೊಟ್ಟ ಭರವಸೆ!
"ಮಳೆ ಬಂದಾಗ ಜಲಾವೃತವಾಗುವ ಬೆಂಗಳೂರಿನ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದಾರೆ. ಭಾರಿ ಮಳೆ ಬಂದಾಗ ಬೆಂಗಳೂರು ನಗರದಲ್ಲಿ ಅತ್ಯಂತ ತಗ್ಗುಪ್ರದೇಶ, ಕೆರೆಗಳ ಆವರಣಗಳ ಭಾಗ, ರಾಜಾಕಾಲುವೆ ಭಾಗಗಳು ಜಲಾವೃತವಾಗುತ್ತಿವೆ. ಮಳೆ ಬಂದಾಗ ಸಮಸ್ಯೆಗಳನ್ನು ಸರಿಪಡಿಸುವುದು ತಾತ್ಕಾಲಿಕ ಪರಿಹಾರವಾಗುತ್ತದೆ. ಆದ್ದರಿಂದ ಜಲಾವೃತ್ತವಾಗುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರವನ್ನು ನೀಡಲು ಪುನರ್ನಿರ್ಮಾಣ ಮತ್ತು ಪುರ್ನವಸತಿ ಕಾರ್ಯವಾಗಬೇಕು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಒತ್ತುವರಿ ಪ್ರದೇಶಗಳ ಸರ್ವೆ!
ರಾಜಕಾಲುವೆಯಲ್ಲಿ ಹಾಗೂ ಕೆರೆ ಆವರಣಗಳು ಒತ್ತುವರಿಯಾಗಿ ನಿರ್ಮಾಣವಾದ ವಸತಿಪ್ರದೇಶಗಳ ಬಗ್ಗೆ ಸರ್ವೆ ಮಾಡಿ ಪುನರ್ವಸತಿ ಕಲ್ಪಿಸಲಾಗುವುದು. ದೀರ್ಘಕಾಲಿಕ ಹಾಗೂ ಶಾಶ್ವತ ಪರಿಹಾರ ನೀಡಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆದರೆ ಒತ್ತುವರಿಯಾಗಿ ನಿರ್ಮಾಣವಾಗಿರುವ ಮನೆಗಳಿಗೆ ಪರಿಹಾರ ಕೊಟ್ಟು ಸ್ಥಳಾಂತರ ಮಾಡಲಾಗುತ್ತದೆಯಾ? ಅಥವಾ ಒತ್ತುವರಿಯನ್ನು ತೆರವು ಗೊಳಿಸಲಾಗುತ್ತದೆಯಾ ಕಾಯ್ದು ನೋಡಬೇಕಿದೆ. ಪುನರ್ನಿರ್ಮಾಣ ಮತ್ತು ಪುರ್ನವಸತಿ ಎಂದು ಹೇಳಿರುವುದರಿಂದ ಜಲಾವೃತವಾಗುವ ಪ್ರದೇಶಗಳ ಜನರಿಗೆ ಬೇರೆಡೆ ವಸತಿ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳಿವೆ.

ಗುತ್ತಿಗೆದಾರರ ಬಗ್ಗೆ ವರದಿ ನೀಡಲು ಟಾಸ್ಕ್ ಫೋರ್ಸ್
ರಸ್ತೆಗಳು ನಿರ್ಮಾಣದ ಅವಧಿ, ನಿರ್ವಹಣೆ, ದುರಸ್ತಿ, ಗುಣಮಟ್ಟ ಹಾಗೂ ಕಳಪೆ ರಸ್ತೆ ನಿರ್ಮಿಸಿದ ಗುತ್ತಿಗೆದಾರರ ಬಗ್ಗೆ ಸಂಪೂರ್ಣ ವರದಿ ನೀಡಲು ಟಾಸ್ಕ್ ಫೋರ್ಸ್‌ನ್ನು ರಚಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ವೈಜ್ಞಾನಿಕವಾಗಿ ಆಗಬೇಕು. ಮಳೆಗಾಲವಾದ ನಂತರ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಕೊಡುವ ಗುತ್ತಿಗೆದಾರರು ಮುಂದುವರೆಯಲು ಬಿಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ ತಮ್ಮ ಚಾಮರಾಜನಗರ ಭೇಟಿ ಬಗ್ಗೆಯೂ ಮಾತನಾಡಿದ್ದಾರೆ.

ಚಾಮರಾಜನಗರಕ್ಕೆ ಹೋಗುವ ಬಗ್ಗೆ ಸಿಎಂ ಸ್ಪಷ್ಟನೆ!
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆ ರಾಜಕಾರಣಿಗಳಲ್ಲಿದೆ. ಹೀಗಾಗಿ ಮುಖ್ಯಮಂತ್ರಿಯಾದವರು ಅಲ್ಲಿಗೆ ಹೋಗುವುದಿಲ್ಲ. ಈ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, "ಚಾಮರಾಜನಗರ ಜಿಲ್ಲೆಯ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವುದು ನನ್ನ ಕರ್ತವ್ಯ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ" ಎಂದು ಸ್ಪಷ್ಟ ಪಡಿಸಿದ್ದಾರೆ.
ದಸರಾ ಉತ್ಸವವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಉದ್ಘಾಟನೆ ಮಾಡಲಿದ್ದಾರೆ. ಒಬ್ಬ ಸಾಮಾನ್ಯ ನಾಗರಿಕನಾಗಿ ಈ ಬಾರಿಯ ದಸರಾ ಉತ್ಸವವನ್ನು ಮುನ್ನಡೆಸುತ್ತಿರುವುದು ನನಗೆ ಸಂತೋಷ ತಂದಿದೆ. ಕೋವಿಡ್‌ನಿಂದಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾವನ್ನು ಆಚರಿಸಲಾಗುತ್ತಿದೆ. ಕನ್ನಡ ನಾಡು ಸುಭಿಕ್ಷವಾಗಿರಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಬೊಮ್ಮಾಯಿ ತಿಳಿಸಿದರು.












Click it and Unblock the Notifications