ಓಡಿ ಹೋದ ಮುಖ್ಯ ಕಾರ್ಯದರ್ಶಿ ಜಾಧವ್!

Posted By:
Subscribe to Oneindia Kannada

ಬೆಂಗಳೂರು, ಜನವರಿ 08 : ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಅವರು ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಸುದ್ದಿ ಮಾಡಿದ್ದಾರೆ. ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

ಹಿರಿಯ ಐಎಎಸ್ ಅಧಿಕಾರಿ ಅರವಿಂದ ಜಾಧವ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ 2015ರ ಡಿಸೆಂಬರ್ 31ರಂದು ಅಧಿಕಾರವಹಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮಾಧ್ಯಮಗಳನ್ನು ಕಂಡು ಓಡಿ ಹೋದ ಜಾಧವ್ ಬಗ್ಗೆ ಚರ್ಚೆ ನಡೆಯುತ್ತಿದೆ.

Arvind Jadhav

ಸಿಎಸ್ ಓಡಿ ಹೋಗಿದ್ದೇಕೆ? : ಶುಕ್ರವಾರ ವಿಧಾನಸೌಧದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಕೆಯ ವಸ್ತುಸ್ಥಿತಿ ಅಧ್ಯಯನ ನಡೆಸುತ್ತಿರುವ ಲೋಕಸಭೆಯ ಉಪಸಭಾಧ್ಯಕ್ಷ ಎಂ.ತಂಬಿದುರೈ ಅಧ್ಯಕ್ಷತೆಯ ಸಂಸದೀಯ ಸ್ಥಾಯಿ ಸಮಿತಿ ಸಭೆ ಆಯೋಜನೆಗೊಂಡಿತ್ತು. [ಐಎಎಸ್ ಅಧಿಕಾರಿಗಳ ಬಡ್ತಿ, ವರ್ಗಾವಣೆ ಪಟ್ಟಿ]

ಮಧ್ಯಾಹ್ನ 2.30ಕ್ಕೆ ನಿಗದಿಯಾಗಿದ್ದ ಸಭೆ ಸರಿಯಾದ ಸಮಯಕ್ಕೆ ಆರಂಭವಾಯಿತು. ಆದರೆ, ಸರ್ಕಾರದ ಮುಖ್ಯಕಾರ್ಯದರ್ಶಿ ಜಾಧವ್ ಅವರು ಸಭೆಗೆ ಬಂದಿರಲಿಲ್ಲ. ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಪ್ರಕಾಶ ಹುಕ್ಕೇರಿ ಮತ್ತು ಕೆಲವು ಹಿರಿಯ ಅಧಿಕಾರಿಗಳು ಮಾತ್ರ ಸಭೆಯಲ್ಲಿದ್ದರು.

ಅರವಿಂದ ಜಾಧವ್ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದ ತಂಬಿದುರೈ ಅವರು ಅಸಮಾಧಾನ ವ್ಯಕ್ತಪಡಿಸಿ, ಸಭೆ ಮೊಟಕುಗೊಳಿಸಿ ನಿರ್ಗಮಿಸಿದರು. ಅವರು ವಿಧಾನಸೌಧದಿಂದ ಹೊರಹೋಗುವಾಗ ಅರವಿಂದ ಜಾಧವ್‌ ಎದುರಿಗೆ ಸಿಕ್ಕರು, ವಿಳಂಬಕ್ಕೆ ಕ್ಷಮೆ ಯಾಚಿಸಿದರು. ಆದರೆ, ಸಭೆ ಮಾತ್ರ ನಡೆಯಲಿಲ್ಲ.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಧ್ಯಮಗಳು ಜಾಧವ್‌ ಅವರಿಗಾಗಿ ಕಾಯುತ್ತಿದ್ದವು. ಸಂಜೆ ವೇಳೆಗೆ ವಿಧಾನಸೌಧದ ನೆಲ ಮಹಡಿ ಬಳಿ ಮಾಧ್ಯಮಗಳಿಗೆ ಜಾಧವ್ ಸಿಕ್ಕರು. ಆದರೆ, ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ.

ಮಾಧ್ಯಮದವರು ಅವರನ್ನು ಹಿಂಬಾಲಿಸಿದರು, ಇದನ್ನು ನೋಡಿದ ಜಾಧವ್ ಅವರು ಓಡಲು ಆರಂಭಿಸಿದರು, ಮೆಟ್ಟಿಲುಗಳನ್ನು ಹತ್ತಿ ಮೂರನೇ ಮಹಡಿಯ ತಮ್ಮ ಕಚೇರಿಗೆ ಹೋಗಿ ಬಾಗಿಲು ಹಾಕಿಕೊಂಡರು. ಅತ್ತ ಸಂಸದರು ಅರವಿಂದ ಜಾಧವ್ ಅವರ ಗೈರು ಹಾಜರಿ ಬಗ್ಗೆ ಸಂಸತ್ತಿನಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೂರು ಕೊಡಲು ಸಂಸದರು ನಿರ್ಧರಿಸಿದ್ದಾರೆ.

8 ಗಂಟೆಗೆ ಕಚೇರಿಗೆ ಬಂದಿದ್ದಾರೆ : ಶನಿವಾರ ಬೆಳಗ್ಗೆ ಅರವಿಂದ ಜಾಧವ್ ಅವರು 8 ಗಂಟೆಗೆ ಕಚೇರಿಗೆ ಆಗಮಿಸಿದ್ದಾರೆ. ವಿಧಾನಸೌಧ ಮತ್ತು ವಿಕಾಸೌಧದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಮಾಧ್ಯಮಗಳ ಭೇಟಿಗೆ ಅವಕಾಶ ನೀಡಿಲ್ಲ. ಕೆಲವು ಅಧಿಕಾರಿಗಳು ಮಾತ್ರ ಜಾಧವ್ ಅವರ ಜೊತೆಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Secretary Arvind Jadhav runs away to avoid media at the Vidhana Soudha on Friday. Arvind Jadhav took charge as Chief Secretary on December 31, 2015.
Please Wait while comments are loading...