ಎಲೆಕ್ಟ್ರಾನಿಕ್ ಸಿಟಿಗೆ ಹೊಸ ಹೆಸರು ಘೋಷಿಸಿದ ಸಿಎಂ; ಏನದು?
ಬೆಂಗಳೂರು, ಆಗಸ್ಟ್ 20: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಪ್ರದೇಶವಾದ ಎಲೆಕ್ಟ್ರಾನಿಕ್ ಸಿಟಿ ಇನ್ನು ಮುಂದೆ ಹೊಸ ಹೆಸರಿನಿಂದ ಕರೆಸಿಕೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಎಲೆಕ್ಟ್ರಾನಿಕ್ ಸಿಟಿಗೆ ಹೊಸ ಹೆಸರನ್ನೂ ಘೋಷಿಸಿದ್ದಾರೆ. ಐಟಿ-ಬಿಟಿ ಕಂಪನಿಗಳಿಗೆ ನೆಲೆಯಾಗಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಶೀಘ್ರವೇ ʼದೇವರಾಜು ಅರಸು ಎಲೆಕ್ಟ್ರಾನಿಕ್ ಸಿಟಿʼ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಇಂದು ವಿಧಾನಸೌಧದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಈ ಹೊಸ ಘೋಷಣೆ ಮಾಡಿದರು. ಬೆಂಗಳೂರಿಗೆ ಸಿಲಿಕಾನ್ ಸಿಟಿ ಎಂಬ ಹೆಸರು ಬರಲು ದೇವರಾಜ ಅರಸು ಅವರ ಪಾತ್ರವೂ ಇದೆ. ಅಲ್ಲದೆ, ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಸಮಾಜದಲ್ಲಿ ಮೇಲು ಕೀಳು ಎನ್ನುವುದು ಇರಬಾರದು. ಜಾತಿ ವ್ಯವಸ್ಥೆ ಇರಬಾರದು, ಎಲ್ಲರೂ ಮನುಷ್ಯರಾಗಿ ಸಮಾನವಾಗಿ ಜೀವಿಸಬೇಕು ಎನ್ನುವುದು ಬಸವಾದಿ ಶರಣರ ಕನಸಾಗಿತ್ತು. ಇದೇ ತತ್ವದ ಆಧಾರದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಸಾಮಾಜಿಕ ನ್ಯಾಯದ ಹರಿಕಾರರಾದ ದೇವರಾಜ ಅರಸು ಅವರು ಕೂಡ ಇದೇ ತತ್ವಗಳನ್ನು ಪಾಲಿಸಿಕೊಂಡು ಉತ್ತಮ ಆಡಳಿತ ನಡೆಸಿದ್ದಲ್ಲದೆ, ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದರು ಎಂದರು.
ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ ಎಂದುಕೊಂಡಿದ್ದ ದುರ್ಬಲ ವರ್ಗಗಳ ಜನರು ಚುನಾವಣೆಗಳಲ್ಲಿ ಗೆದ್ದು ಶಾಸಕರಾಗಿ ವಿಧಾನಸೌಧ ಪ್ರವೇಶಿಸುವಂತೆ ಮಾಡಿದವರು ದೇವರಾಜ ಅರಸುರವರು. ಸಾಮಾಜಿಕ ಸುಧಾರಣೆಯ ಪ್ರವರ್ತಕರಾದ ಅರಸುರವರನ್ನು ಈ ದಿನ ನಾವು ಹೆಮ್ಮೆಯಿಂದ ನೆನೆಯೋಣ ಎಂದರು. ನಮ್ಮ ನಾಡಿನಲ್ಲಿ ಬಸವಾದಿ ಶರಣರಿಂದ ಆರಂಭಗೊಂಡ ಸಮಸಮಾಜದ ಆಶಯಕ್ಕೆ ಕಾಯ್ದೆ, ಕಾನೂನುಗಳ ರೂಪಕೊಟ್ಟು ಶೋಷಿತರ ಪಾಲಿಗೆ ಬೆಳಕಾದ ದೇವರಾಜ ಅರಸು ಅವರು ಜನಪ್ರತಿನಿಧಿಗಳೆಲ್ಲರಿಗೂ ಮಾದರಿಯಾದವರು. ದೇವರಾಜರು ಅರಸು ಮನೆತನದಲ್ಲಿ ಹುಟ್ಟಿದವರಾಗಿದ್ದರೂ ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು ಎಂದು ನೆನೆದರು.

ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಹಾಗೂ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ನಮ್ಮ ಸಂವಿಧಾನ ಒತ್ತು ನೀಡಿದೆ. ಇದೇ ಹಾದಿಯಲ್ಲಿ ಸಂವಿಧಾನಕ್ಕೆ ಬದ್ಧರಾಗಿ ನಾವು ಆಡಳಿತ ನಡೆಸುತ್ತಿದ್ದೇವೆ. ನೆಹರೂ ಕಾಲದಿಂದ ಇಂದಿನವರೆಗೂ ಅಸಮಾನತೆಯ ಸಮಾಜವನ್ನು ತೊಡೆದು ಸಮಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿ.ದೇವರಾಜ ಅರಸು ಅವರ ಕುಟುಂಬದ ಸದಸ್ಯರು ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications