ತುಂತುರು ಮಳೆ ರೈಲ್ವೆ ಹಳಿಯ ಮೇಲಿದ್ದವನ ಜೀವ ಉಳಿಸಿತು!
ಚಿಕ್ಕಮಗಳೂರು, ಮಾ. 22 : ಬದುಕುವ ಛಲವಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ ಎಂಬ ಮಾತಿದೆ. ಆದರೆ, ವರುಣ ದೇವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವರ ಪಾಲಿಗೆ ಸಂಜೀವಿನಿಯಾಗಿ ಬಂದು ಅವರ ಪ್ರಾಣ ಉಳಿಸಿದ್ದಾನೆ. ಮಳೆ ಬಾರದೆ ಇದ್ದಿದ್ದರೆ ರೈಲು ಹಳಿಯ ಮೇಲೆ ಬಿದ್ದಿದ್ದ ಆತ ಶಿವನ ಪಾದ ಸೇರಬೇಕಾಗಿತ್ತು.
ಈ ಘಟನೆ ನಡೆದಿರುವುದು ಚಿಕ್ಕಮಗಳೂರಿನಲ್ಲಿ. ಹೆಂಡತಿ ಮನೆಯವರಿಂದ ಹಿಗ್ಗಾಮುಗ್ಗಾ ಒದೆ ತಿಂದು ಸಾಯುವ ಹಂತದಲ್ಲಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಫಿರೋಜ್ ಎಂಬುವವರನ್ನು ಮಳೆ ರಕ್ಷಿಸಿದೆ. ಮಳೆಯಿಂದ ಎಚ್ಚರಗೊಂಡ ಫಿರೋಜ್ ರೈಲು ಬರುವುದನ್ನು ಗಮನಿಸಿ ಹಳಿಯಿಂದ ತೆವಳಿಕೊಂಡು ಪಕ್ಕಕ್ಕೆ ಸರಿದು ಸಾವು ತಪ್ಪಿಸಿಕೊಂಡಿದ್ದಾನೆ.[ರಾಮನಗರ : ಸಾವನದುರ್ಗ ಬೆಟ್ಟದಲ್ಲಿ ವಿದ್ಯಾರ್ಥಿಗಳ ರಕ್ಷಣೆ]
ಸಿನಿಮಾ ಶೈಲಿಯ ಈ ಕಥೆ ನಡೆದಿರುವುದು ಸುಮಾರು ಎರಡು ವಾರಗಳ ಹಿಂದೆ. ಸಾವಿನಿಂದ ತಪ್ಪಿಸಿಕೊಂಡ ಫಿರೋಜ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಿರೋಜ್ ಬದುಕಿದ್ದು ತಿಳಿದ ಹೆಂಡತಿ ಮನೆಯವರು ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.

ಘಟನೆಯ ವಿವರ ಇಲ್ಲಿದೆ : ಫೀರೋಜ್ ಎಂಬುವವರು ಚಿಕ್ಕಮಗಳೂರಿನ ಗೌರಿ ಕಾಲುವೆ ನಿವಾಸಿ. 4 ವರ್ಷಗಳ ಹಿಂದೆ ತಮ್ಮ ಮನೆಯ ಸಮೀಪದ ಸಬಾ ಅಂಜುಮ್ ಅವರೊಂದಿಗೆ ಫಿರೋಜ್ ಮದುವೆಯಾಗಿತ್ತು. ಮದುವೆಯಾದ ಒಂದು ವಾರದಲ್ಲೇ ಹೆಂಡತಿ ಮನೆಯವರ ಆಸ್ತಿ ದಾಹದ ಅರಿವಾಯಿತು. [ರೈಲಿನ ಫೋಟೋ ತೆಗೆಯಲು ಹೋಗಿ ವಿದ್ಯಾರ್ಥಿನಿ ಸಾವು]
ಫಿರೋಜ್ ಹೆಸರಿನಲ್ಲಿರುವ ಎಲ್ಲಾ ಆಸ್ತಿಯನ್ನು ಹೆಂಡತಿ ಹೆಸರಿಗೆ ಬರೆದುಕೊಡುವಂತೆ ಅವರ ಮನೆಯವರು ಹಿಂಸೆ ಕೊಡಲು ಆರಂಭಿಸಿದರು. ಮಾತು ಕೇಳದಿದ್ದಾಗ 14 ದಿನಗಳ ಹಿಂದೆ ಫಿರೋಜ್‌ನನ್ನು ಅಪಹರಣ ಮಾಡಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬರುತ್ತಿದ್ದ ಫಿರೋಜ್ ಅವರನ್ನು ಸಬಾ ಅಂಜುಮ್ ಅಣ್ಣ ದಾವುದ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಅಪಹರಣ ಮಾಡಿದ್ದರು.
ನಂತರ ಫೀರೋಜ್ ಕೈಕಾಲು ಕಟ್ಟಿ ಚೀಲವೊಂದರಲ್ಲಿ ತುಂಬಿ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಕೈ ಕಾಲು ಬೆರಳುಗಳನ್ನು ಜಜ್ಜಿ ಖಾಲಿ ಪತ್ರಗಳಿಗೆ ಸಹಿ ಹಾಕಿಸಿಕೊಂಡು, ಬೆಳಗಿನ ಜಾವ 3 ಗಂಟೆ ನಂತರ ಮತ್ತೆ ಚೀಲದಲ್ಲಿ ತುಂಬಿ ಪುನಃ ಹಲ್ಲೆ ಮಾಡಿದ್ದಾರೆ.
ಮುಂಜಾನೆಯ ಹೊತ್ತಿಗೆ ಸಾಯುವ ಸ್ಥಿತಿಯಲ್ಲಿದ್ದ ಫಿರೋಜ್ ಅವರನ್ನು ರೈಲ್ವೆ ಹಳಿಯ ಮೇಲೆ ತಂದು ಎಸೆದು ಹೋಗಿದ್ದಾರೆ. ತೀವ್ರವಾದ ಹಲ್ಲೆಯಿಂದಾಗಿ ಫಿರೋಜ್ ಪ್ರಜ್ಞೆ ಕಳೆದುಕೊಂಡಿದ್ದರು. ಅದೃಷ್ಟವೆಂಬಂತೆ ಅಂದು ತುಂತುರು ಮಳೆ ಬಂದಿದೆ. ಮಳೆಯಿಂದ ಎಚ್ಚರಗೊಂಡ ಅವರಿಗೆ ರೈಲು ಹಳಿ ಮೇಲಿರುವುದು ತಿಳಿದಿದೆ.
ಇದೇ ಸಮುದಲ್ಲಿ ರೈಲು ಬರುವುದನ್ನು ನೋಡಿದ ಫೀರೋಜ್ ಜೀವಭಯದಿಂದ ತೆವಳಿಕೊಂಡು ರೈಲ್ವೆ ಹಳಿಯಿಂದ ಕೆಳಗೆ ಬಿದ್ದಿದ್ದಾರೆ. ಬೆಳಗ್ಗೆ ಅದೇ ದಾರಿಯಲ್ಲಿ ಹೋಗುತ್ತಿದ್ದ ಜನರು ಫಿರೋಜ್‌ನನ್ನು ನೋಡಿ ಆಸ್ಪತ್ರೆಗೆ ದಾಖಲು ಮಾಡಿ, ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಫಿರೋಜ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಿರೋಜ್ ಬದುಕಿರುವ ಬಗ್ಗೆ ಮಾಹಿತಿ ಪಡೆದ ಹೆಂಡತಿ ಮನೆಯವರು ವರದಕ್ಷಿಣಿ ಕಿರುಕಳದ ದೂರು ನೀಡಿದ್ದಾರೆ. ಫಿರೋಜ್ ಕುಟುಂಬದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕುಟುಂಬದ ಎಲ್ಲಾ ಸದಸ್ಯರ ವಿರುದ್ಧವೂ ದೂರು ನೀಡಿದ್ದಾರೆ.












Click it and Unblock the Notifications