ಚಾಮರಾಜನಗರಕ್ಕೆ ಸಾವಿರ ಕೋಟಿ ಕೊಟ್ಟ ಸಿಎಂ

ರಾಜ್ಯದ ಮುಖ್ಯಮಂತ್ರಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಪದವಿ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಗೆ ಸೆಡ್ಡು ಹೊಡೆದಿರುವ ಸಿಎಂ ಸಿದ್ದರಾಮಯ್ಯ, ಸೋಮವಾರ ಬೆಳಗ್ಗೆ 11 ಗಂಟೆ ವೇಳೆಗೆ ಜಿಲ್ಲೆಗೆ ಆಗಮಿಸಿದರು. ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವರಾದ ಮಹದೇವ್ ಪ್ರಸಾದ್, ಶ್ರೀನಿವಾಸ್ ಪ್ರಸಾದ್, ಎಚ್.ಸಿ.ಮಹದೇವಪ್ಪ ಹಾಗೂ ಕಿಮ್ಮನೆ ರತ್ನಾಕರ ಸಿಎಂಗೆ ಸಾಥ್ ನೀಡಿದರು.
ನಂತರ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಇಲ್ಲಿಗೆ ಬಂದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯಗಳಿಗೆಲ್ಲಾ ನಾನು ಬೆಲೆ ಕೊಡುವುದಿಲ್ಲ. ಇದು ಜನರೇ ಸೃಷ್ಟಿಸಿದ ಮೌಢ್ಯತೆ, ಇದಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿದರು.
ಹಿಂದೆ ಸಾಕಷ್ಟು ಬಾರಿ ನಾನು ಚಾಮರಾಜನಗರಕ್ಕೆ ಬಂದಿದ್ದೇನೆ. ಚಾಮರಾಜನಗರ ಜಿಲ್ಲೆಯಾಗಿ ಬದಲಾದಾಗಲೂ ಬಂದಿದ್ದೇನೆ ಮತ್ತು ಮುಂದೆಯೂ ಬರುತ್ತೇನೆ ಎಂದು ಸಿಎಂ ಭರವಸೆ ನೀಡಿದರು. ಚಾಮರಾಜನಗರಕ್ಕೆ ಅಭಿವೃದ್ಧಿ ವಿಚಾರದಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಶಾಪ ವಿಮೋಚನೆ ಯಾಗಿದೆ : ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ್ ಪ್ರಸಾದ್, ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಆಗಮನದಿಂದ ಜಿಲ್ಲೆಯ ಶಾಪ ವಿಮೋಚನೆ ಆಗಿದೆ. ಮುಂದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದರು.
ಇದೇವೇಳೆ ಸರ್ಕಾರ ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಸಂಜೆ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಿರುವ ಸಿಎಂ ಸಂಜೆ 8 ಗಂಟೆಯ ತನಕ ನಗರದಲ್ಲಿರಲಿದ್ದಾರೆ.












Click it and Unblock the Notifications