Pradeep Eshwar: ಕಾನೂನು ಮೀರಿದರೆ ಬೆಂಡೆತ್ತಿ ಬ್ರೇಕ್ ಹಾಕುತ್ತೇನೆ; ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ
ಚಿಕ್ಕಬಳ್ಳಾಪುರ,ಜೂನ್ 01: ಕಾನೂನು ಪ್ರಕಾರವೇ ನಾನೆಲ್ಲ ಕೆಲಸ ಮಾಡುತ್ತೇನೆ. ಕಾನೂನು ಮೀರಿದರೆ ಬೆಂಡೆತ್ತಿ ಬ್ರೇಕ್ ಹಾಕುತ್ತೇನೆ ಎಂದು ಚಿಕ್ಕಬಳ್ಳಾಪುರ ಶಾಸಕ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಶಾಸಕರ ರೀತಿ ನಾನು ಕೆಲವೇ ಜನರಿಗಷ್ಟೇ ಈ ಶಾಸಕ ಕಚೇರಿಯನ್ನು ಮೀಸಲಿಡಲ್ಲ. ನಾನು ಯಾರಿಗೂ ಮುಲಾಜು ನೋಡಲ್ಲ. ಯಾರಾದರೂ ಬಾಲ ಬಿಚ್ಚಿದರೂ ನಾನು ಬೆಂಡೆತ್ತಿ ಬಿಡ್ತೀನಿ ಎಂದು ಎಚ್ಚರಿಕೆ ನೀಡಿದರು.

ಇನ್ನೂ 30 ವರ್ಷ ನಾನೇ ಶಾಸಕನಾಗಿರಬೇಕು ಎಂಬ ಆಸೆ ನನಗಿಲ್ಲ. ನನಗೆ ಸಿಕ್ಕಿರುವ 5 ವರ್ಷದಲ್ಲೇ 30 ವರ್ಷಕ್ಕೆ ಆಗುವಷ್ಟು ಕೆಲಸ ಮಾಡುತ್ತೇನೆ. ಮುಂದೆ ಜನರ ಆಯ್ಕೆಗೆ ಬಿಡುತ್ತೇನೆ ಎಂದು ಹೇಳಿದ ಅವರು, ಕಾನೂನು ಪ್ರಕಾರ ಇದ್ದರೆ ಮಾತ್ರ ಕೆಲಸ ಆಗುತ್ತೆ. ನಾನು ಸ್ಟ್ರಿಕ್ಟ್ ಮತ್ತು ಸ್ಟ್ರೈಟ್ ಇರುವಂತಹ ವ್ಯಕ್ತಿ ಎಂದು ಗುಡುಗಿದರು.
ಬೇರೆ ಶಾಸಕರ ರೀತಿ ನಾನು ಮಾಡಬೇಕೆಂಬ ಉದ್ದೇಶವಿಲ್ಲ. ನಾನು 30 ವರ್ಷ ಕಾಲ ಶಾಸಕನಾಗಲು ಎಲ್ಲರನ್ನು ಓಲೈಸಲು ನನ್ನಿಂದ ಸಾಧ್ಯವಿಲ್ಲ. ನಾನು ಪ್ರಾಮಾಣಿಕವಾಗಿ ಇರುತ್ತೇನೆ. ಜನರಿಗೆ ಇಷ್ಟವಾದರೆ ಮತ್ತೆ ಆರಿಸಿಕೊಳ್ಳುತ್ತಾರೆ. ಹೀಗಾಗಿ ನಾನು ಯಾವುದೇ ಮರ್ಜಿಗೂ ಮಣಿಯಲ್ಲ. ನನ್ನ ಬ್ಯಾನರನ್ನೇ ತಾನು ತೆಗೆಸಿದ್ದೇನೆ. ಕಾಲೇಜುಗಳ ಬಳಿ ಪೊಲೀಸರನ್ನು ನಿಯೋಜಿಸಿದ್ದೇನೆ. ಯಾರಾದರೂ ಬೈಕ್ ತೆಗೆದುಕೊಂಡು ಕಾಲೇಜು ಆವರಣಕ್ಕೆ ಬಂದರೆ ಬೈಕ್ ಸೀಜ್ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಶಾಸಕರ ಕಚೇರಿ ಜನಸಾಮಾನ್ಯರಿಗೆ ಇರಬೇಕು. ಹಿಂದಿನ ಶಾಸಕರ ಅವಧಿಯಲ್ಲಿ ಕೇವಲ 20 ಮಂದಿ ಇರುತ್ತಿದ್ದರು. ಈಗ ಅವರಿಂದಲೇ ಅವರಿಗೆ ಸೋಲಾಗಿದೆ. ನನ್ನ ಕಚೇರಿಯಲ್ಲಿ ಪ್ರತಿದಿನ ಗುಂಪೊಂದು ಬಂದು ಕೂರಲು ಅವಕಾಶ ಕೊಡುವುದಿಲ್ಲ. ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವುದಷ್ಟೇ ಶಾಸಕರ ಕಚೇರಿ ಕೆಲಸ ಎಂದು ಹೇಳಿದ ಅವರು, ನಮಸ್ತೆ ಚಿಕ್ಕಬಳ್ಳಾಪುರ ಹೆಸರಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು.

ಸರಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಓದುವ ಮಕ್ಕಳಿಗೂ ಭದ್ರತೆ ಇರಬೇಕು. ಜೂನಿಯರ್ ಕಾಲೇಜು ಆವರಣದಲ್ಲಿ ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮಾಡಲು ಅವಕಾಶ ನೀಡುವುದಿಲ್ಲ. ಖಾಸಗಿ ಶಾಲೆಗಳಿಗೆ ಸಿಗುತ್ತಿರುವ ಭದ್ರತೆ ಸರಕಾರಿ ಶಾಲೆಗಳಿಗೆ ಸಿಗಬಾರದೇ ಎಂದು ಪ್ರಶ್ನಿಸಿದರು.
ರಾಜಕಾಲುವೆ ಒತ್ತುವರಿ ತೆರವಿಗೆ ಮುಖ್ಯಮಂತ್ರಿಗಳ ಬಳಿ ಸಮಾಲೋಚನೆ ನಡೆಸುತ್ತೇನೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತೇನೆ. ಕಾನೂನು ಪ್ರಕಾರವಿದ್ದರಷ್ಟೇ ಕೆಲಸಗಳು ಆಗುತ್ತವೆ. ಒಳ್ಳೆಯರಾಗಿದ್ದರಷ್ಟೇ ಕೆಲಸಗಳು ಆಗುತ್ತವೆ. ಇಲ್ಲವಾದಲ್ಲಿ ಶಾಸಕರ ಕಚೇರಿಯಲ್ಲಿ ಯಾರಿಗೂ ಜಾಗವಿಲ್ಲ.
ಈ ಹಿಂದಿನ ಶಾಸಕರ ಕುತಂತ್ರದಿಂದ ಪಿಎಲ್‌ಡಿ ಬ್ಯಾಂಕ್ ಮುಂದೆ ಇದ್ದ ಕೆ.ಬಿ.ಪಿಳ್ಳಪ್ಪನವರ ಪ್ರತಿಮೆಯನ್ನು ತೆಗೆಸಿದ್ದಾರೆ. ಪ್ರತಿಮೆ ಸ್ಥಾಪನೆಗೆ ಸೂಚನೆ ನೀಡಿದ್ದರೂ ಮಾಡಿಲ್ಲ. ಆದರೆ ನಾನು ಪ್ರತಿಮೆಯನ್ನು ಮರು ಸ್ಥಾಪಿಸುತ್ತೇನೆ. ರಾಜಕೀಯ ಬೇರೆ. ಹಿರಿಯರಿಗೆ ಗೌರವ ಕೊಡುವುದು ಬೇರೆ ಎಂದರು.











Click it and Unblock the Notifications