ಅಮೂಲ್ಯ ಬಾಲ್ಯ ಕಸಿದ ಪೋಷಕರನ್ನು ಮಕ್ಕಳು ಶಪಿಸದೆ ಬಿಡಲ್ಲ: ಎಲ್.ಕೆ ಮಂಜುನಾಥ್ ಬರಹ
ಮಕ್ಕಳ ಬಾಲ್ಯವನ್ನು ಕಸಿಯುತ್ತಿರುವ ಈ ಕ್ರೂರ ಜಗತ್ತಿನ ಮುಂದೆ ಅನಗತ್ಯ ಸ್ಪರ್ಧಾತ್ಮಕ ಜಗತ್ತಿಗೆ ಸಿಲುಕಿರುವ ನಮ್ಮಂತ ಹುಡುಗರ ಯೌವನ ದಿನವೂ ಲ್ಯಾಪ್ಟಾಪಿನ ಮುಂದೆ ಅವಸಾನ ಹೊಂದುತ್ತಿರುವುದು ಲೆಕ್ಕವೇ ಅಲ್ಲ ಎಂದೆನಿಸುತ್ತದೆ. ತಮ್ಮ ಅಮೂಲ್ಯ ಬಾಲ್ಯವನ್ನು ಕಸಿದ ಪೋಷಕರನ್ನು ಶಪಿಸದೆ ಬಿಡುವುದಿಲ್ಲ - ಹವ್ಯಾಸಿ ಬರಹಗಾರ ಎಲ್.ಕೆ ಮಂಜುನಾಥ್ ಅವರ ಬರಹ ಇಲ್ಲಿದೆ.
ಭಂಗಿಯಲ್ಲಿ ವೇಗದ ಬೌಲರ್. ಓಡುತ್ತ ಬಂದವನು ಕ್ಷಣಕಾಲ ನಿಂತು, ಕೈಯನ್ನ ಒಂದು ಸುತ್ತು ತಿರುಗಿಸಿ, ನಂತರ ತನಗೆ ತೋಚಿದಂತೆ ಎಸೆಯುತ್ತಿದ್ದ. ಒಂದು ಚೆಂಡು ಕೂಡ ನೆಟ್ಟಗೆ ಬ್ಯಾಟಿಂಗ್ ಮಾಡುತ್ತಿದ್ದ ಹುಡುಗಿಯ ಸಮೀಪವೂ ಸುಳಿಯುತ್ತಿರಲಿಲ್ಲ. ಜೊತೆಗೆ 'ಬಾಲು ಸ್ವಿಂಗ್ ಆಗ್ತಿದ್ದಾವೆ ಕಣೆ!' ಎಂಬ ಸಮರ್ಥನೆ. ಇದ್ಯಾವುದರ ಎಬಿಸಿಡಿ ಗೊತ್ತಿಲ್ಲದ ಪುಟ್ಟ ಹುಡುಗಿ ಎತ್ತಲಾಗದ ಬ್ಯಾಟನ್ನು ಹೇಗೋ ಕಷ್ಟದಲ್ಲಿ ಬೀಸಿ ಒಂದು ರನ್ ಆದರೂ ಗಳಿಸಬೇಕು ಎಂಬ ಛಲದಲ್ಲಿದ್ದಳು. ಕೀಪಿಂಗ್ ನಿಂತಿದ್ದ ಮತ್ತೊರ್ವ ಪುಟ್ಟ ಹುಡುಗನಿಗೆ ಗಾಡಿಗಳ ಸಂದಿಯಿಂದ ಚೆಂಡು ಹೆಕ್ಕುವುದೇ ಕೆಲಸವಾಗಿತ್ತು. ಆಗಾಗ ಬರುವ ದ್ವಿಚಕ್ರ ವಾಹನಗಳಿಂದ ಮಕ್ಕಳಿಗೆ ಆಟವಾಡುವುದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಬದಿಗೆ ಎತ್ತಿಡುವುದು ಹೆಚ್ಚು ಕೆಲಸವಾಗಿತ್ತು. ಇನ್ನು ಆಗಾಗ ಓಡಾಡುವ ಪಾದಚಾರಿಗಳು ಪಿಚ್ ದಾಟುವುದನ್ನೇ ಕಾದು ಆಟ ಮುಂದುವರಿಸಬೇಕಿತ್ತು. ಚಿತ್ತದಿಂದ ಮಕ್ಕಳು ಎಂಬುದನ್ನು ಹೊರಗಿಟ್ಟು ಆಲಿಸಿದರೆ ಆಟಕ್ಕಿಂತ ಕಿರುಚಾಟವೇ ಹೆಚ್ಚಿತ್ತು.

ಅಷ್ಟರಲ್ಲಾಗಲೇ ಕಣ್ಣುಜ್ಜುತ್ತ, ತಲೆಕೆರೆದುಕೊಳ್ಳುತ್ತ ಚಡ್ಡಿ-ಬನಿಯಾನ್ನಿನಲ್ಲೇ ಬಂದ ಪಕ್ಕದ ಮನೆಯ ಮಾಲೀಕರು, 'ಇದೇನು ಗ್ರೌಂಡೇನ್ರೋ, ಆಟಾಡ ಟೈಂ ಏನ್ರೋ, ಬೇರೆ ಕಡೆ ಹೋಗಿ ಆಡೋಗ್ರೋ..' ಎಂದು ಮಕ್ಕಳನ್ನು ಗದರಿಸತೊಡಗಿದರು. ಕಿವಿಗೆ ಹಾಕಿಕೊಳ್ಳದೆ ಆಟ ಮುಂದುವರಿಸುವ ಇರಾದೆಯಲ್ಲಿದ್ದವರಿಗೆ 'ಯಾರ ಮಗ್ನೋ ನೀನು?' ಎಂಬ ವಿಚಾರಣೆ ಅಲ್ಲಿಂದ ಕಾಲ್ಕೀಳುವಂತೆ ಮಾಡಿತ್ತು. 'ಈಗಿನ್ ಮಕ್ಳಿಗೆ ಹೊತ್ತುಗೊತ್ತು ಗೊತ್ತಿಲ್ಲ, ಎಲ್ಲಿ ಆಡ್ಬೇಕು ಅನ್ನದು ಗೊತ್ತಿಲ್ಲ..' ಎಂದು ಗೊಣಗುತ್ತ ಒಳಗೆ ಹೋದರು. ಕಿರುಚಾಟಗಳು ನಿಂತಿದ್ದರಿಂದ ನನಗೂ ಕೊಂಚ ಸಮಾಧಾನವೆನಿಸಿತು. ಆದರೆ ವಾರಕ್ಕೊಂದು ದಿನವಾದರೂ ಹಗಲು - ರಾತ್ರಿಯೆನ್ನದೆ ತಮ್ಮ ಮನೆಯಲ್ಲಾಗುವ ಕೌಟುಂಬಿಕ ಕಲಹದ ರಂಪರಾಮಾಯಣದಿಂದ ಸುತ್ತಮುತ್ತಲಿನವರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂಬುದರ ಕಿಂಚಿತ್ತು ಯೋಚನೆಯಿಲ್ಲದವನಿಗೆ ಮಕ್ಕಳ ಆಟ ಹರಟೆಯೆನಿಸಿದ್ದು ಮಾತ್ರ ವಿಚಿತ್ರವೆನಿಸಿತು.
ನಗರದ ಮಕ್ಕಳ ಕೈಯಲ್ಲಿ ಚೆನ್ನಾಗಿರುವ ಬ್ಯಾಟ್, ಬಾಲ್, ವಿಕೆಟ್, ಹ್ಯಾಂಡ್ ಗ್ಲೌಸ್ ಎಲ್ಲವೂ ಇದೆ. ಆದರೆ ಆಟವಾಡುವುದಕ್ಕೆ ಸರಿಯಾದ ಮೈದಾನವೇ ಇಲ್ಲ. ಹೆಚ್ಚಿನ ಸುಸಜ್ಜಿತ ಮೈದಾನಗಳೆಲ್ಲವೂ ಫೀಸು ಕಟ್ಟುವವರ ಮಕ್ಕಳಿಗೆ ಮೀಸಲಾಗಿವೆ. ಇರುವ ಕೆಲವೇ ಕೆಲವು ಸರ್ಕಾರಿ ಮೈದಾನಗಳ ಪೈಕಿ ಒಂದಷ್ಟು ಅಂಕಲ್ಲುಗಳ ಸೊತ್ತಾಗಿವೆ, ಇನ್ನೊಂದಷ್ಟು ತರಬೇತಿ ಕೇಂದ್ರಗಳಾಗಿವೆ. ಇನ್ನೂ ಕೆಲವು ಹೆಂಗಸರ ಸ್ಕೂಟಿ ಕಲಿಯುವ ತಾಣಗಳಾಗಿವೆ. ಇಂತಹ ಪರಿಸ್ಥಿತಿಯ ನಡುವೆ ಮಧ್ಯಮ ವರ್ಗದ ಹಾಗೂ ಬಡವರ ಮಕ್ಕಳು ಆಟವಾಡುವ ಜಾಗಕ್ಕಾಗಿ ಬೀದಿ ಬೀದಿ ಅಲೆಯುತ್ತಿವೆ.
ಮಕ್ಕಳಿಗೆ ಪಾಠದಷ್ಟೇ ಆಟವೂ ಮುಖ್ಯ ಎಂಬುದನ್ನು ಮನಗಾಣದ ಪೋಷಕರು, ತಮ್ಮ ವರ್ಚಸ್ಸಿಗೆ, ದುಡಿದು ಶ್ರೀಮಂತರಾಗಬೇಕೆಂಬ ಹಂಬಲದಲ್ಲೇ ಮುಳುಗಿ ಹೋಗಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅಲ್ಲಿ ಆಟದ ಮೈದಾನ ಇದೆಯೇ, ಬಾಡಿಗೆ ಮನೆ ಮಾಡುವಾಗ ಸುತ್ತಮುತ್ತ ಮಕ್ಕಳಿಗೆ ಆಟವಾಡುವಷ್ಟು ಜಾಗವಿದೆಯೇ ಎಂಬ ಸೂಕ್ಷ್ಮ ಯೋಚನೆಗಳನ್ನೇ ಮಾಡುತ್ತಿಲ್ಲ. ಕೈಗೆ ಮೊಬೈಲ್ ಕೊಟ್ಟರಾಯ್ತೆಂದು ಅವಗಣಿಸುತ್ತಿದ್ದಾರೆ.
ಮಕ್ಕಳ ಬಾಲ್ಯವನ್ನು ಕಸಿಯುತ್ತಿರುವ ಈ ಕ್ರೂರ ಜಗತ್ತಿನ ಮುಂದೆ ಅನಗತ್ಯ ಸ್ಪರ್ಧಾತ್ಮಕ ಜಗತ್ತಿಗೆ ಸಿಲುಕಿರುವ ನಮ್ಮಂತ ಹುಡುಗರ ಯೌವನ ದಿನವೂ ಲ್ಯಾಪ್ಟಾಪಿನ ಮುಂದೆ ಅವಸಾನ ಹೊಂದುತ್ತಿರುವುದು ಲೆಕ್ಕವೇ ಅಲ್ಲ ಎಂದೆನಿಸುತ್ತದೆ. ಕಣ್ಣು ಹಾಯಿಸಿದಷ್ಟು ದೊಡ್ಡ ಮೈದಾನದುದ್ದಕ್ಕೂ ಜೂಟಾಟ, ಕಣ್ಣಮುಚ್ಚಾಲೆಯಿಂದ ಹಿಡಿದು ಕೋಕೋ, ಕಬ್ಬಡಿ, ಕ್ರಿಕೆಟ್, ಫುಟ್ಬಾಲ್ ಆಟಗಳನ್ನು ನಮಗೆ ತೋಚಿದಂತೆ ಆಡುತ್ತ ಮೈಮರೆಯುತ್ತಿದ್ದ ಬಾಲ್ಯ ಸದಾ ಚಿರಸ್ಥಾಯಿ. ರಾಮ ಸೋಮ ಭೀಮ, ಲಗೋರಿಯಂತಹ ಆಟಗಳಿಗಿಳಿದರೆ ವಾಪಾಸಾಗಲು ಅಮ್ಮಂದಿರು ಅಥವಾ ಮೇಷ್ಟ್ರುಗಳು ಕೋಲು ಹಿಡಿದು ನುಗ್ಗಬೇಕಿತ್ತು.
ಆಟದ ಬಯಲೆಂದರೆ ಮೊಬೈಲಿನ ಸ್ಕ್ರೀನ್ ಎಂಬಾಂತಿಗಿರುವ ಈ ಕಾಲಘಟ್ಟದಲ್ಲಿ ಹಕ್ಕಿಗೆ ಬೇಕು ಬಾನು, ಚಿಗರೆಗೆ ಬೇಕು ಕಾನು ಎಂಬ ಸಾಲುಗಳೇ ಅನರ್ಥವೆನಿಸುತ್ತವೆಯೇನೋ. ಮೈದಾನದಲ್ಲಿ ಮನಸೋ ಇಚ್ಛೆ ಕುಣಿದಾಡಿ ದಣಿಯದ, ಬಿದ್ದು ಮಂಡಿ, ಮೊಣಕೈ ತರಚದ ಬಾಲ್ಯ ನಿಜಕ್ಕೂ ಬಾಲ್ಯವೇ ಅಲ್ಲ. ಈಗೀಗ ಮಕ್ಕಳೆಂದರೆ ಬಾಲ್ಯದಲ್ಲೇ ಸೆರೆಮನೆ ಸೇರಿದ ಕೈದಿಗಳಂತಾಗಿರುವುದು ವಿಪರ್ಯಾಸ. ಒಂದೋ ಹಾಡುವುದು, ನರ್ತಿಸುವುದು, ಸಿನಿಮಾ ಡೈಲಾಗ್ ಹೇಳುವುದು, ಕಣ್ಣಿಗೆ ದಣಿವಾಗುವ ವರೆಗೆ ಆನ್ ಲೈನ್ ಗೇಮ್ ಆಡುವುದಷ್ಟೇ ಬಾಲ್ಯ ಎಂಬಂತಾಗಿದೆ. ಒಂದರ್ಥದಲ್ಲಿ ಮಕ್ಕಳ ಬಾಲ್ಯ ಬರೀ ಇನಾಸ್ಟಾಗ್ರಾಮ್ ರೀಲ್ಸ್‌ನ ಸರಕಾಗಿದೆ. ಇದೇ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ, ವಿವೇಚನಾ ಶಕ್ತಿ ಬೆಳೆಸಿಕೊಂಡಾಗ ತಮ್ಮ ಅಮೂಲ್ಯ ಬಾಲ್ಯವನ್ನು ಕಸಿದ ಪೋಷಕರನ್ನು ಶಪಿಸದೆ ಬಿಡುವುದಿಲ್ಲ.












Click it and Unblock the Notifications